ಶಾಸಕ ಸಿ.ಟಿ.ರವಿ ಅವರ ಅವಾಚ್ಯ ಪದ ಬಳಕೆ ಪ್ರಕರಣವನ್ನು ನೈತಿಕ ಸಮಿತಿಗೆ ವಹಿಸಿದ್ದರೆ ವ್ಯಾಪ್ತಿ ಕುರಿತ ಗೊಂದಲ, ತಿಕ್ಕಾಟ ತಪ್ಪುತ್ತಿತ್ತು ಎಂದು ಕಾನೂನು ತಜ್ಞರು ಮತ್ತು ಹಿರಿಯ ಸಂಸದೀಯ ಪಟುಗಳು ಅಭಿಪ್ರಾಯಪಟ್ಟಿದ್ದಾರೆ. ಸದನದೊಳಗೆ ನಡೆದ ಘಟನೆ ಪೊಲೀಸ್, ಕೋರ್ಟ್ ಮೆಟ್ಟಿಲು ಏರಿರುವ ಬಗ್ಗೆ ತೀವ್ರ ಬೇಸರ ವ್ಯಕ್ತವಾಗಿದೆ.
ಬೆಂಗಳೂರು (ಡಿ.24) : ಶಾಸಕಾಂಗ ಹಾಗೂ ಕಾರ್ಯಾಂಗದ ವ್ಯಾಪ್ತಿಯ ಜಿಜ್ಞಾಸೆ ಹುಟ್ಟುಹಾಕಿರುವ ಶಾಸಕ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣವನ್ನು ನೈತಿಕ ಸಮಿತಿಗೆ (ಎಥಿಕ್ಸ್ ಕಮಿಟಿ) ನೀಡಿದ್ದರೆ ವ್ಯಾಪ್ತಿ ಕುರಿತ ಗೊಂದಲ ನಿವಾರಿಸಬಹುದಿತ್ತು. ಈಗಲೂ ಅದಕ್ಕೆ ಅವಕಾಶವಿದೆ. ಸಭಾಪತಿಯವರು ಇಂಥ ತೀರ್ಮಾನ ಕೈಗೊಂಡರೆ ಅನಗತ್ಯ ತಿಕ್ಕಾಟ ತಪ್ಪಿಸುವ ದಿಸೆಯಲ್ಲಿ ಪ್ರಯತ್ನ ನಡೆಯಬಹುದು.
ಹೀಗಂತ ಕಾನೂನು ತಜ್ಞರು ಹಾಗೂ ಹಿರಿಯ ಸಂಸದೀಯ ಪಟುಗಳು ಅಭಿಪ್ರಾಯಪಡುತ್ತಾರೆ.
undefined
ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಬಿಜೆಪಿ ಸಿ.ಟಿ.ರವಿ ಅವರು ಬಳಸಿದರೆನ್ನಲಾದ ಪದ ಸೇರಿ ಇಡೀ ಘಟನೆ ಬಗ್ಗೆ ಸಭಾಪತಿಗಳು ಕೂಲಂಕಷವಾಗಿ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಲು ನೈತಿಕ ಸಮಿತಿಗೆ (ಎಥಿಕ್ಸ್ ಕಮಿಟಿ) ವಹಿಸಬೇಕಿತ್ತು ಎಂದು ತಜ್ಞರು, ಉಭಯ ಸದನಗಳ ಹಿಂದಿನ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಮಂಡಲದ ಇತಿಹಾಸದಲ್ಲಿ ಸದನದೊಳಗೆ ನಡೆದ ಘಟನೆ ಪೊಲೀಸ್, ಕೋರ್ಟ್ ಮೆಟ್ಟಿಲು ಏರಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮಾಜಿ ಸಭಾಪತಿ, ಸಭಾಧ್ಯಕ್ಷರು, ಘಟನೆ ಸಂಬಂಧ ದೂರು ಅಥವಾ ಮಾಹಿತಿ ಬಂದ ತಕ್ಷಣ ಸಭಾಪತಿಗಳು ಸದನ ಸಮಿತಿ, ನೈತಿಕ ಸಮಿತಿಗೆ ಇದನ್ನು ವಹಿಸಬಹುದಿತ್ತು. ಇಲ್ಲವೇ ಜಂಟಿ ಕಲಾಪ ಸಮಿತಿ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ; ಸಭಾಪತಿ ಬಸವರಾಜ ಹೊರಟ್ಟಿ ತೀರ್ಪು!
ವ್ಯಾಪ್ತಿ ಜಿಜ್ಞಾಸೆ:
ಇದೇ ವೇಳೆ ಕಲಾಪ ಮುಂದೂಡಿಕೆ ನಂತರ ಈ ಘಟನೆ ನಡೆದಿದೆ. ಹಾಗಾಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. ಆದರೆ ಸದನದೊಳಗೆ ಘಟನೆ ನಡೆದಿರುವುದರಿಂದ ಖಂಡಿತವಾಗಿ ಅವರ ವ್ಯಾಪ್ತಿಗೆ ಬರುತ್ತದೆ ಎಂದು ಕನ್ನಡಪ್ರಭದೊಂದಿಗೆ ಮಾತನಾಡಿದ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯಪಡುತ್ತಾರೆ.
ಆದರೆ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು, ಸದನ ಮುಂದೂಡಿಕೆ ನಂತರ ನಡೆದ ಘಟನೆ ಸಭಾಪತಿಗಳ ಸುಪರ್ದಿಗೆ ಬರುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಜಿಜ್ಞಾಸೆ ಇದೆ ಎಂದು ಚರ್ಚೆಯ ಅಗತ್ಯವನ್ನು ಮನಗಾಣಿಸುತ್ತಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಎಲ್. ಶಂಕರ್
ಘಟನೆ ಬಗ್ಗೆ ದೂರು-ಪ್ರತಿ ದೂರು ನೀಡಿರುವುದರಿಂದ ಪೊಲೀಸರು ವಿಚಾರಣೆ ಮಾಡುವುದು ಕರ್ತವ್ಯ ಮತ್ತು ಜವಾಬ್ದಾರಿ. ಸದನದೊಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೊರಟ್ಟಿ ಹೇಳಿರಬಹುದು, ಆದರೆ ಪೊಲೀಸರಿಗೆ ದೂರು ಸಲ್ಲಿಸಿರುವುದರಿಂದ ಸಹಜವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂಬುದು ಮುಂದಿನ ವಿಷಯ. ಈ ವಿಷಯದಲ್ಲಿ ಪೊಲೀಸರು ಮಾಡಿರುವುದು ಸರಿಯಾಗಿದೆ. ಅಲ್ಲದೆ ಕ್ರಿಮಿನಲ್ ಅಪರಾಧ ದೂರುಗಳು ಬಂದ ಸಂದರ್ಭದಲ್ಲಿ ತನಿಖೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಇನ್ನು ಸಿ.ಟಿ.ರವಿ ಬಳಸಿರುವ ಪದಗಳ ವಿಡಿಯೋ, ಆಡಿಯೋಗಳು ಖಾಸಗಿ ಚಾನೆಲ್‌ಗಳಲ್ಲಿರುತ್ತದೆ. ಜತೆಗೆ ಹಾಜರಿದ್ದ ಸಾಕ್ಷಿ ಪಡೆಯಬೇಕಾಗಿತ್ತು. ಮತ್ತೊಂದು ವಿಷಯವೆಂದರೆ ಸಭಾಪತಿಗಳು ಘಟನೆ ಬಗ್ಗೆ ರೂಲಿಂಗ್ ಕೊಡಬಾರದಿತ್ತು. ಅದನ್ನು ಎಥಿಕ್ಸ್ ಕಮಿಟಿಗೆ ಕೊಟ್ಟು ಈ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಹೇಳಬೇಕಾಗಿತ್ತು. ಒಟ್ಟಾರೆ ಸಭಾಪತಿಗಳ ಕೆಲಸ ಅವರು ಮಾಡಲಿ, ಪೊಲೀಸರ ಕೆಲಸ ಅವರು ಮಾಡಲಿ, ಅಂತಿಮವಾಗಿ ಕೋರ್ಟ್‌ಗಳಲ್ಲಿ ಸರಿಯೋ, ತಪ್ಪು ಎಂದು ತೀರ್ಮಾನವಾಗಬೇಕಾಗುತ್ತದೆ.
ಈಗಲೂ ಅವಕಾಶ: ಘಟನೆ ಬಗ್ಗೆ ಈಗಲೂ ಲಭ್ಯವಿರುವ ಸಾಕ್ಷ್ಯ ಸಂಗ್ರಹ ಮಾಡಿ ಪರಿಶೀಲನೆ ಮಾಡಿ ಪದ ಬಳಕೆ ಮಾಡಿದ್ದರೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪದ ಬಳಕೆ ಮಾಡದಿದ್ದರೆ ಆ ವಿಷಯವನ್ನು ಅಲ್ಲಿಗೇ ಮುಕ್ತಾಯ ಮಾಡಬೇಕು.
ಸದನ ಸಮಿತಿ ಮಾಡಬೇಕಿತ್ತು: ಕೆ.ಜಿ.ಬೋಪಯ್ಯ
ಈ ಹಿಂದೆ ಸದನದಲ್ಲಿ ಸದಸ್ಯರ ಅನರ್ಹತೆ ವಿಷಯ ಮತ್ತು ಅಶ್ಲೀಲ ಚಿತ್ರ ವೀಕ್ಷಣೆ ವಿಷಯದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಆಗ ಪೊಲೀಸರಿಗೆ ದೂರು ನೀಡಿರಲಿಲ್ಲ. ಬದಲಾಗಿ ಸರ್ವ ಪಕ್ಷಗಳ ಸದನ ಸಮಿತಿ ಮಾಡಲಾಗಿತ್ತು. ನಂತರ ಅದನ್ನು ಸೌಹಾರ್ದವಾಗಿ ಇತ್ಯರ್ಥಗೊಳಿಸಲಾಯಿತು. ಇದರಿಂದ ಸದನ ಹಾಗೂ ಸದಸ್ಯರ ಗೌರವ ಉಳಿಯಿತು. ಈಗಲೂ ಅದನ್ನೇ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಪೊಲೀಸರು ಪ್ರವೇಶ ಮಾಡಿದ್ದು ಸರಿಯಲ್ಲ. ಇನ್ನು ರವಿ ಅವರನ್ನು ಎಫ್‌ಐಆರ್ ಆಧರಿಸಿ ಬಂಧಿಸಿದ್ದು ಹಕ್ಕು ಚ್ಯುತಿ ವ್ಯಾಪ್ತಿಗೆ ಬರುತ್ತದೆ. ಬಹುಶಃ ಸಿ.ಟಿ.ರವಿ ಅವರ ಬಂಧನವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ.
ತಮ್ಮ ಅವಧಿಯಲ್ಲಿ ಇಂಥ ಹಲವು ಘಟನೆಗಳು ನಡೆದಿವೆ. ಆಗ ಇಬ್ಬರನ್ನೂ ಕರೆಸಿ ಸೌಹಾರ್ದದಿಂದ ಸಮಸ್ಯೆ ಬಗೆಹರಿಸಿದ್ದೇನೆ. ಈಗಲೂ ಸದನ ಸಮಿತಿ ಮಾಡಲು ಅವಕಾಶವಿದೆ, ಆದರೆ ಈಗ ಪೊಲೀಸರು ಹಾಗೂ ಕೋರ್ಟ್ ಬಳಿ ಪ್ರಕರಣ ಹೋಗಿದೆ.
ಎಥಿಕ್ ಸಮಿತಿಗೆ ಒಪ್ಪಿಸಬೇಕಾಗಿತ್ತು: ಸುದರ್ಶನ್
ಸದನ ಮುಂದೂಡಿಕೆ ನಂತರ ವಿಧಾನ ಮಂಡಲದ ಆವರಣದಲ್ಲಿ ನಡೆದ ಘಟನೆಯ ಮಾಹಿತಿ ತಿಳಿದ ಕೂಡಲೇ ಸಭಾಪತಿಗಳು ಕಲಾಪ ಸಲಹಾ ಸಮಿತಿ ಸಭೆ ಕರೆಯಬೇಕಾಗಿತ್ತು. ಸದನದ ಗೌರವದ ದೃಷ್ಟಿಯಿಂದ ಎರಡು ಸದನಗಳ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಬೇಕಾಗಿತ್ತು. ಕಲಾಪ ಸಮಿತಿ ಅವರ ಅಭಿಪ್ರಾಯ ಪಡೆದು, ಅವರ ಕ್ಷಮಾಪಣೆ ಕೇಳಿಸುವ ಕೆಲಸ ಮಾಡಬೇಕಾಗಿತ್ತು. ಘಟನೆ ಬಗ್ಗೆ ಒಂದು ವಾರ ಕಾಲಾವಕಾಶ ಕೊಟ್ಟು ಎಥಿಕ್ಸ್ ಕಮಿಟಿ ಕೊಡಬೇಕಾಗಿತ್ತು. ಈ ಸಮಿತಿ ತನಿಖೆ ಮಾಡಬೇಕಾಗುತ್ತದೆ. ಇಬ್ಬರನ್ನೂ ಕರೆದು ಹೇಳಿಕೆ ತೆಗೆದುಕೊಳ್ಳಬಹುದು, ಆ ಸಂದರ್ಭದಲ್ಲಿ ಇದ್ದ ಸಾಕ್ಷಿಗಳ ಹೇಳಿಕೆ ತೆಗೆದುಕೊಳ್ಳಲು ಅವಕಾಶವಿದೆ.
ಸಿಟಿ ರವಿ 'ಪ್ರಾಸ್ಟಿಟ್ಯೂಟ್' ಅಂದಿದ್ದು ಸತ್ಯ, ಅದಕ್ಕೆ ನಾನೇ ಸಾಕ್ಷಿ: ಡಾ ಯತೀಂದ್ರ ಸಿದ್ದರಾಮಯ್ಯ
ಸದನದ ಒಳಗೆ ನಡೆದ ಘಟನೆಗೆ ಪೊಲೀಸರು ಸಿ.ಟಿ.ರವಿ ಅವರ ಬಂಧನದ ಮುನ್ನ ನೋಟಿಸ್ ಕೊಡಬೇಕಿತ್ತು. ಆದರೆ ರಕ್ಷಣೆ ಕೊಡುವ ಉದ್ದೇಶದಿಂದ ರವಿ ಅವರನ್ನು ಬೇರೆಡೆ ಕರೆದುಕೊಂಡು ಹೋದರು ಎಂಬ ಮಾತು ಪೊಲೀಸರದ್ದಾಗಿದೆ.
ಈಗ ಚರ್ಚೆ ಬಳಸಿದ ಪದದ ಬಗ್ಗೆ ಆಗಬೇಕಿತ್ತು. ಅದನ್ನು ಬಿಟ್ಟು ಉಳಿದ ವಿಚಾರ ಚರ್ಚೆ ಮಾಡಲಾಗುತ್ತಿದೆ. ಅರೆಸ್ಟ್ ಮಾಡಿದ್ದು ಸರಿಯೇ, ಇಲ್ಲವೇ ಎಂಬ ಬಗ್ಗೆ ಚರ್ಚೆಯೇ ಎಲ್ಲ ಮಾಧ್ಯಮಗಳಲ್ಲಿ ನಡೆಯುತ್ತಿದೆ, ಮುದ್ರಣ ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ಈ ಬಗ್ಗೆ ಚರ್ಚೆಯೇ ನಿಂತು ಹೋಗಿದೆ. ಪೊಲೀಸರಿಂದ ತಪ್ಪು ಆಗಿದ್ದರೆ ಶಿಕ್ಷೆ ಆಗಲಿ.
- ಬಿ.ಎಲ್. ಶಂಕರ್, ಮಾಜಿ ಸಭಾಪತಿ