ಉಳ್ಳಾಲ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ 1.5 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಸಿಲುಕಿದ್ದ ‘ಪ್ರಿನ್ಸಸ್ ಮಿರಾಲ್’ ಸರಕು ಹಡಗು ಗುರುವಾರ ಮುಳುಗಡೆಯಾಗಿದ್ದು, ಹಡಗಿನಿಂದ ಅಪಾರ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ.
ಮಂಗಳೂರು (ಜೂ.24): ಉಳ್ಳಾಲ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ 1.5 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್ಕೆ ಸಿಲುಕಿದ್ದ ‘ಪ್ರಿನ್ಸಸ್ ಮಿರಾಲ್’ ಸರಕು ಹಡಗು ಗುರುವಾರ ಮುಳುಗಡೆಯಾಗಿದ್ದು, ಹಡಗಿನಿಂದ ಅಪಾರ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ. ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್‌ಗಳನ್ನು ಮಲೇಶಿಯಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಈ ನೌಕೆ ಮಂಗಳವಾರ ಸಮುದ್ರ ಮಧ್ಯೆ ಅಪಾಯಕ್ಕೆ ಸಿಲುಕಿತ್ತು. ನೌಕೆಯ ತಳಭಾಗದಲ್ಲಿ ರಂಧ್ರ ಉಂಟಾಗಿ ನೀರು ಒಳಪ್ರವೇಶಿಸುತ್ತಿತ್ತು.
ಮುಳುಗಡೆ ಭೀತಿಯಿಂದ ನೌಕೆಯ ಕ್ಯಾಪ್ಟನ್ ಕೋಸ್ಟ್ ಗಾರ್ಡ್‌ಗೆ ಸಂದೇಶ ರವಾನಿಸಿ ನೆರವು ಕೋರಿದ್ದರು. ಈ ನೌಕೆ ತೀರ ಹಳೆಯದಾದ ಕಾರಣ ನವಮಂಗಳೂರು ಬಂದರು ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇದರಿಂದಾಗಿ ನೌಕೆ ಇದ್ದಲ್ಲಿಗೆ ತೆರಳಿ ಕೋಸ್ಟ್‌ಗಾರ್ಡ್ ಸಿಬ್ಬಂದಿ 15 ಮಂದಿಯನ್ನು ರಕ್ಷಿಸಿದ್ದರು. ನೌಕೆಯ ತಳಭಾಗದ ರಂದ್ರ ಮುಚ್ಚಲು ಪ್ರಯತ್ನ ನಡೆಸಲಾಗಿದ್ದರೂ ಕಳೆದೆರಡು ದಿನಗಳಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದುದರಿಂದ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ನೌಕೆ ಸಂಪೂರ್ಣ ಮುಳುಗಿದೆ.
ಮುಸ್ಲಿಮರ ಮತ ಬೇಡ ಎಂದ ಬಿಜೆಪಿ ಶಾಸಕರಿಗೆ ಟೋಪಿ, ಹಸಿರು ಶಾಲು ಕೋರಿಯರ್..!
ತೈಲ ಸೋರಿಕೆ ತಡೆಗೆ ಸೂಚನೆ: ನೌಕೆ ಮುಳುಗಡೆಯಾಗಿರುವುದರಿಂದ ಅದರಲ್ಲಿದ್ದ ಅಗಾಧ ಪ್ರಮಾಣದ ತೈಲ ಸೋರಿಕೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದೆ. ಹಡಗಿನಲ್ಲಿರುವ ಫರ್ನಸ್ ಆಯಿಲ್ ಮತ್ತು ಎಂಜಿನ್ ಆಯಿಲ್ ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ಸೂಚಿಸಲಾಯಿತು. ಈ ಹಡಗಿನ ಸುತ್ತ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ತೈಲ ಹೊರತೆಗೆಯುವ ಕಾರ್ಯಾಚರಣೆಗೆ ಎಂಆರ್‌ಪಿಎಲ್ ಮತ್ತು ಎನ್‌ಎಂಪಿಟಿ ಸಂಸ್ಥೆಯವರು ತಮ್ಮಲ್ಲಿರುವ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಒಂದು ವೇಳೆ ತೈಲ ಸೋರಿಕೆಯಾಗಿ ಸಮುದ್ರ ದಡಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರುವಂತೆ ಹಾಗೂ ಯಾವುದೇ ಕಾರಣಕ್ಕೂ ಸೋರಿಕೆಯಾಗುವ ತೈಲ ನದಿಗೆ ಸೇರದಂತೆ ಎಚ್ಚರಿಕೆ ವಹಿಸಲು ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರನ್ನು ಚೀಫ್ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ.
ಮುಳುಗಡೆಯಾದ ನೌಕೆಯಿಂದ ರಕ್ಷಿಸಲ್ಪಟ್ಟ15 ಮಂದಿ ಸಿರಿಯಾ ಪ್ರಜೆಗಳನ್ನು ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರಕ್ಕೆ ಕಳುಹಿಸಲಾಗುವುದು. ದೆಹಲಿಯ ವಿದೇಶಾಂಗ ವಿಭಾಗದ ಒಪ್ಪಿಗೆ ಬಳಿಕ ಅವರನ್ನು ಸಿರಿಯಾಗೆ ಕಳುಹಿಸಲಾಗುತ್ತದೆ.
ಕಾಂಗ್ರೆಸ್ ಹುಟ್ಟಿಕೊಂಡಿರುವುದೇ ದೇಶದ ಸಂಪತ್ತು ಕೊಳ್ಳೆ ಹೊಡೆಯೋದಕ್ಕೆ: ವೇದವ್ಯಾಸ ಕಾಮತ್
ಪ್ರಾಥಮಿಕ ಸಮೀಕ್ಷೆ: ತೈಲವನ್ನು ಹೊರತೆಗೆಯುವ ನಿಟ್ಟಿನಲ್ಲಿ ಸಿಂಗಾಪುರದ ಸ್ಮಿತ್ ಎಕ್ಸ್‌ಪರ್ಚ್ ಕಂಪೆನಿ ಮೂಲಕ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ತೈಲವನ್ನು ಹೊರತೆಗೆಯುವುದು ಹೇಗೆ ಮತ್ತು ನೌಕೆಯನ್ನು ಮುಂದೇನು ಮಾಡಬಹುದು ಎಂಬ ಬಗ್ಗೆ ಈ ಸಂಸ್ಥೆ ಸಲಹೆ ನೀಡಲಿದೆ.