
ಕ್ಯಾಲಿಫೋರ್ನಿಯಾ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಸಾಕೇತ್ ಶ್ರೀನಿವಾಸಯ್ಯ (24) ಎಂಬ ಯುವಕ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದು, ಕುಟುಂಬದವರು ಹಾಗೂ ಸ್ನೇಹಿತರು ಆತಂಕ್ಕೀಡಾಗಿದ್ದಾರೆ.
ಸಾಕೇತ್ ಕ್ಯಾಲಿಫೋರ್ನಿಯಾದ ಪ್ರಸಿದ್ಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ (UC Berkeley) ನಲ್ಲಿ ಎಂಎಸ್ (MS) ಪದವಿ ವ್ಯಾಸಂಗ ಮಾಡುತ್ತಿದ್ದು, ಸಿಕ್ಕಿರುವ ಮಾಹಿತಿಯಂತೆ ಫೆಬ್ರವರಿ 12ರಂದು ಅವರು ಕ್ಯಾಲಿಫೋರ್ನಿಯಾದ ಟಿಲ್ಡೆನ್ ರೀಜನಲ್ ಪಾರ್ಕ್ ನೊಳಗಿನ ಕೆರೆಯ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ. ಅದಾದ ಬಳಿಕ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ, ಸಾಕೇತ್ ನಾಪತ್ತೆಯಾದ ವಿಚಾರವನ್ನು ಭಾರತೀಯ ರಾಯಭಾರಿ ಕಚೇರಿಗೂ ತಿಳಿಸಲಾಗಿದೆ, ಹುಡುಕಾಟ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ, ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಾಕೇತ್ ಅವರ ತಂದೆ ತುಮಕೂರಿನವರಾಗಿದ್ದು ಹಾಗೂ ತಾಯಿ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಸಾಕೇತ ಅಮೆರಿಕಾಕ್ಕೆ ತೆರಳಿದ್ದು, ಪಂಜಾಬ್ ಮೂಲದ ಯುವಕನೊಂದಿಗೆ ರೂಮ್‌ಮೇಟ್ ಆಗಿದ್ದ. ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಸಾಕೇತ್ ಉತ್ತಮ ಸಂಬಂಧ ಹೊಂದಿದ್ದ.
ಆರತಿ ಕೃಷ್ಣ ಅವರ ಪ್ರಕಾರ, ಭಾನುವಾರವರೆಗೆ ಸಾಕೇತ್ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಸೋಮವಾರ ತನ್ನ ತಾಯಿಗೆ ಫೋನ್ ಮಾಡಿದ್ದು, ಬಳಿಕ ತಾಯಿ ವಾಪಸ್ ಕರೆ ಮಾಡಿದಾಗ ಸಾಕೇತ್ ಕರೆ ಸ್ವೀಕರಿಸಿಲ್ಲ. ಅದಾದ ನಂತರದಿಂದ ಆತನ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಕುಟುಂಬದವರು ಈ ಚಿಂತೆಗೀಡಾಗಿದ್ದಾರೆ.
ಸಾಕೇತ್ ಪೋಷಕರು ಅನಿವಾಸಿ ಭಾರತೀಯ ಸಂಘವನ್ನು ಸಂಪರ್ಕಿಸಿದ್ದು, ಹುಡುಕಾಟಕ್ಕೆ ಹೆಚ್ಚಿನ ಸಹಕಾರ ಕೋರಿದ್ದಾರೆ. ಸ್ಥಳೀಯ ಪೊಲೀಸ್ ಇಲಾಖೆ, ವಿಶ್ವವಿದ್ಯಾಲಯದ ಆಡಳಿತ ಮತ್ತು ಸ್ವಯಂಸೇವಕ ತಂಡಗಳು ಸೇರಿ ಸಾಕೇತ್ ಪತ್ತೆಗೆ ಪ್ರಯತ್ನ ನಡೆಸುತ್ತಿವೆ. ಈ ಘಟನೆ ಕರ್ನಾಟಕ ಹಾಗೂ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಸಮುದಾಯದಲ್ಲಿ ತೀವ್ರ ಆತಂಕ ಹುಟ್ಟಿಸಿದ್ದು, ಸಾಕೇತ್ ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ