ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇದರ ಹಿಂದೆ ಬಿಎಸ್‌ವೈ ಪುತ್ರ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಇದ್ದಾರೆಂದು ಆರೋಪಿಸಲಾಗಿದೆ.
ವಿಜಯಪುರ (ಮಾ.30):ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ನಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿಂದು ಮಾತನಾಡಿದ ಯತ್ನಾಳ್, ಇಬ್ಬರ ಕೈವಾಡ ಇರುವುದರಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡಿಕೆಶಿ ಮೇಲೆ ಸಾಫ್ಟ್ ಕಾರ್ನರ್ ಇದೆ ಎಂದು ಹೇಳಿದರು.
"ಮುಖ್ಯಮಂತ್ರಿ ಯಡಿಯೂರಪ್ಪ ಡಿಕೆಶಿ ವಿರುದ್ಧ ಮಾತಾಡುತ್ತಿಲ್ಲ. SIT ತನಿಖೆ ಮೇಲೆ ವಿಶ್ವಾಸವಿಲ್ಲ CBI ತನಿಖೆಯಾದರೆ ಸಿಡಿ ಗ್ಯಾಂಗ್ ಬಯಲಾಗಲಿದೆ. ಅವರ ರಾಜಕೀಯ ವೈಷಮ್ಯ ದಿಂದ ಈ ರೀತಿ ಆಗಿದೆ. ಇದಕ್ಕೊಂದು ಅಂತ್ಯ ಬೇಕಿದೆ" ಎಂದು ಯತ್ನಾಳ್ ಗಂಭೀರ ಹೇಳಿಕೆ ನೀಡಿದ್ದಾರೆ.
28 ದಿನಗಳ ಬಳಿಕ ಸಿಡಿ ಲೇಡಿ ಪ್ರತ್ಯಕ್ಷ; ರಹಸ್ಯವಾಗಿಯೇ ಕರೆದುಕೊಂಡು ಹೋದ್ರು!
ರಾಜಕೀಯದಲ್ಲಿ ಇಂತಹ ಕೆಟ್ಟ ಸಂಸ್ಕೃತಿ ಪ್ರಾರಂಭವಾದರೆ ಒಳಿತಲ್ಲ. ಇಂತವರು ರಾಜಕೀಯಕ್ಕೆ ಬಂದರೆ ಭ್ರಷ್ಟಾಚಾರ, ಗೂಂಡಾಗಿರಿ ಹೆಚ್ಚಾಗುತ್ತದೆ. ಇದೆಲ್ಲದಕ್ಕೂ ಒಂದು ಅಂತ್ಯ ಆಗಬೇಕಿದೆ. ಡಿಕೆ ಶಿವಕುಮಾರ್ ನನಗೆ ರಕ್ಷಣೆ ಕೊಟ್ಟಿದ್ದಾರೆ ಎಂದು ಸ್ವತಃ ಸಂತ್ರಸ್ತೆ ಯುವತಿ ಹೇಳುತ್ತಾಳೆ. ಮುಖ್ಯಮಂತ್ರಿ ಹಾಗೂ ಡಿಕೆಶಿ ಅವರ ಒಳ ಒಪ್ಪಂದವಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಡಿಕೆಶಿ ಬಳಿ ಇವರದ್ದು ಇದೆ ಇವರದೆಲ್ಲ ಅವರ ಬಳಿ ಇವೆ. ಇವರಿಬ್ಬರ ಒಪ್ಪಂದದ ಹಿನ್ನಲೆ ಇಂದು ಡಿಕೆಶಿ ಬಗ್ಗೆ ಸಿಎಂ ಸಾಫ್ಟ್ ಆಗಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ 25 ಸಾವಿರ ಕೋಟಿ ಕೊಡುತ್ತೇನೆ ಎಂದು 6.5 ಸಾವಿರ ಕೋಟಿ ಕೊಟ್ಟರು. ಸದನದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಚರ್ಚೆಗಳಾಗಲಿಲ್ಲ ಎಂದರು.
ಸಂಸದ ಜಿಗಜಿಣಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಯಾವಾಗಾದರೂ ಒಮ್ಮೆ ಎದ್ದು ಭೂತನಂತೆ ಮಾತನಾಡುವರ ಬಗ್ಗೆ ನನಗೇನು ಕೇಳಬೇಡಿ. ರಾಜ್ಯದಲ್ಲಿ ಪೊಲೀಸ್ ಇಲಾಖೆ ವಿಫಲವಾಗಿಲ್ಲ. ಸರ್ಕಾರ ಪೊಲೀಸ್ ಇಲಾಖೆ ಮೇಲೆ ಸುಮ್ಮನೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದರು.
ಮಾನ್ಯ ರೇಣುಕಾಚಾರ್ಯ ಒಬ್ಬರನ್ನು ಬಿಟ್ಟರೆ ನನ್ನ ವಿರುದ್ಧ ಯಾರೂ ಮಾತನಾಡುವದಿಲ್ಲ. ಬಿಜೆಪಿ ಸರ್ಕಾರ 5 ವರ್ಷ ಇರುತ್ತದೆ. ಆದ್ರೆ ಯಡಿಯೂರಪ್ಪ ಸರ್ಕಾರ ಇರಲ್ಲ. ಮೇ 2 ಕ್ಕೆ ಇದು ಅಂತ್ಯವಾಗಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದರು.