ಬೆಂಗಳೂರು(ಏ.06): ಆರ್‌ಎಸ್‌ಎಸ್ ಎಂಬುದು ವಿಷವಿದ್ದಂತೆ. ವಿಷವನ್ನು ಒಂದು ತೊಟ್ಟು ಕುಡಿದರೂ ಸಾಕು ಸಾವು ಖಚಿತ. ಹೀಗಾಗಿ ಆರ್‌ಎಸ್‌ಎಸ್ ರುಚಿಯನ್ನು ಯಾರೂ ನೋಡಬೇಡಿ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ವತಿಯಿಂದ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕೇರಳ ಹಾಗೂ ಬಸವ ಕಲ್ಯಾಣದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್ ಎಂಬುದು ವಿಷವಿದ್ದಂತೆ. ಒಂದು ತೊಟ್ಟು ವಿಷ ಕುಡಿದರೂ ಸಹ ಸಾಯುತ್ತಾರೆ. ಹೀಗಾಗಿ ಆರ್‌ಎಸ್‌ಎಸ್ ರುಚಿ ನೋಡಬೇಡಿ. ಅವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಎರಡೂ ಒಪ್ಪುವುದಿಲ್ಲ. ಇದನ್ನು ಎಷ್ಟುಬಾರಿಯಾದರೂ ಪುನರುಚ್ಚರಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಛಿದ್ರ ಮಾಡುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಭ್ರಷ್ಟಸರ್ಕಾರ ಇದೆ ಎನ್ನುತ್ತಾರೆ. ಬಿಜೆಪಿ ಆಡಳಿತದ ರಾಜ್ಯಗಳ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ತುಂಬಾ ದಿನ ಅಧಿಕಾರದಲ್ಲಿರುತ್ತೇವೆ ಎಂಬ ಅವರ ಭ್ರಮೆಗೆ ಜನರು ಬುದ್ಧಿ ಕಲಿಸಲಿದ್ದಾರೆ’ ಎಂದು ಕಿಡಿ ಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ‘ಬಿಜೆಪಿ ಸರ್ಕಾರದ ವಿರುದ್ಧ ಅವರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಾಗಾದರೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಹೀಗಿದ್ದರೂ ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಟೀಕಿಸುತ್ತಾರೆ’ ಎಂದರು.
ಸ್ವಾತಂತ್ರ್ಯ ತಂದಿದ್ದು ನಾನೇ ಅಂತಾರೆ ಮೋದಿ:
‘ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿದ್ದು ಬಾಬು ಜಗಜೀವನ್‌ರಾಮ್ ಅವರು. ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಂಗ್ಲಾದೇಶ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆ ಎನ್ನುತ್ತಾರೆ. ಬಿಟ್ಟರೆ ಭಾರತಕ್ಕೆ ಸ್ವಾತಂತ್ರ್ಯ ತಂದಿದ್ದು ನಾನೇ ಎನ್ನುತ್ತಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು. ‘ಬಾಬು ಜಗಜೀವನ್‌ರಾಮ್ ಅವರು 1971 ರಲ್ಲಿ ರಕ್ಷಣಾ ಸಚಿವರಾಗಿದ್ದರು. ಭಾರತ- ಪಾಕ್ ಯುದ್ಧದ ವೇಳೆ ಸಮರ್ಥವಾಗಿ ನಿರ್ವಹಿಸಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದರು’ ಎಂದು ಸ್ಮರಿಸಿದರು.
ದಲಿತರನ್ನು ಸರಿಯಾಗಿ ನಡೆಸಿಕೊಳ್ಳಿ: ಮುನಿಯಪ್ಪ
ಬೆಂಗಳೂರು: ‘ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟರು ದೂರ ಸರಿಯುತ್ತಿದ್ದಾರೆ. ತುಳಿತಕ್ಕೊಳಗಾದ ಸಮುದಾಯವನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇದನ್ನು ಗಮನಿಸಿ ದಲಿತರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ