BS Yadiyurapa: ‘ಅಭಿಮಾನೋತ್ಸವ: ಬಿಎಸ್‌ವೈ ಕೊಡುಗೆಗಳ ‘ಸ್ತಬ್ಧಚಿತ್ರ’

Kannadaprabha News   | Kannada Prabha
Published : May 08, 2026, 06:42 AM ISTUpdated : May 08, 2026, 06:43 AM IST
Abhimanotsava Tableaux to showcase BS Yediyurappa s life long contributions

ಸಾರಾಂಶ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಯಡಿಯೂರಪ್ಪ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುತ್ತಿದೆ.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಲಿದ್ದು, ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ನಗರಕ್ಕೆ ಕರೆತರಲಾಗುವುದು. ಮೆರವಣಿಗೆಯಲ್ಲಿ ಬಿಎಸ್‌ವೈ ಕೊಡುಗೆಗಳ ‘ಸ್ತಬ್ಧಚಿತ್ರ’ಗಳು ಪ್ರಮುಖ ಆಕರ್ಷಣೆಯಾಗಲಿವೆ.

ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಚಿತ್ರದುರ್ಗದಲ್ಲಿ ‘ಯಡಿಯೂರಪ್ಪ ಅಭಿಮಾನೋತ್ಸವ’ ಆಯೋಜಿಸಲಾಗಿದ್ದು, ರೈತನಾಯಕನ ಸ್ವಾಗತಕ್ಕೆ ಕೋಟೆನಗರಿ, ಚಿತ್ರದುರ್ಗ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಅಭಿಮಾನೋತ್ಸವದ ಮುನ್ನಾದಿನ, ಶುಕ್ರವಾರ ಸಂಜೆ 4 ಗಂಟೆಗೆ ಅವರು ನಗರ ಪ್ರವೇಶಿಸಲಿದ್ದು, ಅವರು ಚಿತ್ರದುರ್ಗ ಪ್ರವೇಶಿಸುವ ಕ್ಷಣಗಳನ್ನು ಸಾರ್ಥಕಗೊಳಿಸುವ ಸಂಬಂಧ ಸಾಂಸ್ಕೃತಿಕ ಲೋಕವನ್ನೇ ಸೃಷ್ಠಿಸಲಾಗುತ್ತಿದೆ. ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಸಾಗುವ ಮೆರವಣಿಗೆಯಲ್ಲಿ ಯಡಿಯೂರಪ್ಪನವರನ್ನು ಪುಷ್ಪಾಲಂಕೃತ ಸಾರೋಟ್‌ನಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆ ತರಲಾಗುವುದು.

2000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ ವಂದನ್‌ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜನಪದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.

ಅಂಬಾಸಿಡರ್‌ ಕಾರು ಪ್ರಮುಖ ಆಕರ್ಷಣೆ:

ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್‌ ಕಾರು ಸಿಕೆಆರ್‌ 45) ಸಹ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ವಿಶೇಷ ಮೆರಗು ನೀಡಲು ಹಾಗೂ ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್‌ ವಿತರಣೆ, ಕೃಷಿ ಬಜೆಟ್‌ ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ.

ಮೆರವಣಿಗೆಯಲ್ಲಿ ಆರು ಎಲ್‍ಇಡಿಗಳು ಇರಲಿದ್ದು, ಒಂದೊಂದರಲ್ಲಿ ಯಡಿಯೂರಪ್ಪನವರ ಬಾಲ್ಯದಿಂದ ಹಿಡಿದು ವಿಧಾನಸೌಧದವರೆಗೂ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಲಾಗುವುದು. ಯಡಿಯೂರಪ್ಪ ಅವರ ಸಾಧನೆಯ ಹಾದಿಯನ್ನು ಈ ಸ್ತಬ್ಧಚಿತ್ರಗಳ ಮೂಲಕ ತೆರೆದಿಡಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್ ಮೊದಲಾದವುಗಳ ಪ್ರದರ್ಶನದ ಸ್ತಬ್ದ ಚಿತ್ರಗಳು ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಜ್ಜಾಗಲಿವೆ.

ರಾಜ್ಯದ ವಿವಿಧೆಡೆಗಳಿಂದ ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಗಾರುಡಿ ಗೊಂಬೆ, ಚಿಟ್ಟೆಮೇಳ, ಮಹಿಳಾ ವೀರಗಾಸೆ, ಮಹಿಳಾ ತಮಟೆ, ವೀರಗಾಸೆ, ಗೊರವರ ಕುಣಿತ, ಬೇಡರವೇಷ, ಹಗಲು ವೇಷ, ಡೊಳ್ಳು ಕುಣಿತ, ಕಂಸಾಳೆ, ಕೊಂಬು ಕಹಳೆ, ಲಂಬಾಣಿ ನೃತ್ಯ, ಕೀಲು ಕುದುರೆ, ರಾಜರಾಣಿ, ಉಗ್ರನರಸಿಂಹ, ಮಹಿಷಾಸುರ ಜೋಕರ್, ನಂಧಿ ಧ್ವಜ, ವೀರಭದ್ರ ಕುಣಿತ, ನಗಾರಿ, ಸೋಮನ ಕುಣಿತ, ಚಂಡೆವಾದನ, ರಂಗ ಕುಣಿತ, ಗೋರುಕಾನ ನೃತ್ಯ ಸೇರಿದಂತೆ 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.

ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿನಿ ದಸರಾ ರೀತಿ ಇಂದು ಬಿಎಸ್‌ವೈ ಪುರಪ್ರವೇಶ! ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್‌ವೈ ಅಭಿಮಾನೋತ್ಸವ’
ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!