
-ಡಾ। ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,
ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
ಸುಮಾರು ಹನ್ನೆರಡು ವರ್ಷಗಳ ಹಿಂದಿನ ಘಟನೆ. ಆಗ ದೆಹಲಿಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ನಮ್ಮ ಮೊಬೈಲ್ ರಿಂಗಣಿಸಿತು. ಉತ್ತರಿಸಲು ಕೈಗೆತ್ತಿಕೊಂಡಾಗ ಕಾಣಿಸಿದ್ದು ಕರೆ ಮಾಡಿದವರು ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು. ತೀರಾ ಅನಿರೀಕ್ಷಿತವಾದ ಕರೆ. ಮುಖ್ಯಮಂತ್ರಿಗಳಾಗಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಪ್ಪದೆ ನಮಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಬೇಡುತ್ತಾ ಬಂದಿರುವುದು ಅವರು ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ಧೆ. ಆದರೆ ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.
ಉಭಯ ಕುಶಲೋಪರಿಯ ನಂತರ ಅವರು ‘ಬುದ್ದಿ, ನಾಳೆ ನಾನು ರಾಜ್ಯದ ಬಜೆಟ್ ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದ್ದೇನೆ. ಏನು ಮಾಡಲಿ?’ ಎಂದು ಕೇಳಿದರು. ಅವರ ಧಾರ್ಮಿಕ ಶ್ರದ್ಧೆ ನಿಷ್ಕಳಂಕವಾಗಿದ್ದರೂ, ಅವರು ನಾಡಿನ ಮುಖ್ಯಮಂತ್ರಿಗಳಾಗಿ ಯಾವುದೇ ತಾರತಮ್ಯ ಮಾಡದೆ ಎಲ್ಲ ಜನಾಂಗದವರ ಧಾರ್ಮಿಕ ಸಂಸ್ಥೆಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ‘ನಮ್ಮ ಮಠಕ್ಕೆ ಏನು ಮಾಡಲಿ’ ಎಂದು ಕೇಳಿದ ಪ್ರಶ್ನೆ ನಮಗೆ ಸರಿ ಕಾಣಲಿಲ್ಲ. ‘ಮಠಕ್ಕೆ ಕಾಣಿಕೆ ಕೊಡಲು ಮಠದ ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ’ ಎಂದು ಕಟುವಾಗಿ ಪ್ರತಿಕ್ರಿಯಿಸಿದಾಗ ಅವರು ನಿರುತ್ತರರಾದರು. ‘ಹಾಗಾದರೆ ನಾನೇನು ಮಾಡಲಿ?’ ಎಂದು ವಿನಮ್ರತೆಯಿಂದ ಮರು ಸವಾಲು ಹಾಕಿ ನಮ್ಮನ್ನು ‘ಭಕ್ತಿಕಂಪಿತ’ರನ್ನಾಗಿ ಮಾಡಿದರು.
ಆಗ ನಮ್ಮ ಕಣ್ಮುಂದೆ ಸುಳಿದಾಡಿದ್ದು ಬೇಸಿಗೆಯ ಕಾಲದಲ್ಲಿ ಬೆಳಗಿನ ಹೊತ್ತು ವಾಯುವಿಹಾರದಿಂದ ಹಿಂದಿರುಗುವಾಗ ಸಾಲುಸಾಲಾಗಿ ನಿಂತು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಕೈಯಲ್ಲಿ ಬಿಂದಿಗೆಗಳನ್ನು ಹಿಡಿದು ನಿಂತ ಮಹಿಳೆಯರ ದೃಶ್ಯ! ತಕ್ಷಣವೇ ನಮ್ಮ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳಿಗೆ ‘ಸಿರಿಗೆರೆ ಮತ್ತು ಸುತ್ತಮುತ್ತಲಿನ ೫೦ - ೬೦ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಇದೆ. ಸಮೀಪದ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುವಂತೆ ಒಂದು ಯೋಜನೆಯನ್ನು ಮಂಜೂರು ಮಾಡಿಕೊಟ್ಟರೆ ತುಂಬಾ ಪುಣ್ಯಕಾರ್ಯ ಮಾಡಿದಂತಾಗುತ್ತದೆ’ ಎಂದಾಗ ಯಡಿಯೂರಪ್ಪ ಅವರು ತಡಮಾಡದೆ ‘ಹಾಗೆಯೇ ಆಗಲಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ’ ಎಂದು ಭರವಸೆ ಕೊಟ್ಟರು.
ಸಾಮಾನ್ಯವಾಗಿ ರಾಜಕೀಯ ಧುರೀಣರು ಕೊಡುವ ಪೊಳ್ಳು ಭರವಸೆ ಅದಾಗಿರಲಿಲ್ಲ. ಮಾರನೆಯ ದಿನವೇ ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಜೆಟ್‌ನಲ್ಲಿ ಮೇಲ್ಕಂಡ ಕುಡಿಯುವ ನೀರಿನ ಯೋಜನೆಗೆ ಅವರು ₹೨೫ ಕೋಟಿ ಸೇರ್ಪಡೆ ಮಾಡಿದ್ದು ಈ ಭಾಗದ ಹಳ್ಳಿಯ ಜನರನ್ನು ನಿಬ್ಬೆರಗುಗೊಳಿಸಿತು. ಕ್ರಮೇಣ ಸಿರಿಗೆರೆ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಿ ಯೋಜನೆಯ ಗಾತ್ರ ₹೮೦ ಕೋಟಿಗಳಿಗೆ ಹಿಗ್ಗಿತು. ಆರಂಭದಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದಾಗ ಅಷ್ಟಾಗಿ ಈ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದ ಹಳ್ಳಿಗರು ಈಗ ಅಂತರ್ಜಲ ಬತ್ತಿರುವುದರಿಂದ ಈ ಯೋಜನೆಯು ಕಾರ್ಯರೂಪಕ್ಕೆ ಬರದೇ ಹೋಗಿದ್ದರೆ ತಮ್ಮ ಗತಿ ಏನಾಗುತ್ತಿತ್ತು ಎಂದು ಉದ್ಗರಿಸುತ್ತಿದ್ದಾರೆ!
ಯಡಿಯೂರಪ್ಪ ಅವರು ಮತ್ತು ನಮ್ಮ ಸಂಬಂಧ ನಿನ್ನೆ ಮೊನ್ನೆಯದಲ್ಲ. ನಮ್ಮ ಮಠದ ವಾರ್ಷಿಕ ಸಮಾರಂಭವಾದ ‘ಸರ್ವಜನಾಂಗದ ಶಾಂತಿಯ ತೋಟ’ವೆಂದೇ ಜನಮಾನಸದಲ್ಲಿ ನೆಲೆಗೊಂಡಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ವು ೩೭ ವರ್ಷಗಳ ಹಿಂದೆ (೧೯೮೫) ಶಿಕಾರಿಪುರದಲ್ಲಿ ನಡೆದಾಗ ಅವರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆಗಿದ್ದರು. ಅಂದಿನಿಂದಲೂ ನಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ, ಮಂತ್ರಿಗಳಾಗಿರಲಿ, ಮಾಜಿ ಮಂತ್ರಿಗಳಾಗಿರಲಿ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ಅನನ್ಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರರು. ಅಪಾರ ಜನಪರ ಕಾಳಜಿ ಉಳ್ಳವರು. ಜನರ ಮಧ್ಯೆ ಬೆಳೆದು ಬಂದ ಅವರು ಕರೋನಾ ಬಿಕ್ಕಟ್ಟಿನಲ್ಲಿ ಬೆಂಗಳೂರಿನ ಗೃಹಕಚೇರಿಯಲ್ಲಿ ಅಣೆಕಟ್ಟೆಯಲ್ಲಿ ಹಿಡಿದಿಟ್ಟ ಅಪಾರ ಶಕ್ತಿಯುಳ್ಳ ಜಲರಾಶಿಯಂತೆ ಬಂಧಿಯಾಗಿದ್ದರೂ ನಾಡಿನ ಜನರ ಕಲ್ಯಾಣದ ಕನಸನ್ನೇ ಸದಾ ಕಾಣುತ್ತಿದ್ದರು. ಅವರು ರಾಜ್ಯದ ಅನೇಕ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಮ್ಮ ಯೋಜನೆಗಳಿಗೆ ಹಿಂದುಮುಂದು ನೋಡದೆ ಸರ್ಕಾರದ ಒಪ್ಪಿಗೆಯನ್ನು ನೀಡಿ ಉದಾರವಾಗಿ ಅನುದಾನ ನೀಡಿ ಸಹಕರಿಸಿರುವುದನ್ನು ನಾವೆಂದೂ ಮರೆಯಲಾರೆವು.
ಚನ್ನಗಿರಿಯ ಉಬ್ರಾಣಿ-ಅಮೃತಾಪುರ, ಹರಿಹರದ ರಾಜನಹಳ್ಳಿ, ಹೊನ್ನಾಳಿಯ ಸಾಸ್ವೆಹಳ್ಳಿ, ಬ್ಯಾಡಗಿ ತಾಲೂಕಿನ ಅಣೂರು ಮತ್ತು ಬುಡಪನಹಳ್ಳಿ, ಜಗಳೂರು ಮತ್ತು ಭರಮಸಾಗರ ಇತ್ಯಾದಿ ಯಾವುದೇ ಏತ ನೀರಾವರಿ ಯೋಜನೆ ಇರಲಿ, ಯಾವುದೇ ಸರಕಾರವಿದ್ದಾಗ ಕೋಟ್ಯಂತರ ರು.ಗಳ ಹಣ ಬಿಡುಗಡೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
ಈ ಹಿಂದೆ ಇಂತಹ ಯೋಜನೆಗಳಿಗೆ ಧಾರಾಳವಾಗಿ ಹಣ ಮಂಜೂರು ಮಾಡುತ್ತಿದ್ದ ಅವರು ಭರಮಸಾಗರ ಮತ್ತು ಜಗಳೂರು ಏತ ನೀರಾವರಿಗೆ ಒಂದೇ ಕಂತಿನಲ್ಲಿ ಅನುದಾನ ನೀಡಲು ರಾಜ್ಯದ ಆರ್ಥಿಕ ದುರ್ಭರತೆಯ ಕಾರಣದಿಂದ ಹಿಂದೇಟು ಹಾಕಿದರು. ₹೧,೨೨೦ ಕೋಟಿಗಳ ಜಗಳೂರು ಮತ್ತು ಭರಮಸಾಗರ ಬೃಹತ್ ಏತನೀರಾವರಿ ಯೋಜನೆಗಳನ್ನು ₹೨೨೫ ಕೋಟಿಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು ನಮಗೆ ಅಸಂತುಷ್ಟಿಯನ್ನುಂಟು ಮಾಡಿತು. ನಂತರ ನಮ್ಮ ಒತ್ತಾಸೆಗೆ ಮಣಿದು ಒಂದೇ ವಾರದಲ್ಲಿ ಮೇಲ್ಕಂಡ ಸರಕಾರದ ಆದೇಶವನ್ನು ಹಿಂಪಡೆದು ಪೂರಾ ಹಣವನ್ನು ಒಂದೇ ಕಂತಿನಲ್ಲಿ ಮಂಜೂರು ಮಾಡಿ ಮರು ಆದೇಶ ಹೊರಡಿಸಿದರು. ಈ ಎರಡೂ ಯೋಜನೆಗಳ ಕಾಮಗಾರಿ ಕರೋನಾ ಬಿಕ್ಕಟ್ಟಿನ ನಡುವೆಯೂ ಭರದಿಂದ ಸಾಗಿ ಸುಮಾರು ೧೦೦ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು.
ಸುಮಾರು ೧೦೦ ಕೆರೆಗಳಿಗೆ ದುಮ್ಮಿಕ್ಕಿ ಹರಿಯುತ್ತಿರುವ ತುಂಗಭದ್ರೆಯ ಜಲರಾಶಿಯು ಈ ಭಾಗದ ಜನರ ಆರ್ಥಿಕ ಚೈತನ್ಯವನ್ನು ಅಭಿವೃದ್ಧಿಗೊಳಿಸಿ ಅವರ ಭಾವಕೋಶದಲ್ಲಿ ಹೊಸ ಕೃಷಿ ಚಟುವಟಿಕೆಯ ಭಾಷ್ಯ ಬರೆದಿದೆ.
ಶತಮಾನಗಳಿಂದ ಬರಗಾಲದ ಬೇಗೆಯಿಂದ ತತ್ತರಿಸಿದ ಈ ಭಾಗದ ಗ್ರಾಮೀಣ ಜನರು ‘ಇಳಿದು ಬಾ ತಾಯೆ, ಇಳಿದು ಬಾ...’ ಎಂಬ ಕವಿವಾಣಿಯನ್ನು ಈಗ ಮನೆ ಮನಗಳಲ್ಲಿ ಜಪಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ