ನಾಮಪತ್ರ ಸಲ್ಲಿಕೆ ಅಂತ್ಯ, ಕೊನೇ ದಿನ ಗೊಂದಲ, ಗದ್ದಲ

By Kannadaprabha NewsFirst Published Aug 24, 2021, 8:34 AM IST
Highlights
  • ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೆ ಸೆ.3ರಂದು ನಡೆಯಲಿರುವ ಚುನಾವಣೆ
  • ನಾಮಪತ್ರ ಸಲ್ಲಿಸುವ ಕೊನೇ ದಿನವಾದ ಸೋಮವಾರ ಪಾಲಿಕೆ ಆವರಣ ಸಾಕಷ್ಟುಗೊಂದಲ, ಗೌಜು

 ಬೆಂಗಳೂರು (ಆ.24):  ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೆ ಸೆ.3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೇ ದಿನವಾದ ಸೋಮವಾರ ಪಾಲಿಕೆ ಆವರಣ ಸಾಕಷ್ಟುಗೊಂದಲ, ಗೌಜು, ಗದ್ದಲಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಬಹುತೇಕ ಅಭ್ಯರ್ಥಿಗಳಿಗೆ ಭಾನುವಾರ ತಡರಾತ್ರಿ ಟಿಕೆಟ್‌ ಖಾತ್ರಿ ಪಡಿಸಿದ್ದೇ ಈ ಗೊಂದಲಗಳಿಗೆ ಕಾರಣವಾಯಿತು.

ತಡರಾತ್ರಿವರೆಗೆ ಕಾದು ಟಿಕೆಟ್‌ ಗಿಟ್ಟಿಸಿಕೊಂಡ ಅಭ್ಯರ್ಥಿಗಳು ಬೆಳಗ್ಗೆ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ದಿಢೀರ್‌ ಚುನಾವಣಾಧಿಕಾರಿಯತ್ತ ದೌಡಾಯಿಸಿದ್ದರಿಂದ ಪಾಲಿಕೆ ಹಾಗೂ ಅದರ ವಲಯ ಕಚೇರಿಗಳ ಮುಂದೆ ಭಾರೀ ಜನಜಂಗುಳಿಯೇ ಸೇರಿತ್ತು. ಧಾರವಾಡದಲ್ಲಿ ರಾತ್ರಿ 7 ಗಂಟೆವರೆಗೂ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಿತು. ಈ ಕೊನೇ ಕ್ಷಣದ ಕಸರತ್ತಿನಿಂದಾಗಿ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿಯುವ ವೇಳೆ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಹೈರಾಣಾಗಬೇಕಾಯಿತು. ಕಲಬುರಗಿಯಲ್ಲಿ ನಾಮಪತ್ರ ಸಲ್ಲಿಕೆಯಿಂದಾಗಿ ಪಾಲಿಕೆಕಚೇರಿಗಳ ಮುಂದೆ ಜನಸಾಗರವೇ ಸೇರಿತ್ತು.

ಅನಾರೋಗ್ಯದಿಂದ ತಪ್ಪಿದ ಟಿಕೆಟ್‌: ಧಾರವಾಡದಲ್ಲಿ ಸುಮಾರು ಮೂರು ದಶಕಗಳಿಂದ ಪಕ್ಷಕ್ಕಾಗಿ ದುಡಿದು ಈಗಲಾದರೂ ಪಾಲಿಕೆ ಸದಸ್ಯನಾಗುವ ಕನಸು ಕಂಡಿದ್ದ ಕಾಂಗ್ರೆಸ್‌ ಮುಖಂಡ ಆನಂದ ಜಾಧವಗೆ ದಿಢೀರ್‌ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ 13ನೇ ವಾರ್ಡ್‌ಗೆ ಅವರ ಬದಲು ಮತ್ತೊಬ್ಬರಿಗೆ ಪಕ್ಷದಿಂದ ಬಿ ಫಾರಂ ನೀಡಲಾಯಿತು.

ಡಿ.ಕೆ. ಶಿವಕುಮಾರ್‌ ಆಪ್ತರಾದ ಜಾಧವ ಈ ಬಾರಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸೋಮವಾರ ಇನ್ನೇನು ನಾಮಪತ್ರ ಸಲ್ಲಿಸಬೇಕಿತ್ತು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಾಮಪತ್ರ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವ ವೇಳೆ ಹೃದಯಾಘಾತ ಉಂಟಾಗಿದ್ದರಿಂದ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ವಾರ್ಡ್‌ನಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಬಂಡಾಯಕ್ಕೆ ಸಿದ್ಧವಾಗಿದ್ದ ಹೇಮಂತ ಗುರ್ಲಹೊಸೂರ ಅವರಿಗೆ ಬಿ ಫಾರಂ ನೀಡಲಾಯಿತು.

click me!