
ಬೆಂಗಳೂರು(ಜು.29): ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಅಜಯ್ ಹಿಲೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ. ಆದೇಶದ ಪೂರ್ಣಪ್ರತಿ ಇನ್ನೂ ಲಭ್ಯವಾಗಿಲ್ಲ.
ಇಲಾಖೆ ತನಿಖೆಯಲ್ಲಿ ಅಜಯ್ ಹಿಲೋರಿ ಅವರಿಗೆ ಕ್ಲೀನ್ ಚಿಟ್ ದೊರೆತಿರುವುದನ್ನು ಆಧರಿಸಿ, ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಇದರೊಂದಿಗೆ ಅಜಯ್ ಹಿಲೋರಿಗೆ ರಿಲೀಫ್ ದೊರೆತಿದೆ.
ಐಎಂಎ ಗ್ರಾಹಕರಿಗೆ ಸಿಹಿಸುದ್ದಿ: 60 ಕೋಟಿ ಅಧಿಕ ಮೌಲ್ಯದ ಜುವೆಲ್ಲರಿ ಇ-ಹರಾಜು
ಹಿಲೋರಿ ಮೇಲೆ ಏನು ಆರೋಪ ಇತ್ತು?:
ಐಎಂಎ ಮತ್ತರದ ಸಮೂಹ ಸಂಸ್ಥೆಗಳು ಹೂಡಿಕೆದಾರರಿಂದ ನಾಲ್ಕು ಸಾವಿರ ಕೋಟಿ ರು. ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ಬಳಿಕ ವಂಚಿಸಿತ್ತು. ಈ ಪ್ರಕರಣದಲ್ಲಿ ಅಕ್ರಮಗಳನ್ನು ಮುಚ್ಚಿಡಲು ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಅಜಯ್ ಹಿಲೋರಿ 2017ರ ಜ.1ರಿಂದ 2018ರ ಅ.16ರ ನಡುವೆ ವಿವಿಧ ಹಂತಗಳಲ್ಲಿ ಐಎಂಎ ಕಂಪನಿ ನಿರ್ದೇಶಕರಿಂದ ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಅವರ ವಿರುದ್ಧ ತನಿಖೆ ನಡೆಸಲು 2020ರ ಜ.7ರಂದು ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ನಂತರ ಸಿಬಿಐ ತನಿಖೆ ನಡೆಸಿ, ಅಜಯ್ ಹಿಲೋರಿ ಅವರ ಹೆಸರನ್ನು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸೇರಿಸಿತ್ತು. ಅವರ ವಿರುದ್ಧದ ಪ್ರಾಸಿಕ್ಯೂಷನ್‌ಗೆ 2020ರ ಸೆ.9ರಂದು ಸರ್ಕಾರ ಪೂರ್ವಾನುಮತಿ ನೀಡಿತ್ತು. ಈ ಕ್ರಮ ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ