ರೆಡ್ಡಿ ಕೇಸ್ ತನಿಖೆ ನಡೆಸುತ್ತಿಲ್ಲ ಎಂದ ಜಾರಿ ನಿರ್ದೇಶನಾಲಯ

By Web DeskFirst Published Nov 8, 2018, 9:15 AM IST
Highlights

ಆ್ಯಂಬಿಡೆಂಟ್‌ ಕಂಪನಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಹಾಗೂ ತನಿಖೆಯನ್ನೂ ನಡೆಸಿಲ್ಲ ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು :  ಮಾಜಿ ಸಚಿವ ಜನಾರ್ದನ ರೆಡ್ಡಿ ಹೆಸರು ಕೇಳಿಬಂದಿರುವ ‘ಇ.ಡಿ. ಡೀಲ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ತಾವು ಆ್ಯಂಬಿಡೆಂಟ್‌ ಕಂಪನಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಹಾಗೂ ತನಿಖೆಯನ್ನೂ ನಡೆಸಿಲ್ಲ. 

ಬದಲಾಗಿ ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಫರೀದ್‌ ಭಾಗಿಯಾಗಿದ್ದ ಅನ್ಯ ಪ್ರಕರಣವೊಂದರ ತನಿಖೆ ನಡೆಸಿ ದಂಡ ವಿಧಿಸಿದ್ದೆವು. ಇದೇ ವೇಳೆ ಬೆಳಕಿಗೆ ಬಂದಿದ್ದ ಆ್ಯಂಬಿಡೆಂಟ್‌ ಅಕ್ರಮದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಪತ್ರ ಮಾತ್ರ ಬರೆದಿದ್ದೆವು ಎಂದು ಹೇಳಿದ್ದಾರೆ.

‘ಕೆಲ ತಿಂಗಳ ಹಿಂದೆ ಕಾನೂನು ಬಾಹಿರವಾಗಿ ದುಬೈನಲ್ಲಿ ಫರೀದ್‌ ಕಂಪನಿ ಪ್ರಾರಂಭಿಸಿದ್ದ. ಆ ಕಂಪನಿ ಮೂಲಕ ವಿದೇಶಿ ಕರೆನ್ಸಿ ಬದಲಾವಣೆ ವಹಿವಾಟು ನಡೆದಿತ್ತು. ಅದನ್ನು ‘ಫೋರೆಕ್ಸ್‌ ಟ್ರೇಡಿಂಗ್‌’ ಎಂದು ಕರೆಯಲಾಗುತ್ತದೆ. ಈ ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿ ಆ ಕಂಪನಿ ವಿರುದ್ಧ ವಿಚಾರಣೆ ನಡೆಸಿದ್ದೇವೆ ಹೊರತು ಆ್ಯಂಬಿಡೆಂಟ್‌ ಕಂಪನಿ ವಿರುದ್ಧವಲ್ಲ’ ಎಂದು ಇ.ಡಿ. ಮೂಲಗಳು ಬುಧವಾರ ರಾತ್ರಿ ಸ್ಪಷ್ಟಪಡಿಸಿವೆ. ವಿಷಯ ಹೀಗಿದ್ದಾಗ್ಯೂ ಡೀಲ್‌ ಪ್ರಕರಣದಲ್ಲಿ ಇಲಾಖೆ ಹೆಸರು ಪ್ರಸ್ತಾಪಿಸಲಾಗುತ್ತಿರುವ ಹಿಂದಿನ ಮರ್ಮವೇನು ಎಂದು ಇ.ಡಿ. ಅಧಿಕಾರಿಗಳು ಪ್ರಶ್ನಿಸಿದ್ದಾರೆ.

‘ಇದೇ ವರ್ಷದ ಜನವರಿಯಲ್ಲಿ ನಮಗೆ ಫರೀದ್‌ನ ವಿದೇಶಿ ಕಂಪನಿ ಕುರಿತು ವಿಷಯ ತಿಳಿಯಿತು. ಕೂಡಲೇ ಬೆಂಗಳೂರಿನಲ್ಲಿರುವ ಆ ಕಂಪನಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಲಾಗಿತ್ತು. 

ಆಗ ದುಬೈ ಕಂಪನಿಯಲ್ಲಿ ಫರೀದ್‌ 4 ಕೋಟಿ ವ್ಯವಹಾರ ನಡೆಸಿರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಫೆಮಾ ಕಾಯ್ದೆಯ (ವಿದೇಶಿ ವಿನಿಮಯ ವ್ಯವಹಾರ ಉಲ್ಲಂಘಟನೆ ಕಾಯ್ದೆ)ಯಡಿ ನಿಯಮಗಳನ್ನು ಉಲ್ಲಂಘಿಸಿರುವ ನಿಮಗೆ ಯಾಕೆ ದಂಡ ವಿಧಿಸಬಾರದು ಎಂದು ಫರೀದ್‌ಗೆ ನೋಟಿಸ್‌ ಜಾರಿ ಮಾಡಿದ್ದೆವು. ಈ ಬಗ್ಗೆ ವಿಚಾರಣೆ ಎದುರಿಸಿದ್ದ ಆತ, ತನ್ನ ತಪ್ಪು ಒಪ್ಪಿಕೊಂಡು 2 ಕೋಟಿ ರು. ದಂಡ ಕಟ್ಟಿದ್ದ. ತನ್ಮೂಲಕ ಪ್ರಕರಣ ಇತ್ಯರ್ಥವಾಗಿತ್ತು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

‘ಇದೇ ವೇಳೆ ದುಬೈ ಕಂಪನಿ ಅಕ್ರಮದ ತನಿಖೆ ಸಂದರ್ಭದಲ್ಲಿ ಆತ ಬೆಂಗಳೂರಿನಲ್ಲೂ ಕಾನೂನು ಬಾಹಿರವಾಗಿ ಆ್ಯಂಬಿಡೆಂಟ್‌ ಹೆಸರಿನಲ್ಲಿ ಕಂಪನಿ ನಡೆಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆದು ಮಾಹಿತಿ ನೀಡಿದ್ದೆವು. ನಂತರ ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ಗ್ರಾಹಕರು ದೂರುಗಳನ್ನು ಸಲ್ಲಿಸಿದರು.

ಆ ಕಂಪನಿ ವಿರುದ್ಧ ಕೆಪಿಐಡಿ (ಕರ್ನಾಟಕ ಪ್ರೊಟೆಕ್ಷನ್‌ ಆಫ್‌ ಇಂಟರೆಸ್ಟ್‌ ಆಫ್‌ ಡೆಪಾಸಿಟ್‌ ಫೈನಾನ್ಶಿಯಲ್‌)ಕಾಯ್ದೆಯಡಿ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆರ್‌ಬಿಐ ಪತ್ರ ಬರೆದಿತ್ತು. ಈ ಪತ್ರದ ಬಳಿಕ ಮುಖ್ಯ ಕಾರ್ಯದರ್ಶಿಗಳು ಆ ವಂಚಕ ಕಂಪನಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಸೂಚಿಸಿದ್ದರು. ಆಗಲೇ ಆ ಕಂಪನಿ ಮೇಲೆ ದೇವರಜೀವನಹಳ್ಳಿ ಠಾಣೆಯಲ್ಲಿ ದೂರುಗಳು ದಾಖಲಾಗಿರುವ ಸಂಗತಿ ಗೊತ್ತಾಯಿತು. ಈ ಬೆಳವಣಿಗೆಗಳ ಬಳಿಕ ಪ್ರಕರಣವು ಸಿಸಿಬಿಗೆ ತನಿಖೆ ವರ್ಗಾವಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಆದರೆ ದಿಢೀರನೇ ಈಗ ಜನಾರ್ದನ ರೆಡ್ಡಿ-ಫರೀದ್‌ ವಿರುದ್ಧದ ಪ್ರಕರಣದಲ್ಲಿ ಇ.ಡಿ. ಹೆಸರು ಕೇಳಿ ಬಂದಿದೆ. ಪ್ರಕರಣದ ಕುರಿತು ಸಿಸಿಬಿಯಿಂದ ಮಾಹಿತಿ ಪಡೆಯುತ್ತೇವೆ’ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

‘ಆ್ಯಂಬಿಡೆಂಟ್‌ ಕಂಪನಿ ಫರೀದ್‌ ವಿರುದ್ಧ ಇಡಿ ತನಿಖೆ ಮೇಲೆ ಪ್ರಭಾವ ಬೀರಲು ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಡೀಲ್‌ ನಡೆಸಿದ್ದರು. ಈ ವ್ಯವಹಾರ ಸಂಬಂಧ ಇ.ಡಿ. ಅಧಿಕಾರಿಯೊಬ್ಬರಿಗೆ ಒಂದು ಕೋಟಿ ರು. ಸಂದಾಯವಾಗಿತ್ತು ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಸಿಸಿಬಿ ಹೇಳಿತ್ತು.

click me!