ಲಾಕ್‌ಡೌನ್ ವಿಸ್ತರಣೆ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಮುಂದಿಟ್ಟ ರಾಜ್ಯ ಸರ್ಕಾರ

By Suvarna NewsFirst Published Apr 15, 2020, 10:23 PM IST
Highlights
ಎರಡನೇ ಹಂತದ ಲಾಕ್​ಡೌನ್ ಜಾರಿಯಾದ ಹಿನ್ನಲೆಯಲ್ಲಿ ಮಾರ್ಗಸೂಚನೆ ಪಾಲನೆ ಕುರಿತು ನಾಲ್ವರು ಹಿರಿಯ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ಬೆಂಗಳೂರು, (ಏ.15): ರಾಜ್ಯದಲ್ಲಿ ಲಾಕ್‌ಡೌನ್‌ ಬಿಗಿಗೊಳಿಸುವ ಬಗ್ಗೆ  ಬುಧವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು (ಬುಧವಾರ) ಸಿಎಂ ಬಿಎಸ್​ವೈ ಹಿರಿಯ ಸಚಿವರ ತುರ್ತು ಸಭೆ ನಡೆಸಿದರು. 

ಈಗಾಗಲೇ ಕೋವಿಡ್-19 ಟಾಸ್ಕ್ ಫೋರ್ಸ್ ರಚನೆ ಮಾಡಿದ್ದರೂ ಹೆಚ್ಚುವರಿಯಾಗಿ ಹೊಣೆಗಾರಿಕೆ ಹಂಚಿಕೆ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಕರ್ನಾಟಕದ ರೆಡ್, ಆರೆಂಜ್, ಗ್ರೀನ್‌ ಜಿಲ್ಲೆಗಳಾವುವು: ಪಟ್ಟಿ ರಿಲೀಸ್..!

ವಲಸೆ ಕಾರ್ಮಿಕರ ಸಮಸ್ಯೆ ಹಾಗೂ 19 ದಿನಗಳ ಲಾಕ್​ಡೌನ್ ಪಾಲನೆಗೆ ನೀಡಿರುವ ಮಾರ್ಗಸೂಚಿ ಅನುಷ್ಠಾನ ಕುರಿತು ಸಚಿವರೊಂದಿಗೆ ಸಿಎಂ ಮಹತ್ವದ ಸಮಾಲೋಚನೆ ನಡೆಸಿದರು. ಈ ವೇಳೆ ಮಾರ್ಗಸೂಚಿ ಪಾಲನೆ ಸಂಬಂಧ ನಾಲ್ವರು ಸಚಿವರಿಗೆ ಜವಾಬ್ದಾರಿ ನೀಡಿದರು

ಸುರೇಶ್ ಕುಮಾರ್‌ಗೆ ಕಾರ್ಮಿಕರ ಹೊಣೆ

ಮುಂಬೈನಲ್ಲಿ ನಡೆಯುತ್ತಿರುವ ಕಾರ್ಮಿಕರ ವಿದ್ಯಮಾನ ರಾಜ್ಯದಲ್ಲಿ ಆಗದಂತೆ ಮುನ್ನೆಚ್ಚರಿಕಾ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಾಯಿತು.  ಇದರ ಜವಾಬ್ದಾರಿಯನ್ನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ನೀಡಲಾಯಿತು. ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಕಾರ್ಮಿಕರು ವಲಸೆಗೆ ಮುಂದಾಗದ ರೀತಿ ನೋಡಿಕೊಳ್ಳುವ ಹೊಣೆಯನ್ನು ಸುರೇಶ್ ಕುಮಾರ್ ಹೆಗಲಿಗೆ ಹಾಕಿದರು. 

ಬಸವರಾಜ ಬೊಮ್ಮಾಯಿಗೆ ಕಾನೂನು ಸುವ್ಯವಸ್ಥೆ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾನೂನು ಸುವ್ಯವಸ್ಥೆ ಕುರಿತು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ಸೂಚನೆಯೊಂದಿಗೆ ಕೋವಿಡ್-19 ಕಾನೂನು ಸುವ್ಯವಸ್ಥೆ ಹೊಣೆಗಾರಿಕೆ ನೀಡಲಾಗಿದೆ.

ಅಶ್ವಥ್ ನಾರಾಯಣ್‌ಗೆ ಕೃಷಿ ವಲಯ

ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರಿಗೆ ಕೃಷಿ ವಲಯದ ಜವಾಬ್ದಾರಿ ಹಂಚಿಕೆ ಮಾಡಿದ್ದು, ಕೋವಿಡ್-19 ಲಾಕ್ ಡೌನ್ ಮುಗಿಯುವವರೆಗೂ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಗಾರಿಕೆ ನೀಡಲಾಗಿದೆ.

ಅಶೋಕ್‌ಗೆ ಬೆಂಗಳೂರು ಉಸ್ತುವಾರಿ

ಇನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ನಗರದ ಉಸ್ತುವಾರಿ ವಹಿಸಿದ್ದು, ಕೋವಿಡ್-19 ಮುಗಿಯುವವರೆಗೆ ನಗರದಲ್ಲಿ ಕೊರೋನಾ ಸಂಬಂಧಿತ ವಿಷಯಗಳ ಬಗ್ಗೆ ನೋಡಿಕೊಳ್ಳಲಿದ್ದಾರೆ.
click me!