ತೀವ್ರ ಆಕ್ರೋಶಕ್ಕೆ ಮಣಿದ ಸರ್ಕಾರ - ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವ ಪರಿಷ್ಕರಣೆ ಬಂದ್‌!

By Kannadaprabha News  |  First Published Nov 22, 2024, 7:50 AM IST

ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವ ಸಲುವಾಗಿ ಕೈಗೆತ್ತಿಕೊಂಡಿದ್ದ ಪಡಿತರ ಚೀಟಿ ಪರಿಷ್ಕರಣೆ ಅಭಿಯಾನಕ್ಕೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.


 ಬೆಂಗಳೂರು (ನ.22) : ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವ ಸಲುವಾಗಿ ಕೈಗೆತ್ತಿಕೊಂಡಿದ್ದ ಪಡಿತರ ಚೀಟಿ ಪರಿಷ್ಕರಣೆ ಅಭಿಯಾನಕ್ಕೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

ಅಲ್ಲದೆ, ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರು ಹೊರತುಪಡಿಸಿ ಕಳೆದ ಒಂದು ತಿಂಗಳಿಂದ ರದ್ದಾಗಿರುವ ಎಲ್ಲಾ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿನಂತೆಯೇ ಮುಂದುವರೆಸುತ್ತೇವೆ. ಜತೆಗೆ ಒಂದು ವಾರದ ಬಳಿಕ ಅವರಿಗೂ ಅಕ್ಕಿ ನೀಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.

Tap to resize

Latest Videos

undefined

ರಾಜ್ಯದಲ್ಲಿರುವ ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆ ಮಾಡಿ ಅದನ್ನು ಎಪಿಎಲ್‌ಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿತ್ತು.

ಕೇಂದ್ರದಿಂದ 5.80 ಕೋಟಿ ಬಿಪಿಎಲ್‌ ಕಾರ್ಡ್‌ ರದ್ದತಿ ಬಗ್ಗೆ ಬಿಜೆಪಿ ನಾಯಕರ ಮಾತೇಕಿಲ್ಲ?: ಸಚಿವ ದಿನೇಶ್‌ ಗುಂಡೂರಾವ್‌

ಆದರೆ, ಈ ಪ್ರಕ್ರಿಯೆಯಲ್ಲಿ ಕೆಲವು ಕೂಲಿ ಕಾರ್ಮಿಕರು, ಬಡ ನಿರ್ಗತಿಕರ ಬಿಪಿಎಲ್‌ ಕೂಡ ರದ್ದಾಗಿದೆ ಎಂದು ಮಾಧ್ಯಮಗಳಲ್ಲಿ ತಿಳಿದುಬಂದಿದೆ. ತಂತ್ರಾಂಶ ಹಾಗೂ ತಾಂತ್ರಿಕ ಸಿಬ್ಬಂದಿಯು ಪಾನ್‌ ಕಾರ್ಡ್‌ನಲ್ಲಿನ ವಿವಿಧ ದಂಡ ಪಾವತಿ ವಿವರಗಳನ್ನು ತೆರಿಗೆ ಪಾವತಿ ವಿವರ ಎಂದು ತಪ್ಪಾಗಿ ಗ್ರಹಿಸಿದ ಕಾರಣ ಕೆಲ ಬಡವರ ಬಿಪಿಎಲ್‌ ಕಾರ್ಡ್‌ ಕೂಡ ರದ್ದಾಗಿದೆ. ಹೀಗಾಗಿ ಇದರಿಂದ ಆಗಿರುವ ಎಲ್ಲಾ ಗೊಂದಲ ಬಗೆಹರಿಸಲು ತಕ್ಷಣದಿಂದ ಸರ್ಕಾರಿ ನೌಕರರು ಹಾಗೂ ಐಟಿ ಪಾವತಿದಾರರು ಹೊರತುಪಡಿಸಿ ಎಲ್ಲರ ಬಿಪಿಎಲ್‌ ಕಾರ್ಡ್‌ ವಾಪಸು ನೀಡುತ್ತಿದ್ದೇವೆ ಎಂದು ಹೇಳಿದರು.

ವಾರದಲ್ಲಿ ಪುನರ್‌ ಚಾಲನೆ:

ಕಳೆದ ಒಂದು ತಿಂಗಳಿಂದ ರದ್ದಾಗಿರುವ ಬಿಪಿಎಲ್‌ ಕಾರ್ಡ್‌ ಮಾಹಿತಿ ನಮ್ಮ ಬಳಿ ಇದೆ. ಲಾಗಿನ್‌ ಆಗಿ ಪರಿಶೀಲನೆ ನಡೆಸಿ ಸರ್ಕಾರಿ ನೌಕರರು, ಐಟಿ ಪಾವತಿದಾರರು ಹೊರತುಪಡಿಸಿ ಎಲ್ಲಾ ಬಿಪಿಎಲ್‌ ಕಾರ್ಡ್‌ ರದ್ದನ್ನು ಹಿಂಪಡೆಯಲಾಗುವುದು. ಈ ಪ್ರಕ್ರಿಯೆ ಬಳಿಕ ಅಂದರೆ ಒಂದು ವಾರದ ಬಳಿಕ ಅವರಿಗೆ ಎಂದಿನಂತೆ ಬಿಪಿಎಲ್‌ ಮಾನದಂಡದ ಪ್ರಕಾರ ಅಕ್ಕಿ ನೀಡಲಾಗುವುದು ಎಂದು ಮುನಿಯಪ್ಪ ಹೇಳಿದರು.

ಕೇಂದ್ರದ ಸೂಚನೆಯಂತೆ ಪರಿಷ್ಕರಣೆ ಯತ್ನ:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಭಾಗದಲ್ಲಿ ಶೇ.75 ಹಾಗೂ ನಗರ ಪ್ರದೇಶದಲ್ಲಿ ಶೇ.50 ಬಿಪಿಎಲ್‌ ಕಾರ್ಡ್ ಮಾತ್ರ ವಿತರಣೆ ಮಾಡಬಹುದು. ಇದರ ಪ್ರಕಾರ ರಾಜ್ಯದಲ್ಲಿ 4.01 ಕೋಟಿ ಸದಸ್ಯರು ಮಾತ್ರ ಬಿಪಿಎಲ್‌ ಸೌಲಭ್ಯಕ್ಕೆ ಅರ್ಹರು. ಆದರೆ, ರಾಜ್ಯದಲ್ಲಿ ಒಟ್ಟಾರೆ 1.24 ಕೋಟಿ ಕುಟುಂಬಗಳ 4.34 ಕೋಟಿ ಸದಸ್ಯರು ಬಿಪಿಎಲ್‌ ವ್ಯಾಪ್ತಿಯಲ್ಲಿದ್ದಾರೆ. ಅಂದರೆ ಶೇ.65.96 ಕಾರ್ಡ್‌ ಬಿಪಿಎಲ್‌ ಕಾರ್ಡ್‌ ಇದೆ.

ಕೇರಳದಲ್ಲಿ ಶೇ.45.59, ತಮಿಳುನಾಡು ಶೇ.48.81, ತೆಲಂಗಾಣ ಶೇ.53.93, ಆಂಧ್ರಪ್ರದೇಶ ಶೇ.63.79, ಮಹಾರಾಷ್ಟ್ರದಲ್ಲಿ ಶೇ.58.47ರಷ್ಟು ಮಾತ್ರ ಬಿಪಿಎಲ್‌ ಇದೆ. ದೇಶದಲ್ಲೇ ಎರಡನೇ ಅತಿಹೆಚ್ಚು ಆರ್ಥಿಕ ಪ್ರಗತಿ ಹೊಂದಿದ ರಾಜ್ಯದಲ್ಲಿ ಶೇ.65.96ರಷ್ಟು ಬಿಪಿಎಲ್‌ ಕುಟುಂಬ ಇರಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವಂತೆ ನಿರ್ದೇಶನ ನೀಡಿತ್ತು. ಕೇಂದ್ರದ ಮಾನದಂಡ ಅನ್ವಯ ಪರಿಷ್ಕರಣೆಗೆ ಮುಂದಾಗಿದ್ದೆವು. ಇದೀಗ ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ನಿರ್ಧಾರ ಮುಂದೂಡಿದ್ದೇವೆ ಎಂದು ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.

1.02 ಲಕ್ಷ ಮಂದಿ ಅನರ್ಹರ ಬಿಪಿಎಲ್‌ ರದ್ದು:

ಪ್ರಸ್ತುತ ಅರ್ಹರ ಬಿಪಿಎಲ್‌ ಕಾರ್ಡ್ ರದ್ದುಪಡಿಸಿಲ್ಲ. ಒಂದೊಮ್ಮೆ ರದ್ದಾಗಿದ್ದರೆ ಕೂಡಲೇ ವಾಪಸು ನೀಡುತ್ತೇವೆ. ಪ್ರಸ್ತುತ ಆದಾಯ ತೆರಿಗೆ ಪಾವತಿಸುವ 98,473 ಹಾಗೂ ಸರ್ಕಾರಿ ನೌಕರರಾಗಿರುವ 4,036 ಮಂದಿ ಸೇರಿ 1.02 ಲಕ್ಷ ಮಂದಿಯ ಬಿಪಿಎಲ್‌ ತಾತ್ಕಾಲಿಕವಾಗಿ ರದ್ದುಪಡಿಸಿದ್ದೇವೆ. ಈ ಪೈಕಿ ಎರಡನೇ ಹಂತದ ಪರಿಶೀಲನೆ ಬಳಿಕ 68,017 ಬಿಪಿಎಲ್‌ ಕಾರ್ಡ್‌ಗಳನ್ನು ಅಮಾನತು ಮಾಡಿ ಎಪಿಎಲ್‌ಗೆ ಸೇರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.-----

ಭೌತಿಕ ಪರಿಶೀಲನೆ ಬಳಿಕ ಪರಿಷ್ಕರಣೆ, ಸದ್ಯಕ್ಕೆ ಅದೂ ಇಲ್ಲ: ಸಚಿವ

ಸದ್ಯಕ್ಕೆ ಪಡಿತರ ಚೀಟಿ ಪರಿಷ್ಕರಣೆ ನಿಲ್ಲಿಸಲಾಗಿದೆ. ಮುಂದೆ ವ್ಯವಸ್ಥಿತ ಪರಿಶೀಲನೆ ಬಳಿಕ ಪರಿಷ್ಕರಣೆ ಮಾಡಬೇಕಾಗುವುದು. ಅಧಿಕಾರಿಗಳಿಂದ ತಪ್ಪುಗಳು ಆಗದಂತಿರಲು ಪ್ರತಿ ಬಿಪಿಎಲ್‌ ಕಾರ್ಡ್‌ ಅನರ್ಹ ಎಂದು ನಿರ್ಧರಿಸುವ ಮೊದಲು ಸ್ಥಳೀಯ ಕಂದಾಯ ಅಧಿಕಾರಿಗಳು ಭೌತಿಕವಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಒಂದು ಗ್ರಾಮದಲ್ಲಿ 10ಕ್ಕಿಂತ ಹೆಚ್ಚು ಕಾರ್ಡ್‌ ಅನರ್ಹ ಎಂದಾದರೆ ತಾಲೂಕು ಮಟ್ಟದ ಅಧಿಕಾರಿಗಳೇ ಪರಿಶೀಲನೆ ನಡೆಸಬೇಕು. ಸದ್ಯಕ್ಕೆ ಯಾವುದೇ ಪರಿಷ್ಕರಣೆ ಇಲ್ಲ. ರದ್ದಾಗಿರುವ ಎಲ್ಲಾ ಬಿಪಿಎಲ್‌ ಕಾರ್ಡ್‌ ವಾಪಸು ನೀಡುತ್ತೇವೆ ಎಂದು ಹೇಳಿದರು.

ಬೇರೆ ಯಾವುದೇ ಮಾನದಂಡ ಪಾಲಿಸಲ್ಲ:

ಬಿಪಿಎಲ್‌ ಕಾರ್ಡ್‌ ಹೊಂದಿರಬೇಕಾದರೆ ಇಂತಿಷ್ಟು ಪ್ರದೇಶಕ್ಕಿಂತ ಹೆಚ್ಚು ಭೂಮಿ ಹೊಂದಿರಬಾರದು ಎಂಬುದು ಸೇರಿದಂತೆ ಹಲವು ಮಾನದಂಡಗಳನ್ನು ಕೇಂದ್ರವು ನೀಡಿದೆ. ಆದರೆ ಆ ಮಾನದಂಡಗಳ ಅಡಿ ಯಾರ ಬಿಪಿಎಲ್‌ ಕಾರ್ಡ್‌ ಕೂಡ ರದ್ದು ಮಾಡುವುದಿಲ್ಲ. ಐಟಿ ಪಾವತಿದಾರರು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಬಿಪಿಎಲ್‌ ರದ್ದು ಮಾಡುತ್ತೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಬಾರ್ಡ್‌ನಿಂದ ಕೃಷಿ ಕಡಿತ; ರೈತರ ಪರ ಎನ್ನುವ ಕುಮಾರಸ್ವಾಮಿ ಈಗ್ಯಾಕೆ ಬಾಯಿಬಿಡುತ್ತಿಲ್: ಚಲುವರಾಯಸ್ವಾಮಿ ಕಿಡಿ

ಗೊಂದಲಗಳಿಗೆ ನಾನೇ ಹೊಣೆ: ಮುನಿಯಪ್ಪ

ರಾಜ್ಯದಲ್ಲಿ ಬಿಪಿಎಲ್‌ ಪರಿಷ್ಕರಣೆಯಿಂದ ಉಂಟಾಗಿರುವ ಗೊಂದಲಗಳಿಗೆ ನಾನೇ ಹೊಣೆ. ಇದರಲ್ಲಿ ಸರ್ಕಾರದ್ದಾಗಲಿ ಅಥವಾ ನಮ್ಮ ಅಧಿಕಾರಿಗಳದ್ದಾಗಲಿ ತಪ್ಪಿಲ್ಲ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು. ನಮ್ಮ ಅಧಿಕಾರಿಗಳಿಗೆ ದಪ್ಪ ಚರ್ಮ ಇಲ್ಲ. ಚರ್ಮ ತೆಳುವಾಗಿದೆ. ಈ ಎಲ್ಲಾ ಗೊಂದಲಗಳಿಗೆ ನಾನೇ ಹೊಣೆ ಎಂದರು.

ಕೇಂದ್ರದ ನಿರ್ಧಾರ ಏಕೆ ಬಿಜೆಪಿ ಪ್ರಶ್ನಿಸುತ್ತಿಲ್ಲ?ಕೇಂದ್ರ ಸರ್ಕಾರವು ದೇಶಾದ್ಯಂತ 5.08 ಕೋಟಿ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದೆ. ಬಿಜೆಪಿಯವರು ಅವರ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಕಿಡಿ ಕಾರಿದರು.

ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಅನ್ನಭಾಗ್ಯಕ್ಕೆ ಯಾವುದೇ ಅನುದಾನ ಕೊರತೆ ಇಲ್ಲ. ಬಿಜೆಪಿಯವರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ ಎಂದರು. 

ವಾರ ಬಿಟ್ಟು ಹೋಗಿ ಅಕ್ಕಿ ಕೊಡುತ್ತಾರೆ

ಈಗ ಬಿಪಿಎಲ್‌ ರದ್ದಾಗಿರುವ ಪಡಿತರ ಚೀಟಿದಾರರು ಯಾರೂ ಅರ್ಜಿ ನೀಡುವ ಅಗತ್ಯವಿಲ್ಲ. ಬಿಪಿಎಲ್‌ ಸಕ್ರಿಯಕ್ಕೆ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ನೀವು ಎಲ್ಲಿ ಅಕ್ಕಿ ತೆಗೆದುಕೊಂಡು ಹೋಗುತ್ತಿದ್ದಿರೋ ಅಲ್ಲೇ ಒಂದು ವಾರ ಬಿಟ್ಟು ಹೋಗಿ, ಅಕ್ಕಿ ಕೊಡುತ್ತಾರೆ.

- ಕೆ.ಎಚ್.ಮುನಿಯಪ್ಪ, ಸಚಿವ-

click me!