
ಬೆಂಗಳೂರು (ಸೆ.29): ಕಾವೇರಿ ನದಿ ನೀರು ವಿವಾದ ಉಲ್ಭಣವಾಗುವ ಲಕ್ಷಣ ಕಾಣುತ್ತಿದ್ದಂತೆ ಇದನ್ನು ಕರ್ನಾಟಕ 32 ಬಿಜೆಪಿ ಸಂಸದರ (ಲೋಕಸಭೆ ಹಾಗೂ ರಾಜ್ಯಸಭೆ) ತಲೆಗೆ ಕಟ್ಟುವ ಪ್ರಯತ್ನ ಮಾಡುವಂಥ ಟ್ವೀಟ್ ಮಾಡಿದ್ದ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ. ರಾಜ್ಯದ ಜನರಿಗೆ ಸುಳ್ಳಾಡಬೇಡಿ, ಕರ್ನಾಟಕದ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಈಗಾಗಲೇ ಬಯಲಾಗಿದೆ ಎಂದಿರುವ ರಾಜೀವ್ ಚಂದ್ರಶೇಖರ್, ಇಡೀ ಕಾಂಗ್ರೆಸ್ ಪಕ್ಷದ ರಾಜಕೀಯ ಬರೀ ಸುಳ್ಳುಗಳ ಮೇಲೆ ನಿಂತಿದೆ ಎಂದು ಕಿಡಿಕಾರಿದ್ದಾರೆ. 'ನಿಮ್ಮ ಸರ್ಕಾರದ ಜವಾಬ್ದಾರಿಯನ್ನು ಬಿಜೆಪಿಯ ಸಂಸದರು ಹಾಗೂ ಕೇಂದ್ರ ಸರ್ಕಾರದ ಮೇಲೆ ಹಾಕುವುದು ನೀವು ಉತ್ತಮ ರಾಜಕೀಯ ತಂತ್ರ ಎಂದು ಭಾವಿಸಿರಬಹುದು. ಆದರೆ, ಇದು ನಿಮ್ಮ ಸಂಶಯಾಸ್ಪದ ರಾಜಕೀಯವನ್ನು ಮತ್ತಷ್ಟು ಬಹಿರಂಗ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಶುಕ್ರವಾರ ಸಂಜೆಯ ವೇಳೆಗೆ ತಮ್ಮ ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿದ ಸಿದ್ಧರಾಮಯ್ಯ, 'ನ್ಯಾಯಕ್ಕಾಗಿ ಕರ್ನಾಟಕದ ಕರೆ ಜೋರಾಗಿ ಮತ್ತು ಸ್ಪಷ್ಟವಾಗಿದೆ! ಕಾವೇರಿ ವಿಚಾರದಲ್ಲಿ 32 ಬಿಜೆಪಿ ಸಂಸದರು ಪ್ರಧಾನಿಯ ಜೊಯೆ ಮೌನವಹಿಸಿದ್ದಾರೆ. ನ್ಯಾಯಕ್ಕಾಗಿ ನಮ್ಮ ರಾಜ್ಯದ ಹೋರಾಟ ಮುಂದುವರಿಯುತ್ತದೆ! ನಮ್ಮ ಚುನಾಯಿತ ಪ್ರತಿನಿಧಿಗಳು ಕೇವಲ ಪ್ರಧಾನಿಯವರ ನಿಷ್ಕ್ರಿಯತೆಯನ್ನು ಸಮರ್ಥಿಸುವುದಕ್ಕೆ ಸೀಮಿತವಾಗಿದೆಯೇ? ನಮ್ಮ ಹೋರಾಟದ ಧ್ವನಿಗಳು ನಿಮ್ಮ ಕಿವುಡು ಕಿವಿಗಳಿಗೆ ಬಿದ್ದರೆ, ಈ ಒಕ್ಕೂಟ ಎನ್ನುವುದು ಅರ್ಥಪೂರ್ಣವೇ?' ಎಂದು ಬರೆದು ಚುನಾವಣೆಯ ವೇಳೆ ಬಿಜೆಪಿ ನಾಯಕರು ಮಾಡಿದ ಭಾಷಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ವಿಡಿಯೋದ ಆರಂಭದಲ್ಲಿ ಜೆಪಿ ನಡ್ಡಾ ಕಳೆದ ಚುನಾವಣಾ ಭಾಷಣದ ವೇಳೆ ಮಾತನಾಡಿದ್ದ ತುಣುಕು ಆರಂಭದಲ್ಲಿ ಬರುತ್ತದೆ. 2022ರಲ್ಲಿ ಬಿಜೆಪಿಯ ಹಲವು ನಾಯಕರಾದ ಜೆಪಿ ನಡ್ಡಾ ಹಾಗೂ ಅಮಿತ್ ಶಾ, ಚುನಾವಣೆಯ ಫಲಿತಾಂಶ ಕರ್ನಾಟಕದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದಿದ್ದರು. ಇಂದು ಕರ್ನಾಟಕ ಕಷ್ಟದಲ್ಲಿದೆ. ಆದರೆ, ಕೇಂದ್ರ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಸಂಕಷ್ಟಗಳನ್ನು ಆಲಿಸಲು ವಿಫಲವಾಗಿದೆ. 2007ರಲ್ಲಿ ಇದೇ ಪರಿಸ್ಥಿತಿ ಎದುರಾಗಿದ್ದಾಗ ಮನಮೋಹನ್ ಸಿಂಗ್‌ಗೆ ರಾಜ್ಯದ ಸಂಸದರು ಪತ್ರ ಬರೆದಿದ್ದರು. ಕೇಂದ್ರ ಸಚಿವರಾಗಿದ್ದ ಅಂಬರೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಆದರೆ, ಈಗ 32 ಮಂದಿ ಬಿಜೆಪಿ ಸಂಸದರು ಹಾಗೂ ನಾಲ್ವರು ಕೇಂದ್ರ ಸಚಿವರಿದ್ದರೂ, ಪ್ರಧಾನಿಗೆ ನಮ್ಮ ಸಮಸ್ಯೆ ತಿಳಿಸಲು ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಸುಮ್ಮನೆ ಕುಳಿತಿದೆ ಎಂದು ಆ ವಿಡಿಯೋದಲ್ಲಿ ತಿಳಿಸಲಾಗಿತ್ತು.
ಕಾಂಗ್ರೆಸ್‌ನಿಂದ ಓಲೈಕೆ ರಾಜಕಾರಣ; ಹಿಂದೂಯೇತರ ಸಮುದಾಯಗಳಿಗೆ ಮಾತ್ರ ಈ ಸೌಲಭ್ಯ: ಕೇಂದ್ರ ಸಚಿವ ವಾಗ್ದಾಳಿ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್ ಚಂದ್ರಶೇಖರ್, 'ನಿಮ್ಮ ಯುಪಿಎ/ಇಂಡಿ ಮೈತ್ರಿಕೂಟದ ಜೊತೆಗಾರ ಪಕ್ಷವಾಗಿರುವ ಡಿಎಂಕೆ ಮತ್ತು ನಿಮ್ಮ ರಾಜಕೀಯದ ಒತ್ತಡಕ್ಕೆ ಮಣಿದು ನಮ್ಮ ರೈತ ಸಹೋದರರಿಗೆ ಅಮೂಲ್ಯವಾದ ನೀರನ್ನು ಬಿಡುಗಡೆ ಮಾಡಿದಾಗ ನೀವು ಯಾರೊಬ್ಬರನ್ನೂ ಸಂಪರ್ಕ ಮಾಡರಲಿಲ್ಲ. ಗ್ಯಾರಂಟಿಗಳ ಅಶ್ವಾಸನೆ ನೀಡಿ ಜನರಿಂದ ನೀವು ಮತ ಹಾಕಿಸಿಕೊಂಡಿದ್ದೀರಿ. ಇತರರನ್ನು ದೂಷಿಸುವುದನ್ನು ನಿಲ್ಲಿಸಿ ಮತ್ತು ರೈತರು, ನಮ್ಮ ಕೃಷಿ ಆರ್ಥಿಕತೆ ಮತ್ತು ಕರ್ನಾಟಕ ಮತ್ತು ಬೆಂಗಳೂರಿನ ಜನರ ಜೀವನ ಮತ್ತು ಜೀವನೋಪಾಯವನ್ನು ಖಾತರಿಪಡಿಸಲು ಕಾರ್ಯನಿರ್ವಹಿಸಿ. ಭ್ರಷ್ಟ ಮತ್ತು ಅವಕಾಶವಾದಿ ಕಾಂಗ್ರೆಸ್ ರಾಜಕೀಯದ ಬಲಿಪೀಠದಲ್ಲಿ ಕರ್ನಾಟಕದ ಜನರಿಗೆ ದ್ರೋಹ ಮಾಡಬೇಡಿ. ನಾವು ನಿಮ್ಮನ್ನು ಬಿಡುವುದಿಲ್ಲ. ಸುಳ್ಳು ಹೇಳುವುದನ್ನು ನಿಲ್ಲಿಸಿ, ವಿಚಲಿತರಾಗುವುದನ್ನು ನಿಲ್ಲಿಸಿ ಮತ್ತು ನಮ್ಮ ರೈತರ ಜೀವನಕ್ಕೆ ಭರವಸೆ ನೀಡಲು ತಕ್ಷಣವೇ ಕಾರ್ಯನಿರ್ವಹಿಸಿ ಎಂದು ಬರೆದಿದ್ದಾರೆ.
ಡಿಎಂಕೆ ಒತ್ತಡಕ್ಕೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ