ಪಿಎಸ್ಐ ನೇಮಕಾತಿ ಹಗರಣ ಪ್ರಕರಣದ ಬಗ್ಗೆ ಕನಕಗಿರಿ ಬಿಜೆಪಿ ಶಾಸಕರೊಬ್ಬರ ಆಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಕೊಪ್ಪಳ, (ಸೆಪ್ಟೆಂಬರ್. 05): ಪಿಎಸ್ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಅಭ್ಯರ್ಥಿ ಹಾಗೂ ಅಧಿಕಾರಿಗಳ ಹೆಸರು ಕೇಳಿಬಂದಿವೆ. ಆದ್ರೆ, ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಹೌದು...ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಢೇಸ್ಗೂರ್ ಅವರ ಆಡಿಯೋ ವೈರಲ್ ಆಗಿದೆ.
undefined
PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!
ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದ ಬಿಜೆಪಿ ಶಾಸಕ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ್ ಧಡೇಸ್ಗೂರ್, ಆಡಿಯೋದಲ್ಲಿರುವ ಧ್ವನಿ ನನ್ನದೆ. ಪ್ರಕರಣದ ಕುರಿತು ಮಧ್ಯಸ್ತಿಕೆ ವಹಿಸಲು ನನ್ನೊಂದಿಗೆ ಮಾತನಾಡಿದರು. ನಾನು ಈ ಕುರಿತು ಬಗೆಹರಿಸುತ್ತೇನೆ ಎಂದು ಹೇಳಿದ್ದೆ. ನಾನು ಹಿರಿಯನಾಗಿ ಮಾತನಾಡಿದ್ದೇನೆ. ಇದರಲ್ಲಿ ನಾನು ದುಡ್ಡು ತೆಗೆದುಕೊಂಡಿಲ್ಲ. ನಾನು ಸರಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಬಿಟ್ಟಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಆನಂದ್ ಸಿಂಗ್ ಪ್ರತಿಕ್ರಿಯೆ
ಪಿಎಸ್ಐ ಪ್ರಕರಣದಲ್ಲಿ ಶಾಸಕ ದಡೇಸ್ಗೂರು ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿ, ಇದು ವಿರೋಧ ಪಕ್ಷದವರ ಅಪಪ್ರಚಾರ ಮಾಡಿದ್ದಾರೆ. ನಾನು ಆ ಆಡಿಯೋ ಕೇಳಿಲ್ಲ. ಅವರು ತಪ್ಪು ಮಾಡಿದ್ದರೆ ಇಂದು ಮಾದ್ಯಮದ ಮುಂದೆ ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆಯಾಗಲಿ. ತಪ್ಪು ಆಗಿದ್ದರೆ ಕ್ರಮ ವಹಿಸಲಿ ಎಂದರು.
ಶಾಸಕನನ್ನು ಬಂಧಿಸಲು MB Patil ಆಗ್ರಹ
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರಕ್ಕೆ ಹಣ ನೀಡಿರುವುದಾಗಿ ಶಾಸಕ ಬಸವರಾಜ ದಢೇಸುಗೂರು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಉತ್ತರಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಒತ್ತಾಯಿಸಿದರು.
ಕೊಪ್ಪಳದಲ್ಲಿ ಸೋಮವಾರ ಗವಿಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸರ್ಕಾರ ಉತ್ತರಿಸಬೇಕು. ಅಕ್ರಮವಾಗಿ ಪಡೆದ ಹಣವನ್ನು ಸರ್ಕಾರಕ್ಕೆ ಕೊಟ್ಟಿದ್ದಾಗಿ ಹೇಳಿದ್ದಾರೆ. ತಕ್ಷಣ ಶಾಸಕನನ್ನು ಬಂಧಿಸಬೇಕು. ಪ್ರಕರಣದಲ್ಲಿ ಯಾರಾರು ಇದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಡಿಯೋದಲ್ಲಿ ಏನಿದೆ?
ನೇಮಕಾತಿಗಾಗಿ ಹಣ ಪಡೆದಿದ್ದನ್ನು ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.ಪರಸಪ್ಪ ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿರುವ ಶಾಸಕರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಪರಸಪ್ಪ ಎಂಬುವವರಿಂದ ಹಣ ಪಡೆದು, ಸರಕಾರಕ್ಕೆ ಹಣ ಮುಟ್ಟಿಸಿರುವುದಾಗಿ ಶಾಸಕ ಆಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಹಣ ವಾಪಾಸ್ ಕೇಳಿದ್ದಕ್ಕೆ ಪರಸಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.