* ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ
* 'ಬೆಂಗಳೂರಲ್ಲಿ ಸೋಂಕು 2-3 ವಾರದಲ್ಲಿ ಇಳಿಕೆ, ಇತರೆಡೆ ತೀವ್ರ ಏರಿಕೆ'
* ಆರೋಗ್ಯ ಸಚಿವ ಡಾ| ಸುಧಾಕರ್ ಹೇಳಿಕೆ
ಬೆಂಗಳೂರು(ಮೇ.13): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುಶಃ ಇನ್ನು 2-3 ವಾರಗಳಲ್ಲಿ ಕೊರೋನಾ ಸೋಂಕು ಹತೋಟಿಗೆ ಬರಲಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಆಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗದಂತೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೊಡ್ಡ ನಗರಗಳಲ್ಲಿ ಇಷ್ಟುಆರೋಗ್ಯ ವ್ಯವಸ್ಥೆ ಇದ್ದರೂ ಐಸಿಯು, ವೆಂಟಿಲೇಟರ್ ಕೊರತೆ ಉಂಟಾಯಿತು. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಸರಿಯಾದ ಚಿಕಿತ್ಸೆ ನೀಡಬೇಕಾಗುತ್ತದೆ. ಈಗಿನಿಂದಲೇ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಡೌನ್ ಹಾಸ್ಪಿಟಲ… ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಯಾವುದೇ ಸೊಂಕು ಮೊದಲು ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುವುದು ಸಾಮಾನ್ಯ. ನಗರಗಳಲ್ಲಿ ಹೆಚ್ಚಿನ ಜನಸಂದಣಿ, ಜನರ ಓಡಾಟ ಇರುತ್ತದೆ. ಆದ್ದರಿಂದ ಸೋಂಕು ಹೆಚ್ಚಾಗುತ್ತದೆ. ಮಹಾರಾಷ್ಟ್ರದಲ್ಲಿಯೂ ಆರಂಭದಲ್ಲಿ ಮುಂಬೈಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬಂದಿತ್ತು. ಆದರೆ ಈಗ ಮುಂಬೈಯಲ್ಲಿ ಪ್ರಕರಣ ಕಡಿಮೆಯಾಗಿದ್ದು, ಬೇರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು.
ತಾಲ್ಲೂಕಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟÃ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಅಂತ ತಿಳಿಯುತ್ತದೆ. ಭೇಟಿ ಕೊಡದಿದ್ದರೆ ಅವರ ಸಮಸ್ಯೆಗಳು ನಮಗೆ ಗೊತ್ತಾಗುವುದಿಲ್ಲ. ಹಾಗಾಗಿ ಖುದ್ದಾಗಿ ನಾನೇ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದಿರುವೆ. ಅದೇ ರೀತಿ ಇತರ ಕೆಲವು ಆಸ್ಪತ್ರೆಗಳಿಗೆ ಭೇಟಿ ಕೊಡುತ್ತೇನೆ ಎಂದು ಸಚಿವರು ತಿಳಿಸಿದರು.
ಲಸಿಕೆ ಬರುತ್ತಿದ್ದ ಹಾಗೆ ನಾವು ವಿತರಣೆ ಮಾಡುತ್ತಿದ್ದೇವೆ. ಎಲ್ಲರಿಗೂ ಲಸಿಕೆ ಕೊಡಬೇಕು ಎಂಬುದೇ ನಮ್ಮ ಉದ್ದೇಶ. ನಾವು ಎಲ್ಲಾ ದೇಶಗಳಿಂದ, ಕೇಂದ್ರ ಸರ್ಕಾರದಿಂದ ಎಷ್ಟುಲಸಿಕೆ ತೆಗೆದುಕೊಳ್ಳಲು ಸಾಧ್ಯವೋ ಅಷ್ಟುಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಸಹಾಯದಿಂದ ವಿದೇಶಗಳಿಂದ ಇನ್ನೂ ಹೆಚ್ಚು ತರಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡಬೇಕು ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona