
ಬೆಂಗಳೂರು (ಮಾ.13): ಮರ್ಯಾದೆಗೇಡು ಹತ್ಯೆ ಹಾಗೂ ಜಾತಿ ಕಾರಣಕ್ಕೆ ಮದುವೆಗೆ ಅಡ್ಡಿಪಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಿ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ಒದಗಿಸುವ ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಈ ಅಧಿವೇಶನದಲ್ಲೇ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ, ಅಂತರ್‌ಜಾತಿ ವಿವಾಹ ಕಾರಣಕ್ಕೆ ಆಗುವ ಹಲ್ಲೆ, ಜಾತಿ ದ್ವೇಷ ತಡೆಯಲು ಸರ್ಕಾರ ಈ ಮಹತ್ವದ ಕಾಯಿದೆ ತರಲು ಮುಂದಾಗಿದೆ. ‘ಕರ್ನಾಟಕ ವಿವಾಹ ಮತ್ತು ಸಂಗಾತಿ ಆಯ್ಕೆ ಸ್ವಾತಂತ್ರ್ಯ ಹಾಗೂ ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ವಿಧೇಯಕ-2026’ ಹೆಸರಿನ ‘ಇವ ನಮ್ಮವ ಇವ ನಮ್ಮವ’ ವಿಧೇಯಕಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಅಂತರ್ಜಾತಿ ವಿವಾಹ ಆದವರನ್ನು ಗೌರವದ ಹೆಸರಿನಲ್ಲಿ ಹತ್ಯೆ, ಹಲ್ಲೆ ಅಥವಾ ಕಿರುಕುಳ ನೀಡುವುದು. ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ ಎಂದು ಮಾಡಿ ಅಂತರ್‌ಜಾತಿಯ ವಿವಾಹವನ್ನು ಯಾವುದೇ ರೂಪದಲ್ಲಿ ವಿರೋಧಿಸಿದರೂ ಅಂಥವರಿಗೆ ಶಿಕ್ಷೆ ಒದಗಿಸಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಅಂತರ್‌ಜಾತಿ ವಿವಾಹ ಆದ ಜೋಡಿಗೆ ರಕ್ಷಣೆ ಒದಗಿಸುವುದು ಪೊಲೀಸರ ಜವಾಬ್ದಾರಿ. ಇದಕ್ಕಾಗಿ ಸುರಕ್ಷಿತ ಮನೆಗಳ ಸ್ಥಾಪನೆ ಮಾಡಬೇಕು. ಅಂತರ್‌ಜಾತಿ ಮದುವೆ ಕಾರಣಕ್ಕೆ ನಡೆಯುವ ಅಪರಾಧಗಳನ್ನು ವಿಚಾರಣೆ ನಡೆಸಿ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಸಹಾಯವಾಣಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಮದುವೆಯ ಭರವಸೆ ನೀಡಿ ಯುವತಿ ಜತೆ ಲೈಂಗಿಕ ಸಂಪರ್ಕ ನಡೆಸಿ ಬಳಿಕ ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿದರೆ ಅಂತಹ ಪ್ರಕರಣವನ್ನು ಅತ್ಯಾ೧ಚಾರ ಎಂದು ಪರಿಗಣಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಮನೆಯವರ ಒತ್ತಡ ಅಥವಾ ಇತರೆ ಜಾತಿ ಆಧಾರಿತ ಕಾರಣ ಸೇರಿ ಜಾತಿ ಆಧಾರಿತ ಯಾವುದೇ ನೆಪ ನೀಡಿ ಮದುವೆ ನಿರಾಕರಿಸಿದರೂ 5 ವರ್ಷಕ್ಕಿಂತ ಕಡಿಮೆ ಇಲ್ಲದ ಹಾಗೂ ಜೀವಾವಧಿವರೆಗೆ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ವೇಳೆ ಜಾತಿ ಕಾರಣಕ್ಕಾಗಿ ಮದುವೆ ನಿರಾಕರಿಸುತ್ತಿಲ್ಲ ಎನ್ನುವುದಾದರೆ ಅದನ್ನು ಸಾಬೀತುಪಡಿಸಬೇಕು. ಇನ್ನು ಯುವತಿ ಬೇರೆ ಒತ್ತಡಗಳಿಗೆ ಮದುವೆ ನಿರಾಕರಿಸಿದರೆ ಈ ನಿಯಮ ಅನ್ವಯ ಆಗುವುದಿಲ್ಲ. ಇದಕ್ಕೆ ಬಿಎನ್‌ಎಸ್-2023ರ 69ನೇ ಸೆಕ್ಷನ್‌ಗೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದೆ.
5 ವರ್ಷಕ್ಕಿಂತ ಕಡಿಮೆ ಇಲ್ಲದ ಜೈಲು ಶಿಕ್ಷೆ:
ಗೌರವದ ಹೆಸರಿನಲ್ಲಿ ನಡೆಯುವ ಮರ್ಯಾದೆಗೇಡು ಹತ್ಯೆಗೆ ಬಿಎನ್‌ಎಸ್‌ನಲ್ಲಿ ವಿಧಿಸುವ ಶಿಕ್ಷೆಗೆ ಸಂಬಂಧವಿಲ್ಲದಂತೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಗೌರವದ ಹೆಸರಿನಲ್ಲಿ ನಡೆಯುವ ಹಿಂಸೆ, ಬೆದರಿಕೆ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ಹತ್ಯೆ, ಕಿರುಕುಳ ಮತ್ತು ಮಾನಸಿಕ ಹಿಂಸಾಚಾರವನ್ನೂ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ನಿರ್ಧರಿಸಲಾಗಿದೆ.
ಬದುಕಿದ್ದಾಗಲೇ ತಿಥಿ ಮಾಡಿದರೆ ಶಿಕ್ಷೆ
ಭಾರತೀಯ ನ್ಯಾಯ ಸಂಹಿತೆ- 2023ರ ಕಾಯಿದೆ ಅಡಿ ಕೊಲೆ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಮೊದಲಾದ ಅಪರಾಧಗಳಿಗೆ ದಂಡನೆ ವಿಧಿಸುತ್ತದೆ. ಆದರೆ, ಜಾತಿ ಗೌರವದ ಹೆಸರಿಲ್ಲಿ ಜೀವಂತ ಪುತ್ರಿಯರಿಗೆ ಮರಣ ವಿಧಿ (ತಿಥಿ) ಕಾರ್ಯ ನಡೆಸುವುದು ಕಾನೂನುಬದ್ಧ ವಾರಸುತ್ವ ಹಕ್ಕು ನಿರಾಕರಿಸುವುದು. ಸಾಮಾಜಿಕ ಬಹಿಷ್ಕಾರ, ವಿಷಪ್ರಯೋಗ ಅಥವಾ ಇತರೆ ಮಾರ್ಗಗಳಿಂದ ಹಾನಿ ಉಂಟು ಮಾಡುವ ಕುತಂತ್ರಗಳ ವ್ಯಾಪಕ ಬಲತ್ಕಾರ ಕ್ರಮಗಳನ್ನು ಸಮರ್ಪಕವಾಗಿ ಪರಿಹರಿಸುವಲ್ಲಿ ಈ ವಿಧಿಗಳು ಅಸಮರ್ಥವಾಗಿವೆ.
ಇವ ನಮ್ಮವ ವೇದಿಕೆ ಸ್ಥಾಪನೆ:
ಇಂತಹ ಕೃತ್ಯಗಳು ಸಂವಿಧಾನದ 14,15,21ನೇ ಅಡಿ ಒದಗಿಸುವ ಮೂಲಭೂತ ಹಕ್ಕುಗಳ ಉಲ್ಲಂಘನೆ. ಹೀಗಾಗಿ ಇಂತಹ ಕ್ರಮಗಳನ್ನು ಅಪರಾಧ ಎಂದು ಪರಿಗಣಿಸಿ ಶಿಕ್ಷೆ ಒದಗಿಸಲು, ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡಲು, ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇಧಭಾವ ತಡೆಯಲು ಹಾಗೂ ಅಂತರ್ಜಾತಿ ವಿವಾಹಗಳನ್ನು ನೆರವೇರಿಸಲು ಇವ ನಮ್ಮ ಇವ ನಮ್ಮವ ವೇದಿಕೆ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ