
ಬೆಂಗಳೂರು (ಮೇ.22) : ಕೆ.ಆರ್.ಸರ್ಕಲ್‌ನಲ್ಲಿ ಮಳೆ ದುರಂತ ಘಟನೆ ಹಿನ್ನೆಲೆಯಲ್ಲಿ ನಗರದ ಎಲ್ಲಾ ಅಂಡರ್ ಪಾಸ್‌ಗಳಲ್ಲಿ ಸುರಕ್ಷತೆ ಪರಿಶೀಲಿಸಿ, ಅಪಾಯಕಾರಿ ಅಂಡರ್ ಪಾಸ್‌ಗಳನ್ನು ದುರಸ್ತಿ ಪಡಿಸುವವರೆಗೆ ಬಂದ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಸೂಚಿಸಿದ್ದಾರೆ.
ನಗರದಲ್ಲಿ ಭಾರಿ ಮಳೆ ಸುರಿದು ಅನೇಕ ಕಡೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಭಾನುವಾರ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ನಗರ ಪೊಲೀಸ್ ಆಯುಕ್ತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ತುರ್ತು ಸಭೆ ನಡೆಸಿದ ಅವರು, ನಗರದಲ್ಲಿರುವ ಎಲ್ಲ ಅಂಡರ್ ಪಾಸ್‌ಗಳಲ್ಲಿ ಸುರಕ್ಷತೆಯನ್ನು ಪರಿಶೀಲನೆ ಮಾಡಬೇಕು. ಮಳೆ ನೀರು ತುಂಬಿಕೊಳ್ಳುವ ಸಾಧ್ಯತೆ ಇರುವ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವವರೆಗೆ ಬಂದ್ ಮಾಡುವಂತೆ ನಿರ್ದೇಶಿಸಿದರು. ಅಲ್ಲದೇ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
Bengaluru rains: ಮಳೆಗೆ ಯುವತಿ ಬಲಿ: ಬಿಬಿಎಂಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಮಳೆಯಿಂದ ಉರುಳಿ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಮಳೆ ಅನಾಹುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿ ಸಾರ್ವಜನಿಕರಿಗೆ ತೊಂದರೆ ಉಂಟಾದರೆ, ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಮಾದರಿಗೆ ತುಷಾರ್ ಸೂಚನೆ
ನಗರದ ಅಂಡರ್ ಪಾಸ್‌ಗಳ ಪರಿಶೀಲನೆಗೆ ಮುಖ್ಯಮಂತ್ರಿ ಸೂಚನೆ ನೀಡುತ್ತಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದೆಹಲಿ ಮಾದರಿಯಲ್ಲಿ ಮಳೆ ನೀರು ಅಂಡರ್ ಪಾಸ್ ಸೇರದಂತೆ ಕ್ರಮ ಕೈಗೊಳ್ಳುವುದಕ್ಕೆ ನಿರ್ದೇಶಿಸಿದ್ದಾರೆ.
ನಗರದಲ್ಲಿರುವ 18 ರಿಂದ 20 ಅಂಡರ್ ಪಾಸ್‌ಗಳ ಸುರಕ್ಷತೆಯ ಬಗ್ಗೆ ತ್ವರಿತವಾಗಿ ವರದಿ ನೀಡುವಂತೆ ಬಿಬಿಎಂಪಿ ಎಂಜಿನಿಯರ್ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಜತೆಗೆ, ಅಂಡರ್ ಪಾಸ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಮಳೆ ನೀರು ನಿಂತುಕೊಳ್ಳುವ ಸ್ಥಿತಿ ಇದ್ದರೆ, ನೀರು ಅಂಡರ್ ಪಾಸ್‌ಗೆ ಹೋಗದಂತೆ ವ್ಯವಸ್ಥೆ ಮಾಡಬೇಕು. ದೆಹಲಿಯಲ್ಲಿ ಅಂಡರ್ ಪಾಸ್‌ಗಳ ಮಾದರಿಯಲ್ಲಿ ಅಂಡರ್ ಪಾಸ್‌ಗೆ ಚಾವಣಿ ವ್ಯವಸ್ಥೆ ಮತ್ತು ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅತಿ ಅವಧಿಯಲ್ಲಿ ಹೆಚ್ಚು ಮಳೆ
ನಗರದಲ್ಲಿ ಏಕಾಏಕಿ ಧಾರಾಕಾರವಾಗಿ ಭಾರೀ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಸಾಕಷ್ಟುಮರ ಬಿದ್ದಿವೆ. ತೆರವುಗೊಳಿಸಲು ವಿಧಾನಸಭಾ ಕ್ಷೇತ್ರವಾರು 28 ತಂಡಗಳು ಹಾಗೂ 13 ಹೆಚ್ಚುವರಿ ತಂಡಗಳು ಇವೆ. ಭಾನುವಾರ ಬಿದ್ದ ಮರದ ಕೊಂಬೆ ತೆರವು ಮಾಡಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಸಹಾಯವಾಣಿ ಕೇಂದ್ರ ಸಜ್ಜು
ಬಿಬಿಎಂಪಿಯ ಎಲ್ಲಾ ಸಹಾಯವಾಣಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಕೇಂದ್ರದಲ್ಲಿ ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ದಳ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇರಲಿದ್ದಾರೆ. ಬರುವ ದೂರುಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಪರಿಹಾರ ಕೈಗೊಳ್ಳಲಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಮೃತ ಯುವತಿಗೆ .5 ಲಕ್ಷ ಪರಿಹಾರ: ಸಿಎಂ ಘೋಷಣೆ
ನಗರದ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಭಾನುರೇಖಾ (23) ಅವರ ಕುಟುಂಬಕ್ಕೆ ಸ್ವಾಂತನ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಭಾನುವಾರ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಮೃತ ಯುವತಿ ಹಾಗೂ ಗಾಯಾಳುಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯವಾಡ ಮೂಲದವರು ಬೆಂಗಳೂರು ನಗರ ವೀಕ್ಷಣೆ ಮಾಡುವುದಕ್ಕೆ ಆಗಮಿಸಿದ್ದರು. ಮಳೆ ಬಂದಾಗ ಅಂಡರ್ ಪಾಸ್ ಬಳಕೆ ಮಾಡುವುದಿಲ್ಲ. ಅಂಡರ್ ಪಾಸ್‌ನಲ್ಲಿ ನೀರಿನ ಮಟ್ಟತಿಳಿಯದೇ ಚಾಲಕ ಕಾರನ್ನು ಅಂಡರ್ ಪಾಸ್‌ಗೆ ತೆಗೆದುಕೊಂಡು ಹೋಗಿದ್ದರಿಂದ ಈ ರೀತಿ ಅಚಾತುರ್ಯ ಸಂಭವಿಸಿದೆ.
ನೀರಿನಲ್ಲಿ ಸಿಲುಕಿದ ಕಾರಿನ ಬಾಗಿಲುಗಳು ಓಪನ್ ಆಗಿಲ್ಲ. ನೀರಿನ ಒತ್ತಡದಿಂದಾಗಿ ಗಾಜು ಸಹ ಜಾಮ್ ಆಗಿದೆ. ಭಾನುರೇಖಾ ನೀರು ಕುಡಿದ ಹಿನ್ನೆಲೆ ಸಾವನಪ್ಪಿದ್ದಾರೆ. ಆಸ್ಪತ್ರೆಗೆ ತಲುಪುವ ಮುನ್ನವೇ ಅವಳ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು. ದೃಢಪಟ್ಟಬಳಿಕ ಎರಡನೇ ಹಂತದಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿದ್ದಾರೆ. ತ್ವರಿತವಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವಿರುದ್ಧ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
Bengaluru: ಡ್ರೈವರ್ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು
ಮೃತ ಯುವತಿಯು ಬೆಂಗಳೂರಿನ ಇಸ್ಫೋಸಿಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದಳು, ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಕ್ಕೆ ಸೂಚಿಸಲಾಗಿದೆ. ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ. ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ರಾಜಕಾಲುವೆ ಒತ್ತುವರಿ ತೆರವನ್ನು ನಾವು ಹಿಂದೆ ಆರಂಭಿಸಿದ್ದೆವು. ಆದರೆ, ಅದು ಅರ್ಧಕ್ಕೆ ನಿಂತಿದೆ. ಇದೀಗ ಮತ್ತೆ ನಾವು ಅಧಿಕಾರಕ್ಕೆ ಬಂದಿದ್ದೇವೆ. ಮತ್ತೆ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ