
ಬೆಂಗಳೂರು[ಜ.04]: ಕಳೆದ ಒಂದು ವರ್ಷದ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಡೆಸಿದ ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆಯೇ?
ಹೌದು, ಇಂತಹದೊಂದು ಅನುಮಾನ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸೋಮಪ್ಪ ಮೇಲಿನಮನಿ (34) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಡೆಸಿದ ನಿರ್ವಾಹಕ ಹುದ್ದೆಯಲ್ಲಿ ಟಾಪ್ ರಾರಯಂಕ್ ಪಡೆದು ಆಯ್ಕೆಯಾಗಿರುವುದು ಇಂತಹದೊಂದು ಸಂಶಯಕ್ಕೆ ಕಾರಣವಾಗಿದೆ.
ಆರೋಪಿ ಬಿಎಂಟಿಸಿ ಪರೀಕ್ಷೆಯಲ್ಲಿ ಟಾಪ್ ರಾರಯಂಕ್ ಪಡೆದಿರುವ ಆಯ್ಕೆ ಪಟ್ಟಿ ಲಭ್ಯವಾಗಿದೆ. ಇನ್ನು ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಜ.7ರ ತನಕ ವಶಕ್ಕೆ ಪಡೆದಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಹುದ್ದೆಯ ನೇಮಕಾತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರತಿಯೊಂದು ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಪರಾಧ ವಿಭಾಗದ ಆಯುಕ್ತ ಅಲೋಕ್ ಕುಮಾರ್ ಪತ್ರಿಕೆಗೆ ತಿಳಿಸಿದರು.
ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ; ಉನ್ನತ ಅಧಿಕಾರಗಳ ಕೈವಾಡ
ಮೂಲತಃ ವಿಜಯಪುರ ಜಿಲ್ಲೆಯ ಸೋಮಪ್ಪ ಮೇಲಿನಮನಿಗೆ ವಿವಾಹವಾಗಿದ್ದು, ಕುಟುಂಬ ಊರಿನಲ್ಲಿಯೇ ನೆಲೆಸಿದೆ. ನವೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆಯನ್ನು ಕಿಂಗ್‌ಪಿನ್ ಶಿವಕುಮಾರಯ್ಯ ಸೋರಿಕೆ ಮಾಡಿದ್ದ. ಶಿವಕುಮಾರಯ್ಯ ಸೇರಿ ಪರೀಕ್ಷೆ ಬರೆಯಬೇಕಿದ್ದ ಸುಮಾರು 110 ಮಂದಿಯನ್ನು ನ.24ರಂದು ಸಿಸಿಬಿ ತಂಡ ಶ್ರವಣಬೆಳಗೊಳದ ಕಲ್ಮಠದಲ್ಲಿ ಬಂಧಿಸಿತ್ತು. ಈ ವೇಳೆ ಪ್ರಮುಖ ಆರೋಪಿ ಬಸವರಾಜ್ ತಲೆಮರೆಸಿಕೊಂಡಿದ್ದ. ಬಸವರಾಜ್ ಜತೆ ಸೋಮಪ್ಪ ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ. ಈತನೇ ಉತ್ತರ ಕರ್ನಾಟಕ ಭಾಗದ ಹಲವು ಅಭ್ಯರ್ಥಿಗಳನ್ನು ಸಂಪರ್ಕಸಿ ಬಸವರಾಜ್‌ಗೆ ಪರಿಚಯಿಸಿದ್ದ. ಸೋಮಪ್ಪನ ಸೂಚನೆ ಮೇರೆಗೆ ಅಭ್ಯರ್ಥಿಗಳು ಬಸ್ ಮೂಲಕ ಶ್ರವಣಬೆಳಗೊಳಕ್ಕೆ ತೆರಳಿದ್ದರು. ಈ ವೇಳೆ ಸೋಮಪ್ಪ ಜತೆಗಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
120 ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ
ಇನ್ನು ವಿಚಾರಣೆ ವೇಳೆ 2018ರ ಜೂ.10ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಡೆಸಿದ್ದ ಕ್ಯಾಟ್ ಪರೀಕ್ಷೆಯಲ್ಲಿ 76.25 ಅಂಕ ಪಡೆದು ಸಾಮಾನ್ಯ ವರ್ಗದಲ್ಲಿ ಮೊದಲ ರಾರಯಂಕ್ ಗಳಿಸಿದ್ದ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳಿಂದ ಸೋಮಪ್ಪ ನಗರದ ಹೊರ ವಲಯದ ಜಿಗಣಿ ಡಿಪೋನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದಾನೆ. ಬಿಎಂಟಿಸಿ ಸಂಸ್ಥೆ ನಡೆಸಿರುವ ಪರೀಕ್ಷೆ ಬಗ್ಗೆಯೂ ಆರೋಪಿಯಿಂದ ಮಾಹಿತಿ ಕಲೆ ಹಾಕಲಾಗುವುದು ಎಂದು ತನಿಖಾಧಿಕಾರಿಗಳು ವಿವರಿಸಿದರು.
-ಎನ್.ಲಕ್ಷ್ಮಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ