ಬಡವರ BPL ಕಾರ್ಡ್ APL ಆಗಿ ಪರಿವರ್ತನೆ! ವಿಧಾನಸಭೆಯಲ್ಲಿ ಪ್ರಪಕ್ಷಾತೀತ ಆಕ್ರೋಶ!

Kannadaprabha News   | Kannada Prabha
Published : Mar 13, 2026, 08:00 AM IST
BPL Card Confusion Sparks Bipartisan Outrage in Karnataka Assembly

ಸಾರಾಂಶ

ರಾಜ್ಯದಲ್ಲಿ ಅನರ್ಹರ ನೆಪದಲ್ಲಿ ಅರ್ಹ ಬಡ ಕುಟುಂಬಗಳ ಬಿಪಿಎಲ್‌ ಕಾರ್ಡುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಳೆಯ ಆದಾಯ ಮಿತಿಯನ್ನು ಪರಿಷ್ಕರಿಸುವಂತೆ ಆಗ್ರಹಿಸಿದರು.

ವಿಧಾನಸಭೆ (ಮಾ.13): ರಾಜ್ಯದಲ್ಲಿ ಅನರ್ಹ ಆದ್ಯತಾ ಪಡಿತರ ಚೀಟಿದಾರರನ್ನು (ಬಿಪಿಎಲ್‌, ಅಂತ್ಯೋದಯ) ಗುರುತಿಸುವ ನೆಪದಲ್ಲಿ ಅರ್ಹ ಕುಟುಂಬಗಳ ಬಿಪಿಎಲ್‌ ಕಾರ್ಡುಗಳನ್ನೂ ಎಪಿಎಲ್‌ಗೆ ಪರಿವರ್ತಿಸಿ ಲಕ್ಷಾಂತರ ಕುಟುಂಬಗಳನ್ನು ಬೀದಿಗೆಳೆಯಲಾಗಿದೆ ಎಂದು ಪ್ರತಿಪಕ್ಷ ಮಾತ್ರವಲ್ಲದೆ ಕೆಲ ಆಡಳಿತ ಪಕ್ಷದ ಸದಸ್ಯರೂ ಸರ್ಕಾರದ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ವಿಧಾನಸಭೆಯಲ್ಲಿ ನಡೆಯಿತು.

ಪ್ರಶ್ನೋತ್ತರ ಅವಧಿ ವೇಳೆ ಆದ್ಯತಾ ಪಡಿತರ ಚೀಟಿ (ಪಿಎಚ್ಎಚ್‌) ಪರಿವರ್ತನೆ ಸಂಬಂಧ ಬಿಜೆಪಿ ಸದಸ್ಯ ಡಾ.ಸಿ.ಎನ್‌.ಅಶ್ವತ್ಥ್‌ನಾರಾಯಣ ಅವರು ಪ್ರಶ್ನಿಸಿ, ಸರ್ಕಾರದ ಕ್ರಮವನ್ನು ವಿರೋಧಿಸಿದರು. ಇದಕ್ಕೆ ದನಿಗೂಡಿಸಿದ ಗೋಪಾಲಯ್ಯ, ಸುರೇಶ್‌ ಬಾಬು, ನಯನಾ ಮೋಟಮ್ಮ ಮತ್ತಿತರ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಸೆಕ್ಯುರಿಟಿ ಗಾರ್ಡ್‌, ಕ್ಯಾಬ್‌ ಡ್ರೈವರ್‌ ಸೇರಿ ಕಡುಬಡವರ ಬಿಪಿಎಲ್‌ ಕಾರ್ಡುಗಳನ್ನೂ ಎಪಿಎಲ್‌ ಆಗಿ ಪರಿವರ್ತಿಸಲಾಗಿದೆ. ಪ್ರತಿ ಕ್ಷೇತ್ರದಲ್ಲೂ 5ರಿಂದ 6 ಸಾವಿರ ಕಾರ್ಡುಗಳನ್ನು ಪರಿವರ್ತಿಸಲಾಗಿದೆ. ಆದಾಯ ತೆರಿಗೆ ವ್ಯಾಪ್ತಿಗೆ ಬರದಿದ್ದರೂ ಐಟಿ ರಿಟರ್ನ್‌ ಸಲ್ಲಿಸಿರುವವರ ಕಾರ್ಡುಗಳನ್ನೂ ಎಪಿಎಲ್‌ ಮಾಡಲಾಗಿದೆ. ಪರಿಶೀಲನೆ ನಡೆಸದೆ ಬೇಕಾಬಿಟ್ಟಿಯಾಗಿ ಪರಿವರ್ತನೆ ಮಾಡಿರುವುದರಿಂದ ಅರ್ಹತೆ ಇದ್ದರೂ ಆದ್ಯತಾ ಪಡಿತರ ಚೀಟಿ ಕಳೆದುಕೊಂಡು ಲಕ್ಷಾಂತರ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಹೊರೆಯಿಂದಾಗಿ ಈ ನಡೆ:

ಅಲ್ಲದೆ, ಗ್ಯಾರಂಟಿ ಹೊರೆ ನಿಭಾಯಿಸಲಾಗದೆ ಅನರ್ಹರ ಬಿಪಿಎಲ್‌ ಕಾರ್ಡ್‌ ಪತ್ತೆ ನೆಪದಲ್ಲಿ ಸಾವಿರಾರು ಬಡ ಕುಟುಂಬಗಳ ಪಡಿತರ ಚೀಟಿಗಳನ್ನೂ ರದ್ದು ಮಾಡಲಾಗಿದೆ ಎಂಟು ಟೀಕಿಸಿದ ಪ್ರತಿಪಕ್ಷ ಸದಸ್ಯರು, ಎಪಿಎಲ್‌ಗೆ ಪರಿವರ್ತಿಸಿರುವ ಕಾರ್ಡುಗಳನ್ನು ಕೂಡಲೇ ಬಿಪಿಎಲ್‌ಗೆ ಮರು ಪರಿವರ್ತಿಸಿ ಬಡ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಸರ್ಕಾರ ಬೇಕಿದ್ದರೆ ಪ್ರತಿ ಕುಟುಂಬದ ಪರಿಶೀಲನೆ ನಡೆಸಿ ನಂತರ ಪರಿವರ್ತನೆ ಮಾಡಲಿ ಎಂದು ಆಗ್ರಹಿಸಿದರು.

ಡಾ.ಅಶ್ವತ್ಥ್‌ನಾರಾಯಣ ಮಾತನಾಡಿ, ಆದ್ಯತಾ ಪಡಿತರ ಚೀಟಿಗಳನ್ನು ಪಡೆಯಲು 2017ರ ಮಾನದಂಡಗಳನ್ನು ಎಂಟು ವರ್ಷ ಕಳೆದರೂ ಸರ್ಕಾರ ಪರಿಷ್ಕರಿಸಿಲ್ಲ. ಇವತ್ತು ತಿಂಗಳಿಗೆ 10 ಸಾವಿರ ಸಂಬಳ ತೆಗೆದುಕೊಳ್ಳುವವನ ಆದಾಯವೂ ವರ್ಷಕ್ಕೆ 1.20 ಲಕ್ಷ ರು. ಆಗುತ್ತದೆ. ಆದರೆ, ಈ ಮಾನದಂಡ ಇಟ್ಟುಕೊಂಡು ಲಕ್ಷಾಂತರ ಕುಟುಂಬಗಳು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದರೂ ಐಟಿ ರಿಟರ್ನ್‌ ಪಡೆದಿರುವ ಕುಟುಂಬಗಳ ಬಿಪಿಎಲ್‌ ಕಾರ್ಡು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಆಹಾರ ಭದ್ರತಾ ಕಾಯ್ದೆ ಅನುಸಾರ ನಗರ ಪ್ರದೇಶದಲ್ಲಿ ಶೇ.50ರಷ್ಟು, ಗ್ರಾಮೀಣ ಭಾಗದಲ್ಲಿ ಶೇ.75ರಷ್ಟು ಜನರಿಗೆ ಆದ್ಯತಾ ಪಡಿತರ ಚೀಟಿ ನೀಡಬೇಕು. ಆದರೆ, ಸರ್ಕಾರ ಇದನ್ನು ಪಾಲಿಸುತ್ತಿಲ್ಲ. ಅಂಗವಿಕಲರು, ವಿಧವೆಯರು, ವಯೋವೃದ್ಧರಿಗೆ, ವೃತ್ತಿ ಆಧಾರಿತವಾಗಿ ಆದ್ಯತಾ ಪಡಿತರ ಚೀಟಿ ನೀಡಬೇಕು. ಸರ್ಕಾರ ಇದ್ಯಾವುದನ್ನೂ ಪಾಲಿಸಿಲ್ಲ ಎಂದು ಆರೋಪಿಸಿದರು.

1.20 ಲಕ್ಷ ರು. ಆದಾಯ ಮಾನದಂಡ ಸರಿಯಲ್ಲ:

ಸದಸ್ಯರ ಪ್ರಶ್ನೆಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ಪರವಾಗಿ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, 2017ರ ಮಾದನಂಡಗಳನ್ನು ಈಗಲು ಅನುಸರಿಸುತ್ತಿರುವುದು ಸರಿಯಲ್ಲ. ವಾರ್ಷಿಕ 1.20 ಲಕ್ಷ ರು. ಆದಾಯ ಮಾನದಂಡ ಒಪ್ಪುವಂತಹದ್ದಲ್ಲ. ಪರಿಷ್ಕರಣೆ ಅಗತ್ಯವಿದೆ. ಆಡಳಿತ ಸುಧಾರಣಾ ಆಯೋಗ ಕೂಡ ಇದನ್ನು 3 ಲಕ್ಷ ರು.ಗಳಿಗೆ ಹೆಚ್ಚಿಸಬೇಕೆಂದು ಹೇಳಿದೆ. ಆಹಾರ ಇಲಾಖೆ ಈ ಬಗ್ಗೆ ಮುಂದೆ ಗಮನ ಹರಿಸಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಇವ ನಮ್ಮವ' ವಿಧೇಯಕ: ಮರ್ಯಾದೆಗೇಡು ಹತ್ಯೆ ತಡೆವ ಮಸೂದೆಗೆ ಸಂಪುಟ ಸಭೆ ಅಸ್ತು
683 ಕೋಟಿ ವೆಚ್ಚದಲ್ಲಿ 76 ಮೌಲಾನಾ, 41 ಉರ್ದು ಶಾಲೆ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ