ಮಣ್ಣು ಉಳಿಸುವ ಕಾರ್ಯನೀತಿಗಳು ಜಾರಿಗೊಳ್ಳುವವರೆಗೂ ಪ್ರತಿ ನಿತ್ಯ 10 ನಿಮಿಷ ಮಣ್ಣಿನ ಸಂರಕ್ಷಣೆ ಬಗ್ಗೆ ಸಾರ್ವಜನಿಕರು ಮಾತನಾಡಬೇಕು ಎಂದು ಈಶ ಫೌಂಡೇಶನ್‌ನ ಸದ್ಗುರು ಕರೆ ಕೊಟ್ಟಿದ್ದಾರೆ.
ಬೆಂಗಳೂರು (ಜೂ.24): ಮಣ್ಣು ಉಳಿಸುವ ಕಾರ್ಯನೀತಿಗಳು ಜಾರಿಗೊಳ್ಳುವವರೆಗೂ ಪ್ರತಿ ನಿತ್ಯ 10 ನಿಮಿಷ ಮಣ್ಣಿನ ಸಂರಕ್ಷಣೆ ಬಗ್ಗೆ ಸಾರ್ವಜನಿಕರು ಮಾತನಾಡಬೇಕು ಎಂದು ಈಶ ಫೌಂಡೇಶನ್‌ನ ಸದ್ಗುರು ಕರೆ ಕೊಟ್ಟಿದ್ದಾರೆ.
100 ದಿನಗಳ ಮಣ್ಣು ಉಳಿಸಿ ಅಭಿಯಾನ ಮುಕ್ತಾಯಗೊಳಿಸಿ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮಾತನಾಡಿದ ಅವರು, ಕೃಷಿ ಮಣ್ಣಿನಲ್ಲಿ ಜೈವಿಕ ಅಂಶವನ್ನು ಶೇ.3ಕ್ಕಿಂತ ಹೆಚ್ಚುಗೊಳಿಸುವುದೇ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಜೈವಿಕಾಂಶ ಹೆಚ್ಚಳಕ್ಕೆ ಸರ್ಕಾರಗಳು ಅಗತ್ಯ ಕಾರ್ಯನೀತಿ ರೂಪಿಸಬೇಕಿದೆ. ಹೀಗಾಗಿ, ಮಣ್ಣು ಉಳಿಸಿ ಅಭಿಯಾನವನ್ನು ಇಲ್ಲಿಗೇ ನಿಲ್ಲಿಸದೆ ಸರ್ಕಾರಗಳು ಕಾರ್ಯನೀತಿ ಜಾರಿಗೊಳಿಸುವರೆಗೂ ನಿತ್ಯ 10 ನಿಮಿಷ ಮಣ್ಣಿನ ಸಂರಕ್ಷಣೆ ಬಗ್ಗೆ ಹೊಸಬರು, ಅರ್ಹರ ಬಳಿ ಮಾತನಾಡಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ವಿವಿಧ ದೇಶಗಳಿಗೆ ಭೇಟಿ: ಅಭಿಯಾನದ 100 ದಿನಗಳಲ್ಲಿ 600ಕ್ಕೂ ಹೆಚ್ಚು ಮಣ್ಣು ಉಳಿಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 27 ದೇಶಗಳ ಬೈಕ್ ಪ್ರಯಾಣ ತುಂಬಾ ಅಪಾಯಕಾರಿಯಾಗಿತ್ತು. ಮುಂದಿನ ಹೋರಾಟದ ಭಾಗವಾಗಿ ಇಂಗ್ಲೆಂಡ್, ಉತ್ತರ ಮತ್ತು ದಕ್ಷಿಣ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಲಾಗುವುದು. ಮಣ್ಣನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಸ್ಪಷ್ಟವಾದ ಕಾರ್ಯನೀತಿಗಳನ್ನು ಆ ದೇಶಗಳಲ್ಲಿ ಜಾರಿಗೊಳಿಸಲು ಒತ್ತಾಯಿಸಲಾಗುತ್ತದೆ ಎಂದರು.
ಬೆಕ್ಕಿಗೆ ಗಂಟೆ ಕಟ್ಟೋಕೆ ಒಬ್ಬ ಮುಠ್ಠಾಳ ಬೇಕಿತ್ತು, ಅದಕ್ಕಾಗಿ ನಾನೇ ಬಂದಿದ್ದೇನೆ: ಸದ್ಗುರು
ಅಭಿಯಾನ 320 ಕೋಟಿ ಜನರಿಗೆ ತಲುಪಿದೆ: 100 ದಿನಗಳ ಅಭಿಯಾನವು 320 ಕೋಟಿ ಜನರಿಗೆ ತಲುಪಿದೆ. 27 ದೇಶಗಳಲ್ಲಿ ಸಂಚರಿಸಿ, 598 ಕಾರ್ಯಕ್ರಮ ನಡೆಸಲಾಗಿದೆ. ಈವರೆಗೂ 74 ದೇಶಗಳು, ಕರ್ನಾಟಕ ಸೇರಿದಂತೆ ಭಾರತದ 9 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳುವುದಾಗಿ ಒಡಂಬಡಿಕೆ ಮಾಡಿಕೊಂಡಿವೆ ಎಂದು ಈಶ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಮಣ್ಣು ಉಳಿಸಿ’ ಅಭಿಯಾನಕ್ಕೆ 100 ದಿನ: ಮಣ್ಣು ಉಳಿಸುವ ನಿಟ್ಟಿನಲ್ಲಿ ಮುಂದಿನ ಒಂದು ದಶಕದಲ್ಲಿ ಮಹತ್ವದ ಬದಲಾವಣೆಯಾಗಬೇಕಿದ್ದು, ತಡ ಮಾಡಿದಷ್ಟು ಹೆಚ್ಚಿನ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಬೇಕು ಎಂದು ಈಶಾ ಫೌಂಡೇಶನ್ ಸದ್ಗುರು ತಿಳಿಸಿದರು.
Save Soil Movement: ಬೆಂಗಳೂರಿಗೆ ಬಂತು ಸದ್ಗುರು ರ್ಯಾಲಿ: ಇಂದು ಬೃಹತ್ ಸಮಾವೇಶ
ಕೊಯಂಬತ್ತೂರಿನ ಸುಲೂರು ವಾಯುನೆಲೆಯಲ್ಲಿ ನಡೆದ ಮಣ್ಣು ಉಳಿಸಿ ಅಭಿಯಾನ 100 ನೇ ದಿನ ಹಾಗೂ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಹಾನಿಯನ್ನು ತಡೆದು ಮುಂದಿನ ತಲೆ ಮಾರಿಗೆ ನೀಡಬೇಕಾಗಿರುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸದ್ಯ ಮಣ್ಣಿನ ರಕ್ಷಣೆಯ ತುರ್ತು ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ. ಮುಂದಿನ 10 ರಿಂದ 15 ವರ್ಷಗಳಲ್ಲಿ ಮಣ್ಣಿನ ಸಂರಕ್ಷಣೆ ಸಾಧ್ಯವಾಗದಿದ್ದರೆ ಮತ್ತೆಂದೂ ಸಾಧ್ಯವಾಗುವುದಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳನ್ನು ಸಾರ್ವಜನಿಕರು ಒತ್ತಾಯಿಸಬೇಕು ಎಂದು ಕರೆಕೊಟ್ಟರು.