ಹೆಗಡಿಹಾಳ ತಾಂಡಾದ ತೇಜು ಚವ್ಹಾಣ (28), ರಾಜು ಚವ್ಹಾಣ (22) ಎಂಬುವರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಹೆಗಡಿಹಾಳ ಗ್ರಾಮದಲ್ಲಿ ಕೇಶ ಮುಂಡನ ಮಾಡಿ ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ.
ವಿಜಯಪುರ (ಫೆ.11): ಮಹಿಳೆಯೊಬ್ಬಳ ಜೊತೆಗೆ ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರಿಗೆ ಕೇಶ ಮುಂಡನ ಮಾಡಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದ ಬಸವ ನಗರದಲ್ಲಿ ಶುಕ್ರವಾರ ನಡೆದಿದೆ.
ಹೆಗಡಿಹಾಳ ತಾಂಡಾದ ತೇಜು ಚವ್ಹಾಣ (28), ರಾಜು ಚವ್ಹಾಣ (22) ಎಂಬುವರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಹೆಗಡಿಹಾಳ ಗ್ರಾಮದಲ್ಲಿ ಕೇಶ ಮುಂಡನ ಮಾಡಿ ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ. ಹೆಗಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಮುಖ್ಯಸ್ಥರ ಸಮ್ಮುಖದಲ್ಲಿ ಯುವಕರಿಗೆ ತಲೆ ಬೋಳಿಸಿ ಸುಣ್ಣ ಬಳಿದು ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದರು. ಈ ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡು ಅನಾಗರಿಕ ರೀತಿಯಲ್ಲಿ ಮೆರವಣಿಗೆ ನಡೆಸಿರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ವಿವರ: ಕೆಲಸ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಈ ಇಬ್ಬರು ಯುವಕರು ತಮ್ಮ ಜೊತೆಗೆ ಕೆಲಸ ಮಾಡುವ ಓರ್ವ ಮಹಿಳೆ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಆಗ ಈ ಮಹಿಳೆಯು ಹೆಗಡಿಹಾಳ ಗ್ರಾಮದ ಹಿರಿಯರಿಗೆ ಈ ಸಂಬಂಧ ದೂರು ನೀಡಿದ್ದಾಳೆ. ಆಗ ಗ್ರಾಮದ ಹಿರಿಯರು ಈ ಇಬ್ಬರು ಯುವಕರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಮಹಿಳೆ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿರುವುದು ನಿಜ ಎಂಬುವುದು ಗೊತ್ತಾಗಿದೆ.
ಪೊಲೀಸರ ಕಿರುಕುಳ ಆರೋಪ: ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಯತ್ನ
ಆಗ ಹಿರಿಯರು ಈ ಇಬ್ಬರು ಯುವಕರಿಗೆ ಕೇಶ ಮುಂಡನೆ ಮಾಡಿ ತಲೆಗೆ ಸುಣ್ಣ ಬಳೆದು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡಿಸುವ ಶಿಕ್ಷೆ ನೀಡಿದ್ದಾರೆ. ಇದು ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಸ್ಥಳೀಯರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.