ಕಾವೇರಿ ಆರತಿ.. ಕೆಆರ್‌ಎಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿ: ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಡಿಕೆಶಿ

Published : Sep 27, 2025, 01:49 AM IST
DK Shivakumar

ಸಾರಾಂಶ

ಕಾವೇರಿ ನದಿಗೆ ಪ್ರಪ್ರಥಮ ಬಾರಿಗೆ "ಕಾವೇರಿ ಆರತಿ" ಮಾಡುವ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಮುನ್ನುಡಿ ಬರೆದರು.

ಮಂಡ್ಯ (ಸೆ.27): ಕನ್ನಡ ನಾಡಿನ ಜೀವನದಿ, ಧಾರ್ಮಿಕ, ಸಾಂಸ್ಕೃತಿಯ ಪ್ರತೀಕವಾಗಿರುವ ಕಾವೇರಿ ನದಿಗೆ ಪ್ರಪ್ರಥಮ ಬಾರಿಗೆ "ಕಾವೇರಿ ಆರತಿ" ಮಾಡುವ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಮುನ್ನುಡಿ ಬರೆದರು. ಕಾವೇರಮ್ಮನ ಒಡಲು ಸದಾ ತುಂಬಿರಬೇಕು. ಕೆಆರ್ ಎಸ್ ವರ್ಷ ಪೂರ್ತಿ ಭರ್ತಿಯಾಗಿರಬೇಕು. ನಾಡು ಸುಖ, ಶಾಂತಿ ಸಮೃದ್ಧಿಯಿಂದ ಕೂಡಿರಲೆಂದು ಡಿ.ಕೆ.ಶಿವಕುಮಾರ್ ಅವರು ಕಾವೇರಿ ಮಾತೆಗೆ ಆರತಿಯ ಜ್ಯೋತಿ ಬೆಳಗಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇದಕ್ಕೆ ಕೃಷ್ಣರಾಜಸಾಗರ ಸಾಕ್ಷಿಯಾಯಿತು.

ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡಿ, ತಾಯಿ ಕಾವೇರಿಗೆ ಆರತಿ ಬೆಳಗಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು. ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಶಂಖನಾದ, ಡೋಳ್ಳು, ನಗಾರಿ ಸದ್ದಿನೊಂದಿಗೆ, ವೇದ ಮಂತ್ರಗಳ ಪಠಣದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನೆರವೇರಿದ ಕಾವೇರಿ ಆರತಿ ನೆರದಿದ್ದವರನ್ನು ಮೂಕವಿಸ್ಮತರನ್ನಾಗಿಸಿತು. ಒಂದು ಕ್ಷಣ ಪ್ರವಾಸಿಗರಿಗೆ ಕಾಶಿಯೇ ಕಣ್ಣ ಮುಂದೆ ಹಾದುಹೋದಂತಹ ಅನುಭವ.

ಕರ್ನಾಟಕದಿಂದ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಪ್ರವಾಸಿಗರು ಕಾವೇರಿ ಆರತಿಯನ್ನು ಕಣ್ತುಂಬಿಕೊಂಡರು. ಸೆ.26ರಿಂದ ಅಕ್ಟೋಬರ್ 2ರವರೆಗೆ ಪ್ರತಿ ಸಂಜೆ ನೆರವೇರಲಿರುವ ಕಾವೇರಿ ಆರತಿ ಮೈಸೂರು ದಸರಾಗೆ ಹೊಸ ಮೆರುಗನ್ನು ತಂದುಕೊಟ್ಟಿತು.

ಕಾವೇರಿ ಪ್ರಾರ್ಥನೆ, ತೀರ್ಥ ಪೂಜೆ, ಚಾಮರ ಸೇವೆ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಸಂಪ್ರದಾಯ ಬದ್ಧವಾಗಿ ನೆರವೇರಿತು.‌ 13 ಜನರನ್ನೊಳಗೊಂಡ ವೈದಿಕರ ತಂಡ ಹಾಗೂ ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿದ್ದರು. ಮೊದಲು "ವಾತಾಪಿ ಗಣಪತಿಂ ಭಜೆ" ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಯಿತು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ಮಾಡಲಾಯಿತು.‌ ಕಾವೇರಿ ಸ್ತೋತ್ರದ ಮೂಲಕ ತೀರ್ಥ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡಲಾಯಿತು. ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ. ಮೂರು ದಿಕ್ಕಿಗೂ ಶಂಖನಾದ, ಧೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ ಮಾಡಲಾಯಿತು. ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನಗೊಂಡಿತು.

ಲಾಡು ವಿತರಣೆ

ಕಾವೇರಿ ಆರತಿ ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಉಚಿತವಾಗಿ ಲಾಡು ವಿತರಣೆ ಮಾಡಲಾಯಿತು. "ಕಾವೇರಿ ಆರತಿ" ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ತಾಯಿ ಪ್ರಸಾದವಾಗಿ ಲಾಡನ್ನು ಉಚಿತವಾಗಿ ಹಂಚಲು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲಾಡು ಮಾಡಿಸಿದ್ದರು. ಪ್ರತಿನಿತ್ಯ ಪ್ರವಾಸಿಗರಿಗೆ ಲಾಡು ವಿತರಣೆ ಮಾಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌