* ಅರ್ಚಕರು, ಮುಜಾವರರು, ಭಕ್ತರಿಗೆ ಅವಕಾಶಕ್ಕೆ ಶಿಫಾರಸು
* ಉಪಸಮಿತಿ ವರದಿಗೆ ಸಂಪುಟ ಒಪ್ಪಿಗೆ
* ಶೀಘ್ರ ಹೈಕೋರ್ಟ್‌ಗೆ ಸಲ್ಲಿಕೆ
ಬೆಂಗಳೂರು(ಜು.02): ಬಾಬಾಬುಡನ್‌ಗಿರಿ ದತ್ತಪೀಠದಲ್ಲಿ ಪೂಜೆ ಮಾಡಲು ಅರ್ಚಕರು ಮತ್ತು ಮುಜಾವರರಿಗೆ ಅವಕಾಶ ನೀಡುವುದು, ದರ್ಗಾ ಮತ್ತು ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಎರಡೂ ಸಮುದಾಯಕ್ಕೆ ಅವಕಾಶ ಕೊಡುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಸಚಿವ ಸಂಪುಟ ಉಪಸಮಿತಿ ಮಾಡಿದೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದತ್ತಪೀಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಸಂಬಂಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿಗೆ ಅನುಮೋದನೆ ನೀಡಲಾಯಿತು.
undefined
ದತ್ತಪೀಠ ವಿವಾದ: ಮುಸ್ಲಿಂರನ್ನು ಒದ್ದು ಓಡಿಸಬೇಕು: ಪ್ರಮೋದ್ ಮುತಾಲಿಕ್
ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ದತ್ತಪೀಠ ವಿಚಾರವಾಗಿ ಸಚಿವ ಸಂಪುಟ ಉಪಸಮಿತಿ ವರದಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹೈಕೋರ್ಚ್‌ಗೆ ವರದಿ ಸಲ್ಲಿಸಲಾಗುವುದು. ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವ ಕಾರಣ ವರದಿಯ ಅಂಶಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ’ ಎಂದರು.
‘ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳ ದಿನಚರಿ ರೂಪಿಸಲು ವ್ಯವಸ್ಥಾಪನಾ ಸಮಿತಿಗೆ ಜವಾಬ್ದಾರಿ ನೀಡುವುದು, ವ್ಯವಸ್ಥಾಪನಾ ಸಮಿತಿಗೆ ಅರ್ಚಕ ಮತ್ತು ಮುಜಾವರ ನೇಮಕಾತಿ ಜವಾಬ್ದಾರಿ ವಹಿಸುವ ಬಗ್ಗೆ ಶಿಫಾರಸು ಮಾಡಲಾಗಿದೆ. ಅಲ್ಲದೇ, ದರ್ಗಾ ಮತ್ತು ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಎರಡು ಸಮುದಾಯಕ್ಕೆ ಅವಕಾಶ, ವ್ಯವಸ್ಥಾಪನಾ ಸಮಿತಿಯಿಂದ ಉರುಸ್ ಮತ್ತು ಪೂಜಾ ಪುನಸ್ಕಾರಗಳಿಗೆ ಮೇಲ್ವಿಚಾರಣೆ ಮತ್ತು ಪೂಜೆ ಮಾಡಲು ಅರ್ಚಕರು ಮತ್ತು ಮುಜಾವರರಿಗೆ ಅವಕಾಶ ನೀಡುವ ಕುರಿತು ಶಿಫಾರಸು ಮಾಡಿದೆ’ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಂ ಮುಜಾವರರ ನೇಮಕ ಪ್ರಶ್ನಿಸಲಾಗಿತ್ತು:
ಬಾಬಾಬುಡನ್‌ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಹಿಂದೂ ಸಂಪ್ರದಾಯದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಸ್ಲಿಂ ಸಮುದಾಯದ ಮುಜಾವರ ನೇಮಿಸಿ ರಾಜ್ಯ ಸರ್ಕಾರ 2018ರ ಮಾ.19ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿತ್ತು. ಸರ್ಕಾರದ ಆದೇಶವನ್ನು ನ್ಯಾಯಾಲಯದ ಏಕಸದಸ್ಯ ಪೀಠವು 2021ರ ಫೆ.28ರಂದು ರದ್ದುಪಡಿಸಿ ಆದೇಶಿಸಿತ್ತು.
Chikkamagaluru Datta Peetaದಲ್ಲಿ ನಿಲ್ಲದ ವಿವಾದ, ಭಜರಂಗದಳ ಎಂಟ್ರಿ
ನ್ಯಾ.ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರಕರಣವನ್ನು ಕಾನೂನು ರೀತಿ ಹೊಸದಾಗಿ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿತ್ತು. ನ್ಯಾಯಾಲಯದ ಆದೇಶವನ್ನು ಷಾ ಖಾದ್ರಿ ಎಂಬುವವರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರವು ಮೂವರು ಸಚಿವರನ್ನೊಳಗೊಂಡ ಸಚಿವ ಸಂಪುಟದ ಉಪಸಮಿತಿ ರಚಿಸಿತ್ತು. ಕಾನೂನು ಸಚಿವ, ಗೃಹ ಮತ್ತು ಮುಜರಾಯಿ ಸಚಿವರ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವಿಸ್ತೃತವಾಗಿ ಸಮಾಲೋಚನೆ ನಡೆಸಿತು. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸರ್ಕಾರ ಸಮಯ ಕೇಳಿತ್ತು. ನ್ಯಾಯಾಲಯವು ಸಹ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಸಲ್ಲಿಸಲಾಗುವುದು.