ನಿರೀಕ್ಷಿತ ರೀತಿ ಕೋವಿಡ್‌ ಕೆಲಸ ಆಗುತ್ತಿಲ್ಲ: ಬಿ.ಎಲ್‌. ಸಂತೋಷ್‌ ಅಸಮಾಧಾನ

By Kannadaprabha NewsFirst Published May 14, 2021, 10:30 AM IST
Highlights

* 2500ಕ್ಕೂ ಹೆಚ್ಚು ಕಾರ್ಯಕರ್ತರ ಜತೆ ಸಂತೋಷ್‌ ಸಂವಾದ
* ‘ಸೇವೆಯೇ ಸಂಘಟನೆ’ ಎಂಬ ತತ್ವದ ಅಡಿ ಹಮ್ಮಿಕೊಂಡಿರುವ ಚಟುವಟಿಕೆಗಳ ಪರಿಶೀಲನೆ
* ಆಡಳಿತರೂಢ ಪಕ್ಷವಾಗಿ ನಾವು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು 

ಬೆಂಗಳೂರು(ಮೇ.14): ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಕರ್ನಾಟಕ ದಾಖಲೆಯತ್ತ ದಾಪುಗಾಲು ಇರಿಸಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಕಳೆದ ಎರಡು ದಿನಗಳಿಂದ ಸತತ ಸಭೆಗಳನ್ನು ನಡೆಸುವ ಮೂಲಕ ಸರ್ಕಾರ ಮತ್ತು ಪಕ್ಷದ ಮುಖಂಡರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.

ಹೆಚ್ಚೂ ಕಡಮೆ ಸುಮಾರು ಎರಡೂವರೆ ಸಾವಿರ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೂಲಕ ಪ್ರಸಕ್ತ ಸನ್ನಿವೇಶದಲ್ಲಿ ಹೇಗೆ ನಡೆದುಕೊಳ್ಳಬೇಕು, ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜತೆಗೆ ನಿರೀಕ್ಷಿತ ಮಟ್ಟದ ಕೆಲಸ ನಡೆಯುತ್ತಿಲ್ಲ ಎಂಬ ಆಸಮಾಧಾನವನ್ನೂ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

"

ಮಂಗಳವಾರ ತಡರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಅವರು ಬುಧವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌, ಎಸ್‌.ಟಿ.ಸೋಮಶೇಖರ್‌ ಸೇರಿದಂತೆ ಹಲವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.
ಗುರುವಾರ ಪಕ್ಷದ ಕಚೇರಿಯಲ್ಲೇ ಕುಳಿತು ವೀಡಿಯೋ ಸಂವಾದದ ಮೂಲಕ ವಿಭಾಗವಾರು ಹಾಗೂ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ಅವರು ‘ಸೇವೆಯೇ ಸಂಘಟನೆ’ ಎಂಬ ತತ್ವದ ಅಡಿ ಹಮ್ಮಿಕೊಂಡಿರುವ ಚಟುವಟಿಕೆಗಳ ಪರಿಶೀಲನೆ ನಡೆಸಿದರು.

‘ಆಶಾ’ ಗೋಳು ಕೇಳುವವರಿಲ್ಲ: ವಿಶೇಷ ಪ್ರೋತ್ಸಾಹಧನ ನೀಡಲು ಸರ್ಕಾರ ಹಿಂದೇಟು

ಈ ವೇಳೆ ಅವರು ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇರುವಾಗ ಕೋವಿಡ್‌ ಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸದಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇದುವರೆಗೆ ಮಾಡಿರುವ ಚಟುವಟಿಕೆಗಳು ಸಮಾಧಾನ ತರುವಂತಿಲ್ಲ. ಆಡಳಿತರೂಢ ಪಕ್ಷವಾಗಿ ನಾವು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಜನರಿಗೆ ಬೇಕಾದ ಸೌಲಭ್ಯ, ನೆರವನ್ನು ಸರ್ಕಾರದಿಂದ ಅಥವಾ ಸ್ವಯಂ ಸಂಘಟನೆಗಳ ಮೂಲಕ ತಲುಪಿಸುವ ಹೊಣೆ ಹೊರಬೇಕು. ಜತೆಗೆ ಕೋವಿಡ್‌ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನೇನು ಮಾಡಿವೆ ಎಂಬುದನ್ನು ಜನರಿಗೆ ತಿಳಿಸಬೇಕು. ಅಲ್ಲದೆ, ಪ್ರತಿಪಕ್ಷಗಳ ಅಪಪ್ರಚಾರಕ್ಕೆ, ಸುಳ್ಳು ಆರೋಪಗಳಿಗೆ ತಕ್ಕ ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಅವರು ಸೂಚನೆ ನೀಡಿದರು ಎನ್ನಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!