ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅ.5ರಿಂದ 13ರವರೆಗೆ ಆಹಾರ ಇಲಾಖೆ ಮತ್ತೊಮ್ಮೆ ಅವಕಾಶ ನೀಡಿದೆ.
ಬೆಂಗಳೂರು (ಅ.06): ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅ.5ರಿಂದ 13ರವರೆಗೆ ಆಹಾರ ಇಲಾಖೆ ಮತ್ತೊಮ್ಮೆ ಅವಕಾಶ ನೀಡಿದೆ. ಬೆಂಗಳೂರು ವಲಯದ ಜಿಲ್ಲೆಗಳಲ್ಲಿ ಅ.5ರಿಂದ 7ರವರೆಗೆ, ಕಲಬುರಗಿ ವಲಯದಲ್ಲಿ ಅ.8ರಿಂದ 10ರವರೆಗೆ ಮತ್ತು ಬೆಳಗಾವಿ ವಲಯದಲ್ಲಿ ಅ.11ರಿಂದ 13ರವರೆಗೆ ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ರದ್ದು ಮತ್ತು ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳಬಹುದು.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 7 ಗಂಟೆಯವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಈ ಹಿಂದೆ ಸೆ.9ರಿಂದ 14ರವರೆಗೆ ಆಹಾರ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ, ಸರ್ವರ್‌ಡೌನ್ ಆಗಿ ತಿದ್ದುಪಡಿ ಮಾಡಲು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಸೇವಾ ಕೇಂದ್ರದಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಜಾತಿಗಣತಿಯಿಂದ ಮೀಸಲಾತಿ ಹೆಚ್ಚಳಕ್ಕೆ ಅನುಕೂಲ: ಗೃಹ ಸಚಿವ ಪರಮೇಶ್ವರ್
ಗ್ರಾಮಒನ್, ಬ್ಯಾಂಕ್‌ಗಳಿಗೆ ‘ಗೃಹಲಕ್ಷ್ಮಿ’ಯರ ಅಲೆದಾಟ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಆರಂಭವಾಗಿ ಎರಡನೇ ತಿಂಗಳಿಗೆ ಕಾಲಿರಿಸಿದೆ. ಆದರೆ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದಿರುವುದು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಲಕ್ಷಾಂತರ ಮಂದಿಗೆ ಇನ್ನೂ ಗೃಹಲಕ್ಷ್ಮೀ ಹಣ ಕೈಸೇರಿಲ್ಲ. ಅರ್ಜಿ ಹಾಕಿದ ಮಹಿಳೆಯರು ಹಣ ಬಾರದೆ ಇರುವುದಕ್ಕೆ ಏನು ಕಾರಣ, ಅದಕ್ಕೆ ಅಗತ್ಯವಾಗಿ ಮಾಡಬೇಕಾದ ಪ್ರಕ್ರಿಯೆಗಳೇನು ಎಂಬುದೇ ತಿಳಿಯದೆ ಗ್ರಾಮ ಒನ್ ಕೇಂದ್ರಗಳು, ಬ್ಯಾಂಕ್- ಅಂಚೆ ಕಚೇರಿಗಳು, ಗ್ರಾಮ ಕಚೇರಿಗಳಿಗೆ ನಿತ್ಯವೂ ಅಲೆದಾಡಿ ರೋಸಿಹೋಗಿದ್ದಾರೆ.
ರಾಜ್ಯದಲ್ಲಿ 1.10 ಕೋಟಿಗೂ ಅಧಿಕ ಮಂದಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದಾರೆ. ಆದರೆ ಪ್ರತಿಯೊಂದು ಜಿಲ್ಲೆಯಲ್ಲೂ 10-15 ಸಾವಿರ ಮಂದಿಗೆ ಕಳೆದ ತಿಂಗಳ ಹಣ ತಲುಪಿಲ್ಲ. ಹಣ ಬರಬೇಕಾದರೆ ಅರ್ಜಿದಾರರು ಅಗತ್ಯವಾಗಿ ಮಾಡಬೇಕಾದ ಪ್ರಕ್ರಿಯೆಗಳನ್ನು ಪೂರೈಸಲು ಅಂಗನವಾಡಿ ಕಾರ್ಯಕರ್ತರ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ- ತಿಳುವಳಿಕೆ ಕಡಿಮೆ ಇರುವವರಿಗೆ ಇದು ಏನೆಂದೇ ಅರ್ಥವಾಗುತ್ತಿಲ್ಲ. ಹಾಗಾಗಿ ಬ್ಯಾಂಕ್‌ಗಳು, ಅಂಚೆ ಕಚೇರಿಗಳಿಗೆ ಎಡತಾಕುವುದು ನಿಂತಿಲ್ಲ.
ರಾಜ್ಯದ ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ
ಯಾಕೆ ಸಮಸ್ಯೆ?: ಗೃಹಲಕ್ಷ್ಮಿ ಹಣ ಬರಬೇಕಾದರೆ ಅರ್ಜಿ ಸಲ್ಲಿಕೆ ಮೊದಲು ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡಿರಬೇಕು. ಬ್ಯಾಂಕ್ ಖಾತೆಯಲ್ಲಿರುವ ಅರ್ಜಿದಾರರ ಹೆಸರು, ಆಧಾರ್ ಹೆಸರು, ಪಡಿತರ ಚೀಟಿ ಹೆಸರು ಒಂದೇ ರೀತಿಯಲ್ಲಿರಬೇಕು. ಪಡಿತರ ಚೀಟಿಗೆ ಕೆವೈಸಿ ಆಗಿರಬೇಕು. ಸಾಮಾನ್ಯವಾಗಿ ಈ ಎಲ್ಲ ಪ್ರಕ್ರಿಯೆಗಳ ಬಳಿಕವೇ ಅರ್ಜಿ ಸ್ವೀಕಾರವಾಗಿರುತ್ತದೆ. ಮುಖ್ಯವಾಗಿ ಬ್ಯಾಂಕ್ ಅಕೌಂಟ್‌ಗೆ ಆಧಾರ್‌ನ್ನು ಎನ್‌ಪಿಸಿಐಗೆ ಸೀಡಿಂಗ್ ಮಾಡಿರಬೇಕು. ಇದನ್ನು ಮಾಡಿದರೆ ಮಾತ್ರ ಯೋಜನೆಯ 2 ಸಾವಿರ ರು. ಹಣ ಬರುತ್ತದೆ. ಅರ್ಜಿ ಹಾಕುವಾಗ ಆಧಾರ್ ಸೀಡಿಂಗ್ ಆಗದೆ ಇರುವುದರಿಂದಲೇ ಹೆಚ್ಚಿನವರಿಗೆ ಹಣ ತಲುಪಿಲ್ಲ.