ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ಸೂಚನಾ ಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪರ-ವಿರೋಧದ ಚರ್ಚೆಗೆ ಕಾರಣವಾದ ಘಟನೆ ಸೋಮವಾರ ನಡೆಯಿತು.
ಪುತ್ತೂರು (ಡಿ.12) : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ಸೂಚನಾ ಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪರ-ವಿರೋಧದ ಚರ್ಚೆಗೆ ಕಾರಣವಾದ ಘಟನೆ ಸೋಮವಾರ ನಡೆಯಿತು.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಪ್ರವೇಶದಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂಬ ನಾಮಫಲಕ ಅಳವಡಿಸಲಾಗಿತ್ತು. ಇಸಿಜಿ ಹಾಗೂ ತುರ್ತು ಚಿಕಿತ್ಸಾ ಕೊಠಡಿಯಲ್ಲಿ ರೋಗಿಗಳ ಶುಶ್ರೂಷೆಗೆ ಪೂರಕವಾಗುವಂತೆ ನಿಯಮ ಪ್ರಕಾರವಾಗಿ ಒಂದು ವರ್ಷದ ಹಿಂದೆಯೇ ಕೊಠಡಿಯ ಬಾಗಿಲಿಗೆ ಈ ಫಲಕ ಅಳವಡಿಸಲಾಗಿತ್ತು ಎನ್ನಲಾಗಿದೆ. ಆದರೆ ಎರಡು ದಿನಗಳ ಹಿಂದೆ ಯಾರೋ ಈ ಸೂಚನಾ ಫಲಕದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆರವುಗೊಳಿಸಲಾಗಿದೆ.
ಪುತ್ತೂರು ಬಸ್ ನಿಲ್ದಾಣದಲ್ಲಿ ಹಾಸನದ ಮಹಿಳೆ ಮೇಲೆ ಅತ್ಯಾಚಾರ: ನೀರಿನ ಬಾಟಲಿಗೆ ಮದ್ಯ ಮಿಶ್ರಣ ಮಾಡಿ ಕುಡಿಸಿ ಕೃತ್ಯ
ವಿವಾದದ ಕುರಿತು ಸ್ಪಷ್ಟೀಕರಣ ನೀಡಿದ ಪುತ್ತೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಅವರು, ಆಸ್ಪತ್ರೆ ಒಳಗೆ ಬುರ್ಖಾ ಧರಿಸಿ ಹೋಗಬಹುದು. ಇದು ಇಸಿಜಿ ಮಾಡಿಸಲು ಹೋಗುವ ಕೊಠಡಿಯಲ್ಲಿ ಹಾಕಿರುವ ಸೂಚನಾ ಫಲಕ. ಮುಸ್ಲಿಂ ಸಮುದಾಯಕ್ಕೆ ಸೇರಿದ ವೈದ್ಯರೇ ಈ ವಿಭಾಗದಲ್ಲಿ ಹೆಚ್ಚಿದ್ದಾರೆ. ಅವರೆಲ್ಲರೂ ಹಿಜಾಬ್ ಧರಿಸಿಯೇ ಡ್ಯೂಟಿ ಮಾಡುತ್ತಿರುತ್ತಾರೆ. ಇಸಿಜಿಗೆ ತೆರಳುವಾಗ ಬುರ್ಖಾ ತೆಗೆದೇ ಹೋಗಬೇಕಾಗುತ್ತದೆ. ಬುರ್ಖಾ ತೆಗೆಯದೇ ಇದ್ದಲ್ಲಿ ಚಿಕಿತ್ಸೆ ನೀಡುವುದು ಹೇಗೆ? ಇದು ಯಾವುದೇ ಕೋಮುಭಾವನೆಯಲ್ಲಿ ಹಾಕಿದ ಸೂಚನಾ ಫಲಕವಲ್ಲ ಎಂದು ವಿವರಿಸಿದ್ದಾರೆ.
ಪುತ್ತೂರು: ಸ್ನಾನಕ್ಕೆಂದು ನದಿಗಿಳಿದಿದ್ದ ವೇಳೆ ನೀರಿನಲ್ಲಿ ಹೃದಯಾಘಾತ, ನವವಿವಾಹಿತ ಯುವಕ ಸಾವು
ಎರಡು ದಿನಗಳಿಂದ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೂಚನಾ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೇರಲಾಗಿತ್ತು. ಒತ್ತಡದ ಹಿನ್ನೆಲೆಯಲ್ಲಿ ಸೂಚನಾ ಫಲಕ ಆಸ್ಪತ್ರೆಯವರು ತೆರವುಗೊಳಿಸಿದ್ದಾರೆ. ಬುರ್ಖಾ ತೆಗೆಯದೆ ಇಸಿಜಿ ಮಾಡುವುದು, ತುರ್ತು ಚಿಕಿತ್ಸೆ ನೀಡಲು ಅಸಾಧ್ಯವಾಗಿರುವುದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಈ ವಿಚಾರ ಗೊಂದಲ ಮೂಡಿಸಿದೆ.