ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯ ಕಲ್ಪಿಸಲು ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ಸಮಾಜ ಬಾಂಧವರು ತಮ್ಮ ಆಧಾರ್ ಕಾರ್ಡ್, ಟಿಸಿ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ.ಸಿ. ಶ್ರೀನಿವಾಸ ಭಟ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜು.22): ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಬಾಂಧವರಿಗೆ ಸರ್ಕಾರ ಜಾತಿ, ಆದಾಯ ಪ್ರಮಾಣ ಪತ್ರ ನೀಡುತ್ತಿದ್ದು, ಸಮಾಜ ಬಾಂಧವರು ತಮ್ಮ ಆಧಾರ್ ಕಾರ್ಡ್, ಟಿಸಿ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ.ಸಿ. ಶ್ರೀನಿವಾಸ ಭಟ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅವರು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯ ಕಲ್ಪಿಸಲು ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ ಎಂದರು.
ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶೇ.10 ಮೀಸಲಾತಿಗಾಗಿ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ರಾಜ್ಯದ 144 ಜಾತಿ, ಉಪ ಜಾತಿ, ವಿವಿಧ ಧರ್ಮೀಯರಿಗೆ ಪ್ರಯೋಜನ ಸಿಗಲಿದೆ. ಈ ಅವಕಾಶ ಬ್ರಾಹ್ಮಣ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೂ ಸಿಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಓಬಿಸಿ ಪಟ್ಟಿಯಲ್ಲಿ ಇಲ್ಲದ ನೂರಾರು ಜಾತಿಗಳ ಲಕ್ಷಾಂತರ ಜನರಿಗೆ ಕೇಂದ್ರದ ಕ್ರಮದಿಂದಾಗಿ ಮೀಸಲು ಸೌಲಭ್ಯ ಸಿಗಲಿದೆ. ಈ ಕಾಯ್ದೆಯಿಂದಾಗಿ ಕೇಂದ್ರದ ನಾಗರಿಕ ಹುದ್ದೆಗಳು, ಶಿಕ್ಷಣಕ್ಕೆ ಪ್ರವೇಶಾತಿ ಸಿಗಲು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆದಾಯ, ಜಾತಿ ಪ್ರಮಾಣಪತ್ರದ ಅಗತ್ಯವಿದೆ ಎಂದು ತಿಳಿಸಿದರು.
ಜಾತಿ, ಆದಾಯ ಪ್ರಮಾಣಪತ್ರರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಲ್ಲಿ ನೀಡುವಂತೆ ಜಿಲ್ಲಾಧಿಕಾರಿಗಳು, ತಹಸೀಲ್ದಾರರಿಗೆ ನೀಡಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ 41 ಸಾವಿರ ಫುಡ್ ಕಿಟ್‌ಗಳನ್ನು ವಿತರಿಸಿದೆ ಎಂದು ಮಾಹಿತಿ ನೀಡಿದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ
ಮಂಡಳಿಯಿಂದ ಸುಭದ್ರ ಯೋಜನೆ, ಸೌಖ್ಯ ಯೋಜನೆ, ಕಲ್ಯಾಣ ಯೋಜನೆ, ಚೈತನ್ಯ ಉತ್ಸವ, ಅನ್ನದಾತ ಯೋಜನೆ, ಬ್ರಾಹ್ಮಣ ಸ್ವಸಹಾಯ ಸಂಘಗಳ ಸ್ಥಾಪನೆ, ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ, ಸಾಂದೀಪಿನಿ ಶಿಷ್ಯ ವೇತನ, ಚಾಣಕ್ಯ ಆಡಳಿತ ತರಬೇತಿ ಯೋಜನೆ ಹೀಗೆ ಅನೇಕ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಬಾಂಧವರಿಗೆ ನೆರವು ನೀಡುವ ಉದ್ದೇಶದಿಂದ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ನಿಗಮಕ್ಕೆ ಸರ್ಕಾರವು 25 ಕೋಟಿ ರುಪಾಯಿ ಅನುದಾನ ನೀಡಿದೆ. ಮಂಡಳಿಗೆ ಮತ್ತಷ್ಟುಅನುದಾನದ ಅಗತ್ಯವಿದೆ. ಈ ಬಗ್ಗೆ ಮಂಡಳಿ ಅಧ್ಯಕ್ಷರು ಮುಖ್ಯಮಂತ್ರಿಗಳ ಬಳಿಯೂ ಚರ್ಚಿಸಿದ್ದಾರೆ. ಆದಷ್ಟುಬೇಗನೆ ಅನುದಾನ ಸಿಗುವ ವಿಶ್ವಾಸವಿದೆ ಎಂದು ಪಿ.ಸಿ. ಶ್ರೀನಿವಾಸ ಭಟ್ ಹೇಳಿದರು.
ಬ್ರಾಹ್ಮಣ ಸಮಾಜದ ಪ್ರಧಾನ ಕಾರ್ಯದರ್ಶಿ ಮಾಧವ ಪದಕಿ, ಸತ್ಯನಾರಾಯಣ, ಮುಖಂಡರಾದ ವಿನಾಯಕ ರಾನಡೆ, ಸರೋಜಮ್ಮ ದೀಕ್ಷಿತ್, ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಅನಿಲ್ ಬಾರೆಂಗಳ್, ಪ್ರಶಾಂತ ಬಾದ್ರಿ, ಡಿ.ಶೇಷಾಚಲ, ಎಂ.ಜಿ. ಶ್ರೀಕಾಂತ್, ಬಿ.ಎಸ್. ಸುಬ್ರಹ್ಮಣ್ಯ ಇತರರು ಇದ್ದರು.
ಮಧ್ಯ ಕರ್ನಾಟಕದಲ್ಲಿ ಮಂಡಳಿಗೆ ತಮ್ಮನ್ನು ನಿರ್ದೇಶಕರಾಗಿ ಮಾಡಿದ ಸಿಎಂ ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಎಂ.ಪಿ. ರೇಣುಕಾಚಾರ್ಯ, ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಜಿಲ್ಲೆಯ ಎಲ್ಲ ಶಾಸಕರು, ಮುಖಂಡರಿಗೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ - ಪಿ.ಸಿ. ಶ್ರೀನಿವಾಸ ಭಟ್, ನಿರ್ದೇಶಕ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ.