
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ 8.50 ಲಕ್ಷ ಹಣ ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧ ಬ್ಯಾಟರಾನಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆ ಹೊನ್ನಹಳ್ಳಿ ತಾಲೂಕಿನ ದೊಡ್ಡಹಳ್ಳಿ ಮೂಲದ ಯಶವಂತಪ್ಪ (57) ವಂಚಕ. ಬ್ಯಾಟರಾಯನಪುರ ನಿವಾಸಿ ಮುಕುಂದಪ್ಪ (30) ದುಡ್ಡು ಕಳೆದುಕೊಂಡವರು. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಯಶವಂತಪ್ಪ ಹಾಗೂ ಮುಕುಂದಪ್ಪ ದೂರದ ಸಂಬಂಧಿಗಳಾಗಿದ್ದಾರೆ. ಮುಕುಂದಪ್ಪ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅವರ ಪತ್ನಿ ಸರ್ಕಾರಿ ಉದ್ಯೋಗಿಯಾಗಿದ್ದರು. ಈ ವಿಚಾರ ತಿಳಿದಿದ್ದ ಯಶವಂತಪ್ಪ, ‘ನನಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಚಯವಿದ್ದು, ಅವರ ಮೂಲಕ ರೇಷ್ಮೆ ಮಂಡಳಿಯಲ್ಲಿ ಎಫ್‌ಡಿಎ ಕೆಲಸ ಕೊಡಿಸುತ್ತೇನೆ. ಇದಕ್ಕೆ 10 ಲಕ್ಷ ನೀಡಬೇಕಾಗುತ್ತದೆ ಎಂದು ನಂಬಿಸಿದ್ದ.
ಆರೋಪಿ ಮಾತು ನಂಬಿದ ಮುಕುಂದಪ್ಪ 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಲ ಮಾಡಿ ಆರೋಪಿಗೆ ಹಂತ-ಹಂತವಾಗಿ 8.50 ಲಕ್ಷ ಹಣ ನೀಡಿದ್ದರು. ಹಣ ಕೊಟ್ಟು ಹಲವು ತಿಂಗಳಾದರೂ ಕೆಲಸದ ಆದೇಶದ ಪ್ರತಿ ಬಂದಿರಲಿಲ್ಲ. ಆರೋಪಿಯನ್ನು ಪ್ರಶ್ನಿಸಿದರೆ ದಿನ ದೂಡುತ್ತಾ ಕಾಲ ಕಳೆಯುತ್ತಿದ್ದ. ಹಣ ವಾಪಸ್ ನೀಡುವಂತೆ ಒತ್ತಡ ಹೆಚ್ಚಾದಾಗ ಮಹೇಶ್ ಎಂಬಾತನಿಗೆ ಈ ಹಣ ಕೊಟ್ಟಿದ್ದು, ಆತ ವಂಚನೆ ಮಾಡಿದ್ದಾನೆ. ಈ ಸಂಬಂಧ ಹೊನ್ನಹಳ್ಳಿ ಠಾಣೆಗೆ ದೂರು ನೀಡಿರುವ ಬಗ್ಗೆ ಹೇಳಿದ್ದ.
ಮುಕುಂದಪ್ಪ ಅವರು ಯಶವಂತಪ್ಪನಿಗೆ ಹಣ ನೀಡಿದ್ದ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಠಾಣೆಗೆ ಇದೀಗ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ