
ಬೆಂಗಳೂರು (ಮೇ.22) : ಸಮಾಜವನ್ನು ಕಟ್ಟುವ ಕೆಲಸಕ್ಕೆ ಯಾವುದೇ ಧನ್ಯವಾದ, ಅಭಿನಂದನೆ ಸಿಗುವುದಿಲ್ಲ. ಇದು ‘ಧನ್ಯವಾದ ರಹಿತ ಕೆಲಸ’ ಎಂದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾರ್ಮಿಕವಾಗಿ ಹೇಳಿದ್ದಾರೆ.
ಸಾವರ್ಕರ್ ಸಾಹಿತ್ಯ ಸಂಘದಿಂದ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್(Indian Institute of Wilder Culture)ನಲ್ಲಿ ಆಯೋಜಿಸಿದ್ದ ಸಾವರ್ಕರ್ ಸಮಗ್ರ ಯೋಜನೆಯ ಆರನೇ ಸಂಪುಟ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಲ್ಲರಿಗೂ ಒಪ್ಪಿಗೆ ಆಗುವ ಮಾರ್ಗವನ್ನು ಸಾವರ್ಕರ್ ಹೇಳಲಿಲ್ಲ. ಸಾವರ್ಕರ್ ರೀತಿ ಜೀವಿಸಬೇಕಾದರೆ ನಮ್ಮ ಬದುಕನ್ನು ಸುಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಅನೇಕರು ಸಾವರ್ಕರ್‌ರನ್ನು ಕಡೆಗಣಿಸಿದರು. ತಾವು ಸಾವರ್ಕರ್ ಅವರನ್ನು ಒಪ್ಪಿಕೊಂಡರೆ ಅವರ ರೀತಿಯೇ ಇರಬೇಕಾಗುತ್ತದೆ ಎಂದು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಅನೇಕ ಅಯೋಗ್ಯರಿಗೆ ಮೃತಪಟ್ಟನಂತರವಾದರೂ ಗೌರವ ಸಿಗುತ್ತದೆ. ಆದರೆ ಸಮಕಾಲೀನವಾಗಿ ಸಾವರ್ಕರ್‌ರಿಗೆ ಆ ಗೌರವವೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರಾಂತಿಕಾರಿಗಳು, ದೇಶಭಕ್ತರನ್ನು ಒಂದು ಸಿದ್ಧಾಂತಕ್ಕೆ ಬ್ರ್ಯಾಂಡ್ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ ಈ ತಂತ್ರವನ್ನು ಶಾಶ್ವತವಾಗಿ ಮಾಡಲು ಸಾಧ್ಯವಿಲ್ಲ. ಭಾರತ ಬಂಜೆಯಲ್ಲ. ಸಾವರ್ಕರ್ ಅವರನ್ನು ಸರ್ವಾಧಿಕಾರಿ, ಹಿಟ್ಲರ್ ಅನುಯಾಯಿ ಎಂದು ಬಿಂಬಿಸಲಾಯಿತು. ಅದೇ ಸಾವರ್ಕರ್ ಜನ್ಮದಿನದಂದು, ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ ಭವನ ಉದ್ಘಾಟನೆ ಆಗುತ್ತಿರುವುದು ಇತಿಹಾಸವನ್ನು ಸರಿಪಡಿಸುವ ಕೆಲಸವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾವರ್ಕರ್ ಸಮಗ್ರ ಯೋಜನೆಯ ಪ್ರಧಾನ ಸಂಪಾದಕ ಡಾಜಿ.ಬಿ.ಹರೀಶ್, ಲೇಖಕಿ ಡಾ ಎಸ್.ಆರ್.ಲೀಲಾ, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ಸಾವರ್ಕರ್ ಸಾಹಿತ್ಯ ಸಂಘದ ಹರ್ಷ ಸಮೃದ್ಧ, ಲೇಖಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ರಮೇಶ ದೊಡ್ಡಪುರ ಉಪಸ್ಥಿತರಿದ್ದರು.
‘ವಿರೋಧಿಗಳಿಗೆ ಕಪಾಳಮೋಕ್ಷ’
ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಸಾವರ್ಕರ್ ಜನ್ಮದಿನದಂದೇ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಇದು ಸಾವರ್ಕರ್ ವಿರೋಧಿಗಳಿಗೆ ಕಪಾಳಮೋಕ್ಷವಾಗಿದೆ. ಸಾವರ್ಕರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನೇಕ ಸುಳ್ಳು ಹೇಳಿದ್ದು ಮಾನಹಾನಿಕರ ಪ್ರಕರಣ ದಾಖಲಿಸಿದ್ದೇನೆ ಎಂದು ತಿಳಿಸಿದರು.
ಗೋಪಾಲಕೃಷ್ಣ ಗೋಖಲೆ ಅವರೊಂದಿಗಿನ ಭಿನ್ನಮತದಿಂದಾಗಿ ಅವರ ಮೇಲೆ ದಾಳಿ ನಡೆಸಲು ಹೋಗುತ್ತಿದ್ದವರನ್ನು ಸಾವರ್ಕರ್ ತಡೆದಿದ್ದರು. ಮಹಮ್ಮದ್ ಆಲಿ ಜಿನ್ನಾ ಮೇಲೆ ದಾಳಿ ಮಾಡುವುದನ್ನು ವಿರೋಧಿಸಿ ಸಾವರ್ಕರ್ ಪತ್ರ ಬರೆದಿದ್ದರು. ಮಹಾತ್ಮಾ ಗಾಂಧೀಜಿಯವರ ಹತ್ಯೆ ಮಾಡಿದ್ದಕ್ಕೆ ನಾಥೂರಾಮ… ಗೋಡ್ಸೆಯನ್ನು ಸಾವರ್ಕರ್ ಖಂಡಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಸಾವರ್ಕರ್ ಸಾಹಿತ್ಯ ಸಂಘದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವಲ್ಡ್‌ರ್ ಕಲ್ಚರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಾವರ್ಕರ್ ಸಮಗ್ರ ಯೋಜನೆಯ ಆರನೇ ಸಂಪುಟ’ವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಲೋಕಾರ್ಪಣೆಗೊಳಿಸಿದರು. ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್, ಲೇಖಕರಾದ ಡಾ
ಜಿ.ಬಿ.ಹರೀಶ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ