
ಚಿಕ್ಕಮಗಳೂರು (ಏ.17): ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಆಜಾದ್ ಪಾರ್ಕ್ ವೃತ್ತದಲ್ಲಿ ಮಾತನಾಡಿದ ಅವರು, ಈ ಘಟನೆ ಬಗ್ಗೆ ಏನು ಹೇಳಬೇಕು ಎನ್ನುವುದು ನನಗೆ ತೋಚುತ್ತಿಲ್ಲ. ಆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ಈ ರೀತಿಯ ಘಟನೆ ನಡೆಯಬಾರದಿತ್ತು, ಆದರೆ ನಡೆದಿದ್ದು ದುಃಖಕರ. ಅಪರಾಧ ನಡೆದ ಸಂದರ್ಭದಲ್ಲಿ ನಾನು ಹೇಳಬೇಕಿದ್ದನ್ನು ಆಗಲೇ ಹೇಳಿದ್ದೆ. ಇಂದು ನಾನು ಹೇಳಿದ್ದೇ ಸತ್ಯ ಎಂಬಂತೆ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.
2016ರಲ್ಲಿ ಯೋಗೇಶ್ ಗೌಡ ಕೊಲೆ ನಡೆದಾಗ ಇಂದಿನ ಸಿಎಂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಸಿಬಿಐಗೆ ನೀಡಬೇಕೆಂದು ಯೋಗೇಶ್ ಗೌಡ ಕುಟುಂಬ ಒತ್ತಾಯಿಸಿದ್ರು. ಆದರೆ ಆಗ ಕೇಸ್ ಬಗ್ಗೆ ಯಾವ ಬೆಳವಣಿಗೆಯೂ ನಡೆಯಲಿಲ್ಲ. ಆದರೆ ಮೈತ್ರಿ ಸರ್ಕಾರ ಇದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಕೇಸ್ ಅನ್ನು 2019ರಲ್ಲಿ ಸಿಬಿಐಗೆ ವಹಿಸಿದರು. ಅಲ್ಲಿಂದ ಈ ಪ್ರಕರಣಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತು.
ಇದಕ್ಕೂ ಮೊದಲು ಚಿಕ್ಕಮಗಳೂರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸುವ ವೇಳೆ ಒಂದು ವಿಚಿತ್ರ ಘಟನೆ ಗಮನಸೆಳೆಯಿತು. ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವ ವೇಳೆ ಗೊಂದಲ ಉಂಟಾಗಿ, ಕೆಲವರು ತಪ್ಪಾಗಿ ಯಡಿಯೂರಪ್ಪ ವಿರುದ್ಧವೇ ಘೋಷಣೆ ಕೂಗಲು ಮುಂದಾದರು. ವಿನಯ್ ಕುಲಕರ್ಣಿಯನ್ನು ಜೈಲಿಗೆ ಕಳುಹಿಸಿದ ಯಡಿಯೂರಪ್ಪನವರಿಗೆ ಜೈ ಎಂದು ಘೋಷಣೆ ಕೂಗುವ ವೇಳೆ, ಕೆಲವರು ತಪ್ಪಾಗಿ ವಿರೋಧದ ಘೋಷಣೆ ಕೂಗಿದಂತಾಗಿದೆ. ನಂತರ ತಕ್ಷಣವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕಾರ್ಯಕರ್ತರು ತಮ್ಮ ಘೋಷಣೆಯನ್ನು ನಿಲ್ಲಿಸಿದರು. ಈ ಘಟನೆ ಸ್ಥಳದಲ್ಲಿದ್ದವರ ಗಮನಸೆಳೆಯಿತು.
ಬಿ.ಎಸ್. ಯಡಿಯೂರಪ್ಪ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ ಲಿಂಗಾಯಿತ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೈತ್ರಾದೇವಿ-ಯಡಿಯೂರಪ್ಪ ವೀರಶೈವ ಲಿಂಗಾಯಿತ ಸಮುದಾಯ ಭವನವು ಸುಮಾರು ₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ನಗರದ ಎಐಟಿ ಕಾಲೇಜು ಹಿಂಭಾಗದಲ್ಲಿ ಈ ಭವನ ನಿರ್ಮಾಣವಾಗಿದೆ. ಕಾರ್ಯಕ್ರಮದ ಬಳಿಕ ಅವರು ನಾಳೆ ಮಧ್ಯಾಹ್ನ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ