
ಬೆಂಗಳೂರು (ಸೆ.7) : ಖಾಸಗಿ ಸಾರಿಗೆ ಉದ್ಯಮದ ಸಮಸ್ಯೆ ನಿವಾರಿಸಲು ಆಗಸ್ಟ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಹೀಗಾಗಿ ಮತ್ತೆ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ. ಬದಲಿಗೆ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಜುಲೈ ತಿಂಗಳಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಒಕ್ಕೂಟದಲ್ಲಿನ 30ಕ್ಕೂ ಹೆಚ್ಚಿನ ಸಂಘಗಳ ಪ್ರಮುಖರನ್ನು ಕರೆದು ಸಭೆಯನ್ನೂ ಮಾಡಲಾಗಿತ್ತು. ಅದಾದ ನಂತರ ಆಗಸ್ಟ್ 21ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಿ, ಒಕ್ಕೂಟದಲ್ಲಿನ 10 ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿದ್ದೆವು. ಆದರೆ, ಬಂದ್‌ಗೆ ಕರೆ ನೀಡಿರುವ ಒಕ್ಕೂಟ ಸಭೆಯನ್ನು ಬಹಿಷ್ಕರಿಸಿ, ಸಿಎಂಗೆ ಅವಮಾನ ಮಾಡಿತ್ತು ಎಂದರು.
ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ತೊಂದರೆ ನಿಜ: ಡಿ.ಕೆ. ಶಿವಕುಮಾರ್
ಈಗ ಮತ್ತೆ ಒಕ್ಕೂಟವು ಬೆಂಗಳೂರಿಗೆ ಬಂದ್‌ಗೆ ಕರೆ ನೀಡಿದೆ. ಆದರೆ, ಒಕ್ಕೂಟಕ್ಕೆ ಬಂದ್ ಹಿಂಪಡೆಯುವಂತೆ ಕೋರುವುದಿಲ್ಲ. ಬದಲಿಗೆ ಬೇಡಿಕೆ ಈಡೇರಿಸಿಕೊಳ್ಳುವ ಮನಸ್ಸಿದ್ದರೆ, ನನ್ನ ಕಚೇರಿಗೆ ಬರಬಹುದು. ಆದರೆ, ನಾನು ಸಭೆಗೆ ಆಹ್ವಾನಿಸುವುದಿಲ್ಲ. ಸೆ. 11ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಸಮಸ್ಯೆ ಉದ್ಭವವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸರ್ಕಾರದಿಂದ ಅಗ್ರಿಗೇಟರ್ ಮೊಬೈಲ್ ಆ್ಯಪ್ ಸಿದ್ಧಪಡಿಸುವುದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲಕರಿಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ, ಚಾಲಕರಿಗೆ ಕಡಿಮೆ ಬಡ್ಡಿದರದಲ್ಲಿ ಜಾತಿವಾರು ನಿಗಮಗಳಿಂದ ನೇರ ಸಾಲ ನೀಡುವುದು, ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ರಹದಾರಿ ನೀಡುವುದು, ಚಾಲಕರಿಗೆ ರಿಯಾಯಿತಿ ದರದಲ್ಲಿ ವಸತಿ ನೀಡುವುದು, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಾಲೇಜು ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸಾರಿಗೆ ಇಲಾಖೆಯ ಸಾರಥಿ ಅಡಿಯಲ್ಲಿ ನೋಂದಾಯಿಸಿಕೊಂಡಿರುವ 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರು. ಸಹಾಯಧನ ನೀಡುವಂತೆ ಕೋರಿದೆ. ಆದರೆ, ಅದಕ್ಕೆ ವಾರ್ಷಿಕ 4,370 ಕೋಟಿ ರು. ಖರ್ಚಾಗಲಿದೆ. ಹೀಗಾಗಿ ಆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.
ರಾಜ್ಯ ಸರ್ಕಾರಕ್ಕೆ ತಲೆನೋವಾದ ಖಾಸಗಿ ಸಾರಿಗೆ ಒಕ್ಕೂಟ; ಸೆಪ್ಟೆಂಬರ್ 11ಕ್ಕೆ ಬೆಂಗಳೂರು ಬಂದ್‌ಗೆ ಕರೆ!
ಅದರ ಜತೆಗೆ ಖಾಸಗಿ ಬಸ್‌ಗಳಿಗೆ ಶಕ್ತಿ ಯೋಜನೆ ವಿಸ್ತರಣೆ, ಜೀವಿತಾವಧಿ ತೆರಿಗೆ ಪಾವತಿಗೆ ಹಿಂದಿನ ವ್ಯವಸ್ಥೆ ಜಾರಿಗೊಳಿಸುವುದು, ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ಧರಿಸಬೇಕಿದ್ದು, ಆ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ರಾರಯಪಿಡೋ, ಓಲಾ, ಉಬರ್ ಸೇರಿದಂತೆ ಇನ್ನಿತರ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಒಕ್ಕೂಟದ ಸದಸ್ಯರು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಲಿಖಿತ ದೂರು ಹಾಗೂ ದಾಖಲೆಗಳನ್ನು ನೀಡಿದರೆ ಇಲಾಖಾ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ