
ಬೆಂಗಳೂರು (ನ.6): ರಾಜ್ಯದಲ್ಲಿ ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿಗೆ ಆಗ್ರಹಿಸಿ ರೈತರು ತೀವ್ರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಲೆ ನಿಗದಿ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ ಅ.31ಕ್ಕೆ ಮುಕ್ತಾಯಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಆನ್ಲೈನ್ ಸಮೀಕ್ಷೆ ಅಂಕಿ-ಅಂಶಗಳ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಲಿದೆ. ಈ ವೇಳೆ ಸಮೀಕ್ಷೆ ಮುಗಿಸಿ ಅಂತಿಮ ವರದಿ ಸಲ್ಲಿಸಲು ಆಯೋಗಕ್ಕೆ ಸೂಚನೆ ನೀಡಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರು.ಬೆಲೆ ನಿಗದಿಗೊಳಿಸಿ ಕಬ್ಬು ಅರೆಯುವಿಕೆ ಪ್ರಾರಂಭಿಸಬೇಕು. ಬೆಲೆ ನಿಗದಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಸೇರಿ ವಿವಿಧೆಡೆ ಹೋರಾಟ ತೀವ್ರತೆ ಪಡೆಯುತ್ತಿದೆ. ಹೀಗಾಗಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಲೆ ನಿಗದಿ ಬಗ್ಗೆ ರಾಜ್ಯ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಒಳಮೀಸಲಾತಿ ಅನುಷ್ಠಾನ ಕುರಿತು ನೂತನ ಕಾಯ್ದೆ ಜಾರಿ ಸಂಬಂಧ ಕರಡು ನಿಯಮಗಳಿಗೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಒಂದು ಹಂತದ ಸಭೆ ನಡೆಸಿದ್ದಾರೆ. ಸಂಪುಟ ಸಭೆಯಲ್ಲಿ ಕರಡು ನಿಯಮಗಳನ್ನು ಸಿದ್ಧಪಡಿಸಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ಬಳಿಕ ಕಾಯಿದೆ ಜಾರಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಗುರುವಾರದ ಸಂಪುಟ ಸಭೆಯಲ್ಲಿ ಕರ್ನಾಟಕ ನವೋದ್ಯಮ ನೀತಿ -2025-30 ಸೇರಿ ವಿವಿಧ ನೀತಿ ಹಾಗೂ ಬಿಲ್‌ಗಳಿಗೆ ಸಂಪುಟ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
ಬೆಳಗಾವಿ ಅಧಿವೇಶನ ದಿನಾಂಕ ನಿಗದಿ?
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಡಿ.8 ರಿಂದ ಡಿ.19 ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಆದರೆ, ಅಧಿಕೃತ ದಿನಾಂಕದ ಬಗ್ಗೆ ಗುರುವಾರದ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಂಭವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ