ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ಬಿಡುಗಡೆ ಮಾಡಿದ್ದು, ರಾಜ್ಯದ ವಿವಿಧೆಡೆ 100 ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಕಟ್ಟಡ ನಿರ್ಮಿಸಲು 640 ಕೋಟಿ ರು. ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರು (ಜ.21): ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ಬಿಡುಗಡೆ ಮಾಡಿದ್ದು, ರಾಜ್ಯದ ವಿವಿಧೆಡೆ 100 ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಕಟ್ಟಡ ನಿರ್ಮಿಸಲು 640 ಕೋಟಿ ರು. ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ರಾಜ್ಯದ ವಿವಿಧೆಡೆ 100 ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇದಕ್ಕೆ 640.01 ಕೋಟಿ ರು. ಅನುದಾನ ಒದಗಿಸಲು ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ಕಟ್ಟಡಗಳನ್ನು ನಿರ್ಮಿಸಲಾಗುವುದು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ 71 ಕೋಟಿ ರು. ವೆಚ್ಚದಲ್ಲಿ ನಾರಾಯಣ ಗುರುಗಳ ಹೆಸರಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಶಾಲೆ ನಿರ್ಮಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೀಘ್ರ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಸಿಗೆ ಬರುತ್ತಾರೆ: ಡಿಕೆಶಿ ‘ಬಾಂಬ್’
ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ 13.20 ಕೋಟಿ ರು. ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ. ಮಡಿಕೇರಿ, ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 36.97 ಕೋಟಿ ರು. ವೆಚ್ಚದಲ್ಲಿ ತುರ್ತು ನಿಗಾ ಘಟಕಗಳನ್ನು ನಿರ್ಮಿಸಲು ಅನುಮೋದನೆ ದೊರೆತಿದೆ. ರಾಜ್ಯದ 847 ಉಪಕೇಂದ್ರಗಳನ್ನು 71.56 ಕೋಟಿ ರು. ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ನಮ್ಮ ಕ್ಲಿನಿಕ್‌ಗಳನ್ನು ರಾಜ್ಯದ 114 ನಗರಗಳಲ್ಲಿ 39 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಸ್ಥಾಪಿಸಲು ಒಪ್ಪಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ 500 ನಮ್ಮ ಕ್ಲಿನಿಕ್ ಸ್ಥಾಪನೆ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 19 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಮತ್ತು ವಸತಿ ಗೃಹಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿ ಹಳ್ಳಕ್ಕೆ 20 ಕೋಟಿ ರು. ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲು ನಿರ್ಣಯಿಸಲಾಗಿದೆ. ಸರ್ಕಾರದ ಎಚ್‌ಆರ್‌ಎಂ ವ್ಯವಸ್ಥೆಗೆ ಹೊಸ ತಂತ್ರಾಂಶ ಅವಳಡಿಕೆಗೆ 40 ಕೋಟಿ ರು. ಅನುದಾನಕ್ಕೆ ಹಸಿರು ನಿಶಾನೆ ತೋರಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೆರೆಹಳ್ಳಿ ಗ್ರಾಮದ ಸರ್ವೇ ನಂಬರ್ 37ರಲ್ಲಿ ಎರಡು ಎಕರೆ ಗೋಮಾಳ ಜಮೀನನ್ನು ಬಡಮಕ್ಕಳ ವಿದ್ಯಾರ್ಥಿ ನಿಲಯ ಮತ್ತು ಸಮುದಾಯದ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಕ್ಷತ್ರೀಯ ಮರಾಠ ಯುವ ವೇದಿಕೆಗೆ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ ಹೆಚ್ಚುವರಿಯಾಗಿ 54.60 ಕೋಟಿ ರು. ಷೇರು ಬಂಡವಾಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಇದೇ ವೇಳೆ ನಿಗಮದ ಎನ್‌ಪಿಎ (ಅನುತ್ಪಾದಕ ಆಸ್ತಿ) ತೀರುವಳಿಗೆ ಒಂದು ಬಾರಿ ಇತ್ಯರ್ಥಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. 2003ರ ಅ.31ರಿಂದ ಈವರೆಗೆ ಅನ್ವಯವಾಗುವಂತೆ ಒಂದು ಬಾರಿ ಅವಕಾಶ ನೀಡಲಾಗುವುದು. ಸದ್ಯ ನಿಗಮದಲ್ಲಿ ಅಸಲು 127 ಕೋಟಿ ರು. ಮತ್ತು 217.65 ಕೋಟಿ ರು. ಬಡ್ಡಿ ಬಾಕಿ ಇದೆ. ಒಟ್ಟು 345 ಕೋಟಿ ರು. ಬಾಕಿ ಇದೆ ಎಂದು ತಿಳಿಸಿದರು.
ದೇವೇಗೌಡರ ಕಾಲಿನ ಧೂಳಿಗೂ ನಳಿನ್ ಕಟೀಲ್ ಸಮನಲ್ಲ: ಎಚ್.ಡಿ.ಕುಮಾರಸ್ವಾಮಿ
ಸ್ಫೂರ್ತಿ ಯೋಜನೆ ವಿಸ್ತರಣೆ: ಬಾಲ್ಯ ವಿವಾಹ ತಡೆಯುವುದು ಸೇರಿದಂತೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಲು ಜಾರಿಯಲ್ಲಿರುವ ‘ಸ್ಫೂರ್ತಿ ಯೋಜನೆ’ಯನ್ನು ರಾಜ್ಯದ 11 ತಾಲೂಕುಗಳಿಗೆ ವಿಸ್ತರಣೆ ಮಾಡಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸ್ಫೂರ್ತಿ ಯೋಜನೆಯು ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಅದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ ಸೇರಿದಂತೆ 11 ತಾಲೂಕುಗಳಲ್ಲಿ ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ 12.51 ಕೋಟಿ ರು. ಅನುಮೋದನೆ ನೀಡಲಾಗಿದೆ. ಎನ್‌ಜಿಒ ಮೂಲಕ ಬಾಲ್ಯ ವಿವಾಹ ತಡೆಯುವುದು, ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಪ್ರಮುಖ ಯೋಜನೆ
ರಾಜ್ಯಾದ್ಯಂತ 100 ಅಂಬೇಡ್ಕರ್ ವಸತಿ ನಿಲಯ ಸ್ಥಾಪನೆಗೆ 640 ಕೋಟಿ
-4 ಜಿಲ್ಲೆಯಲ್ಲಿ ನಾರಾಯಣ ಗುರು ಹೆಸರಲ್ಲಿ ವಸತಿ ನಿಲಯಕ್ಕೆ 71 ಕೋಟಿ
-3 ಜಿಲ್ಲಾಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ ಸ್ಥಾಪನೆಗೆ 72 ಕೋಟಿ
-ಔರಾದ್‌ನಲ್ಲಿ ನ್ಯಾಯಾಲಯ ಸಂಕೀರ್ಣ, ಕಿತ್ತೂರಲ್ಲಿ ಆಸ್ಪತ್ರೆಗೆ 32 ಕೋಟಿ
-ತರೀಕೆರೆ ತಾಲೂಕು ಕಲ್ಲತ್ತಿ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಿಸಲು 20 ಕೋಟಿ
-ಸರ್ಕಾರದ ಎಚ್‌ಆರ್‌ಎಂ ವ್ಯವಸ್ಥೆಗೆ ಹೊಸ ಸಾಫ್‌್ಟವೇರ್‌ಗೆ 40 ಕೋಟಿ