
ಬೆಂಗಳೂರು (ಫೆ.11): ಪ್ರಗತಿಪರ, ಪ್ರಜಾಸ್ನೇಹಿ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಹಲವು ಕ್ಷೇತ್ರದಲ್ಲಿ ಕರ್ನಾಟಕವು ಕೈಗೊಳ್ಳುವ ಹೊಸ ಯೋಜನೆ, ಕಾರ್ಯಕ್ರಮಗಳು ಇತರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಬಣ್ಣಿಸಿದ್ದಾರೆ. ಶುಕ್ರವಾರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ 34 ಪುಟಗಳ ಭಾಷಣದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು.
ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಹಾಗೂ ಅಭಿವೃದ್ಧಿಗೆ ಸರ್ಕಾರವು ಬದ್ಧವಾಗಿದೆ. ಜತೆಗೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ದಾಪುಗಾಲಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟಪ್ರಗತಿ ಪಥವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ಇದೆ ಎಂದು ಸರ್ಕಾರದ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ, ಕಾಂಗ್ರೆಸ್ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ
ಶಿಕ್ಷಣ ಇಲಾಖೆಯಲ್ಲಿ ಕೈಗೊಂಡಿರುವ ಆಮೂಲಾಗ್ರ ಬದಲಾವಣೆ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಸೇರಿದಂತೆ ರಾಜ್ಯದ ಹಲವು ನೀರಾವರಿ ಯೋಜನೆಗಳು, ಅಂಗನವಾಡಿ ಕಾರ್ಯಕರ್ತರ ಗೌರವ ಧನ ಹೆಚ್ಚಳ, ಮಹಿಳೆಯರು-ಮಕ್ಕಳ ಕುರಿತು ಇರುವ ಕಾಳಜಿ, ಎಸ್‌ಸಿ/ಎಸ್‌ಟಿ ವರ್ಗದ ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್‌ನಷ್ಟುಉಚಿತ ವಿದ್ಯುತ್, ಎಸ್‌ಸಿ/ಎಸ್‌ಟಿ ವರ್ಗದ ಮೀಸಲಾತಿ ಹೆಚ್ಚಿಸಿ ಕೈಗೊಂಡಿರುವ ಕ್ರಮ, ಆರೋಗ್ಯ ಸೇವೆಯಲ್ಲಿ ಬದಲಾವಣೆ, ಹೆದ್ದಾರಿಗಳ ನಿರ್ಮಾಣ, ಬಡವರಿಗೆ ಸೂರು ಕಲ್ಪಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸರ್ಕಾರ ಸಫಲವಾಗಿದೆ ಎಂದು ಕೊಂಡಾಡಿದರು.
ರಾಜ್ಯದ ರಾಜಸ್ವ ಸಂಗ್ರಹಣೆಯು ಜನವರಿ ತಿಂಗಳಿಗೆ ಶೇ.91ರಷ್ಟುಸಾಧನೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಜನವರಿ ತಿಂಗಳಿಗೆ ಶೇ.21ರಷ್ಟುಹೆಚ್ಚಳವಾಗಿದೆ. ಬಂಡವಾಳ ವೆಚ್ಚವು 33,991 ಕೋಟಿ. ಆಗಿದೆ. ಕಳೆದ ಸಾಲಿನಲ್ಲಿ ಇದು 26,915 ಕೋಟಿ ರು. ಇತ್ತು. ಜನವರಿ ತಿಂಗಳ ವೇಳೆಗೆ ಬಜೆಟ್‌ನ ಶೇ.75ರಷ್ಟು ಮೊತ್ತವನ್ನು ವೆಚ್ಚ ಮಾಡಿದೆ. 2022-23ನೇ ಸಾಲಿನಲ್ಲಿ ಸಾರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ ಎಂಟು ಸಾವಿರ ಕೋಟಿ ರು. ಆಗಿದ್ದು, ಜನವರಿಗೆ ಅಂತ್ಯಕ್ಕೆ 7749.96 ಕೋಟಿ ರು. ಸಂಗ್ರಹಿಸಲಾಗಿದೆ. ಸರ್ಕಾರವು ತಸ್ತೀಕ್ ಭತ್ಯೆಯನ್ನು 48 ಸಾವಿರ ರು.ನಿಂದ 60 ಸಾವಿರ ರು.ಗೆ ಹೆಚ್ಚಿಸಿದೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅಭಿವೃದ್ಧಿ ಚಟುವಟಿಕೆಯಿಂದ ಆಗಿರುವ ಹಾನಿಯನ್ನು ಸರಿದೂಗಿಸಲು ಹಸಿರು ಆಯವ್ಯಯವನ್ನು ತಯಾರಿಸಿದ್ದು, ಇದರಡಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ಉತ್ಸವ: ನಶಿಸಿ ಹೋಗುತ್ತಿರುವ ತಳ ಸಮುದಾಯಗಳಲ್ಲಿರುವ ವಿಶಿಷ್ಟಕಲೆಗಳನ್ನು ಉಳಿಸಿ ಮುನ್ನೆಲೆಗೆ ತರಲು ‘ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ’ ಹೆಸರಿನಲ್ಲಿ ರಾಜ್ಯಮಟ್ಟದ ಬೃಹತ್ ಉತ್ಸವವನ್ನು ಆಯೋಜಿಸಲಾಗಿದೆ. ಕರ್ನಾಟಕ ಲಂಬಾಣಿ ಸಾಹಿತ್ಯ ಅಕಾಡೆಮಿ ಆರಂಭಿಸಲಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಯಕ್ಷ ರಂಗಾಯಣವನ್ನು ಸ್ಥಾಪಿಸಲಾಗಿದೆ. ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ. ಅಧಿಕಾರಿ/ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸೆಂಟರ್ ಫಾರ್ ಎಫೆಕ್ಟಿವ್ ಗವರ್ನೆನ್ಸ್ ಆಫ್ ಇಂಡಿಯನ್ ಸ್ಟೇಟ್ಸ್‌ನೊಂದಿಗೆ (ಸಿಇಜಿಐಎಸ್) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ರೂಪಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
ಬಿಡಿಎ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಬ್ರೋಕರ್‌ಗಳ ಬಂಧನ
ನಮ್ಮ ಕ್ಲಿನಿಕ್: ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, 271 ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಿವೆ. ಅನುಮೋದನೆಯಾಗಿರುವ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳಲ್ಲಿ 53 ಮಹಿಳಾ ಸ್ವಾಸ್ಥ್ಯ ಕೇಂದ್ರಗಳು ಸಾರ್ವಜನಿಕ ಸೇವೆಗೆ ಸಿದ್ಧವಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿವೆ ಎಂದು ತಿಳಿಸಿದರು.
ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆಯಾಗಿದೆ. ರಾಜ್ಯಪಾಲರ ಭಾಷಣವೆಂದರೆ ಅಭಿವೃದ್ಧಿಯ ವಿವರ ಇರಬೇಕು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತ ಮಾಹಿತಿ ಇರಬೇಕು. ಆದರೆ, ನಾವು ಮಾಡಿದ ಕಾರ್ಯಕ್ರಮಗಳನ್ನು ಬಿಜೆಪಿಯವರು ತಮ್ಮ ಕಾರ್ಯಕ್ರಮ ಎಂದು ರಾಜ್ಯಪಾಲರ ಬಾಯಿಯಿಂದ ಸುಳ್ಳು ಹೇಳಿಸಿದ್ದಾರೆ.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ