
ತಲಕಾವೇರಿ (ಅ.18): ಉಕ್ಕಿ ಬಾ... ಉಕ್ಕಿ ಬಾ... ಕಾವೇರಿ ಮಾತಾ ಉಕ್ಕಿ ಬಾ... ಎಂದು ಭಕ್ತರ ಜಯಘೋಷದ ನಡುವೆ ಕನ್ನಡ ನಾಡಿನ ಜೀವನದಿ ಕಾವೇರಿ ತವರು ತಲಕಾವೇರಿಯಲ್ಲಿ ನಿಗದಿಯಂತೆ ಶುಕ್ರವಾರ ಮಧ್ಯಾಹ್ನ 1.44ಕ್ಕೆ ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ದರ್ಶನ ನೀಡಿದಳು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಜರಿರಲಿಲ್ಲ.
ತಲಕಾವೇರಿಯ ಅರ್ಚಕ ಟಿ.ಎಸ್.ಗುರುರಾಜ್ ಆಚಾರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಯಿಂದ ಪೂಜಾ ಕೈಂಕರ್ಯ ನೆರವೇರಿತು. 15ಕ್ಕೂ ಅಧಿಕ ಅರ್ಚಕರು ಕುಂಕುಮಾರ್ಚನೆ, ಪುಪ್ಪಾರ್ಚನೆ ಮೂಲಕ ಕಾವೇರಿಗೆ ಪೂಜೆ ಸಲ್ಲಿಸಿದರು. ತೀರ್ಥೋದ್ಭವ ಆಗುತ್ತಿದ್ದಂತೆ ಅರ್ಚಕ ವೃಂದದವರಿಂದ ಭಕ್ತರ ಮೇಲೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಮೊದಲು ತೀರ್ಥವನ್ನು ಸಂಗ್ರಹಿಸಿ ಅಭಿಷೇಕ ಮಾಡಲಾಯಿತು.
ಬತ್ತದ ಪವಿತ್ರ ಕುಂಡಿಕೆ!: ತೀರ್ಥೋದ್ಭವ ಸಮಯ ಸಮೀಪಿಸುತ್ತಿದ್ದಂತೆ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಭಕ್ತರಿಂದ ನೂಕುನುಗ್ಗಲು ಉಂಟಾಯಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು ಬ್ಯಾರಿಕೇಡ್ ಭೇದಿಸಿ ಕಾವೇರಿ ಮಾತೆ ದರ್ಶನ ಪಡೆದರು. ಪವಿತ್ರ ಬ್ರಹ್ಮ ಕುಂಡಿಕೆಯಿಂದ ಭಕ್ತರಿಗೆ ವಿತರಿಸಲು ಶುಕ್ರವಾರ ಸಾವಿರಾರು ಲೀಟರ್ ತೀರ್ಥ ತೆಗೆಯಲಾಯಿತು. ಆದರೂ ಕೂಡ ಪುಟ್ಟ ಪವಿತ್ರ ತೀರ್ಥ ಕುಂಡಿಕೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು.
ಯದುವೀರ್, ಕೊಡವರು ಪಾದಯಾತ್ರೆ: ಭಾಗಮಂಡಲದಿಂದ ಅಸಂಖ್ಯಾತ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾದಯಾತ್ರೆಯ ಮೂಲಕ 9 ಕಿ.ಮೀ. ನಷ್ಟು ಕ್ರಮಿಸಿ ತಲಕಾವೇರಿಗೆ ಆಗಮಿಸಿದರು. ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಕ್ತರೊಂದಿಗೆ ಬರಿ ಕಾಲಿನಲ್ಲಿ ಪಾದಯಾತ್ರೆ ಮಾಡಿದರು. ಶಾಸಕರಾದ ಕೆ.ಎಸ್. ಪೊನ್ನಣ್ಣ, ಡಾ.ಮಂತರ್ ಗೌಡ, ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ ಗಣ್ಯರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ತಲಕಾವೇರಿಯಲ್ಲಿ ತೀರ್ಥೋದ್ಭವ ಅಂಗವಾಗಿ ಕ್ಷೇತ್ರದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ವೇದಿಕೆಯಲ್ಲಿ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮವನ್ನು ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಉದ್ಘಾಟಿಸಿದರು.
ತಲಕಾವೇರಿಯ ತೀರ್ಥೋದ್ಭವಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಭೇಟಿ ರದ್ದಾಯಿಯಿತು. ಬೆಂಗಳೂರಿನಿಂದ ಭಾಗಮಂಡಲಕ್ಕೆ ಹೆಲಿಕ್ಯಾಪ್ಟರ್ ಮೂಲಕ ಅವರು ಆಗಮಿಸಬೇಕಿತ್ತು. ಆದರೆ ಅಲ್ಲಿ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ದೇವಾಲಯ ಭೇಟಿಯನ್ನು ರದ್ದುಗೊಳಿಸಲಾಯಿತು. ಕಾವೇರಿ ಮಾತೆ ಎಲ್ಲರಿಗೂ ಒಳಿತುಂಟು ಮಾಡಲಿ ಎಂದು ಡಿಕೆಶಿ ಸಂದೇಶದ ಮೂಲಕ ಭಕ್ತರಿಗೆ ಶುಭ ಹಾರೈಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ