
ವಿಧಾನಸಭೆ (ಡಿ.18): ವಿಧಾನಸಭಾ ಅಧಿವೇಶನದಲ್ಲಿ ಇಂದು ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರದ ಕುರಿತು ಶಾಸಕ ಹರೀಶ್ ಪೂಂಜಾ ಅವರು ಪ್ರಶ್ನೆ ಎತ್ತಿದರು. ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಳಿತವಾಗುತ್ತಿರುವುದರಿಂದ ಶಾಲೆಗಳಲ್ಲಿ ವಿತರಣೆಗೆ ತೊಂದರೆಯಾಗುತ್ತಿದೆ ಎಂಬ ವಿಷಯ ಸದನದ ಗಮನಕ್ಕೆ ಬಂತು. ಈ ವೇಳೆ ಮಾತನಾಡಿದ ಸ್ಪೀಕರ್ ಹಾಗೂ ಇತರ ಸದಸ್ಯರು, ಮೊಟ್ಟೆಯ ದರವು ವರ್ಷಪೂರ್ತಿ ಒಂದೇ ರೀತಿ ಇರುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಲಹೆ ನೀಡಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 'ಮೊಟ್ಟೆ ದರದ ಬಗ್ಗೆ ನನಗೂ ಸಾಕಷ್ಟು ಒತ್ತಡಗಳು ಬಂದಿವೆ. ಪ್ರಸ್ತುತ 5 ರೂಪಾಯಿ ನೀಡಿ ಮೊಟ್ಟೆ ಖರೀದಿ ಮಾಡಲಾಗುತ್ತಿದೆ. ಆದರೆ ಮೊಟ್ಟೆ ದರವನ್ನು ನಿಯಂತ್ರಿಸುವುದು ಕಷ್ಟ ನಾವು ಕೋಳಿಗೆ ಹೋಗಿ ಚೀಪ್ ಆಗಿ (ಕಡಿಮೆ ಬೆಲೆಗೆ) ಮೊಟ್ಟೆ ಇಡು ಎಂದು ಹೇಳಲು ಆಗುವುದಿಲ್ಲ' ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದ ಮಕ್ಕಳ ಪೌಷ್ಟಿಕ ಆಹಾರಕ್ಕಾಗಿ ಅಜೀಂ ಪ್ರೇಮ್‌ಜಿ ಅವರು 1591 ಕೋಟಿ ರೂಪಾಯಿಗಳ ಬೃಹತ್ ನೆರವು ನೀಡುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಇಷ್ಟು ದೊಡ್ಡ ಮೊತ್ತದ ನೆರವು ಸಿಗುತ್ತಿರುವಾಗ ಮೊಟ್ಟೆಯ ದರ ಹೆಚ್ಚಾಗದಂತೆ ಮತ್ತು ಒಂದೇ ದರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಿ ಎಂದು ಸೂಚಿಸಿದರು.
ಶಿಕ್ಷಕರ ವಿತರಣೆ ಶಿಕ್ಷಕರಿಗೆ ಹೊರೆ:
ಮೊಟ್ಟೆ ವಿತರಣೆಯ ಜವಾಬ್ದಾರಿಯಿಂದ ಶಿಕ್ಷಕರಿಗೆ ಹೊರೆಯಾಗುತ್ತಿದೆ ಎಂದು ಜೆಡಿಎಸ್ ಶಾಸಕ ಬಾಲಕೃಷ್ಣ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ನಾರಾಯಣಸ್ವಾಮಿ ಅವರು, 'ಮೊಟ್ಟೆ ದರ ಜಾಸ್ತಿಯಾದಾಗ ಶಿಕ್ಷಕರು ಮಕ್ಕಳಿಗೆ ಮೊಟ್ಟೆ ನೀಡಲು ಕಷ್ಟಪಡುತ್ತಾರೆ. ಶಾಲೆಯಲ್ಲಿ ಮಕ್ಕಳ ಹಾಜರಾತಿ 100% ಇದ್ದಾಗ ಬಜೆಟ್ ಮತ್ತು ವಿತರಣೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದು ಸಮಸ್ಯೆಯನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಮೊಟ್ಟೆ ದರ ಸ್ಥಿರವಾಗಿರುವಂತೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಶಿಕ್ಷಣ ಕ್ಷೇತ್ರದ ಚರ್ಚೆಗೆ ಎರಡು ದಿನ ಮೀಸಲಿಡಲು ಪಕ್ಷಾತೀತ ಒತ್ತಾಯ
ಶಿಕ್ಷಣ ಇಲಾಖೆಯ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಲು ಕೇವಲ ಅಲ್ಪ ಸಮಯ ಸಾಕಾಗುವುದಿಲ್ಲ ಎಂದು ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಸುರೇಶ್ ಗೌಡ ಹಾಗೂ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಸೇರಿದಂತೆ ಹಲವರು ಆಗ್ರಹಿಸಿದರು. ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಅಧಿವೇಶನದಲ್ಲಿ ಕನಿಷ್ಠ ಎರಡು ದಿನಗಳ ಕಾಲ ಸಮಯ ಮೀಸಲಿಡಬೇಕೆಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪಕ್ಷಾತೀತವಾಗಿ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ