ಭಾರಿ ಬೆಳವಣಿಗೆಗಳ ನಡುವೆ ಬಿಜೆಪಿ ಸರ್ಕಾರ ರಚನೆಯಾಗುತ್ತಾ..?

By Suvarna NewsFirst Published Jan 29, 2019, 7:54 AM IST
Highlights

ಸಿಎಂ ಕುಮಾರಸ್ವಾಮಿ ತಾವು ಸಿಎಂ ಕುರ್ಚಿಗೆ ಅಂಟಿಕೊಂಡಿಲ್ಲ, ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇತ್ತ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಆಡಳಿತ ನಡೆಸಲು ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ನೀಡಿ ತೆರಳಲಿ ಎಂದಿದ್ದಾರೆ. 

ಬೆಂಗಳೂರು :  ಕಾಂಗ್ರೆಸ್‌ ನಾಯಕರ ಧೋರಣೆಯಿಂದ ಬೇಸತ್ತು ರಾಜೀನಾಮೆ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾನ, ಮರ್ಯಾದೆ ಇದ್ದರೆ ಮೊದಲೇ ರಾಜೀನಾಮೆ ಕೊಡಬೇಕಿತ್ತು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದ್ದಾರೆ.

‘ಒಂದೋ ನೀವು ಅಧಿಕಾರ ಇಟ್ಟುಕೊಳ್ಳಿ. ಇಲ್ಲವೇ ಮಾನ, ಮರ್ಯಾದೆಯಾದರೂ ಇಟ್ಟುಕೊಳ್ಳಿ’ ಎಂದೂ ಅವರು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಹಲವು ನಾಯಕರು ಬಹಿರಂಗವಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಿ ವಾಗ್ದಾಳಿ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ರಾಹುಲ್‌ ಗಾಂಧಿ ಮೂಲಕ ರಾಜ್ಯದ ಕಾಂಗ್ರೆಸ್‌ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ನೀಡಿ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದರು.

ಈಶ್ವರಪ್ಪ ಮಾತನಾಡಿ, ಕುತ್ತಿಗೆ ಹಿಡಿದು ತಳ್ಳಿದರೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್‌ನವರಿಗೂ ಮುಖ್ಯಮಂತ್ರಿಯಾಗಬೇಕು ಎನ್ನುವ ಹಪಾಹಪಿ ಸಾಕಷ್ಟಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗ್ತೀನಿ ಎಂದು ಒಂದೆಡೆ ಹೇಳಿದರೆ ನನ್ನ ಸೋಲಿಗೆ ಕೆಲವರ ಹೊಟ್ಟೆಕಿಚ್ಚೇ ಕಾರಣವೆಂದು ಇನ್ನೊಂದೆಡೆ ಹೇಳುತ್ತಾರೆ. ಈಗ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿಯೇ ಕುಮಾರಸ್ವಾಮಿ ರಾಜೀನಾಮೆ ವಿಷಯ ಪ್ರಸ್ತಾಪಿಸಿದ್ದಾರೆ ಎಂದರು.

ನಮ್ಮನ್ನು ಎರಡನೇ ದರ್ಜೆಯ ನಾಗರಿಕನಂತೆ ಕಾಂಗ್ರೆಸ್‌ ನಾಯಕರು ಕಾಣುತ್ತಿದ್ದಾರೆಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇದೀಗ ಕಾಂಗ್ರೆಸ್‌ನ ಕಾಟ ತಾಳಲಾರದೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣಿಸುತ್ತಿದ್ದು, ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳು ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದ ಮೇಲಿರುವ ವ್ಯಾಮೋಹವೇ ಇದಕ್ಕೆಲ್ಲಾ ಕಾರಣ ಎಂದು ಲೇವಡಿ ಮಾಡಿದರು.

ಬ್ಲಾಕ್‌ಮೇಲ್‌ ತಂತ್ರ- ಬಿಎಸ್‌ವೈ:

ಮುಖ್ಯಮಂತ್ರಿಗಳ ರಾಜೀನಾಮೆ ಹೇಳಿಕೆಯು ಬ್ಲಾಕ್‌ಮೇಲ್‌ ತಂತ್ರವಾಗಿದ್ದು, ಕಾಂಗ್ರೆಸ್‌ ಮುಖಂಡರು ಮತ್ತು ಶಾಸಕರನ್ನು ಆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಮೂಲಕ ನಿಯಂತ್ರಿಸಲು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಟುವಾಗಿ ಟೀಕಿಸಿದರು.

ಕುಮಾರಸ್ವಾಮಿ ಅವರ ರಾಜೀನಾಮೆ ಹೇಳಿಕೆಯಿಂದಾಗಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಮೊದಲಿನಿಂದಲೂ ಮಿತ್ರ ಪಕ್ಷಗಳ ಒಳಜಗಳದ ಬಗ್ಗೆ ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಮುಖ್ಯಮಂತ್ರಿಗಳ ಹೇಳಿಕೆಯು ನಮ್ಮ ಮಾತನ್ನು ಪುಷ್ಟೀಕರಿಸಿದೆ ಅವರು ಹೇಳಿದರು.

ನಾವು ಸರ್ಕಾರ ರಚಿಸ್ತೇವೆ- ಶೆಟ್ಟರ್‌:

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನ ಕಿರುಕುಳ ಜಾಸ್ತಿಯಾಗಿದ್ದರೆ ರಾಜೀನಾಮೆ ಕೊಟ್ಟು ಹೊರಬರಲಿ. ನಾವು ಸರ್ಕಾರ ರಚಿಸುತ್ತೇವೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಹೇಳಿದರು.

ಅತ್ತ ಕಾಂಗ್ರೆಸ್‌ನವರು ತಮ್ಮ ಮುಖ್ಯಮಂತ್ರಿ ಈಗಲೂ ಸಿದ್ದರಾಮಯ್ಯ ಎಂದು ಹೇಳುತ್ತಾರೆ. ಈ ರೀತಿಯ ಹೇಳಿಕೆ ಪದೇ ಪದೇ ಬರುತ್ತಿವೆ. ಇನ್ನು ಕುಮಾರಸ್ವಾಮಿ ಇದರಿಂದ ಬೇಸತ್ತು ರಾಜೀನಾಮೆಗೆ ಸಿದ್ಧ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಾಗಲಿನಿಂದಲೂ ರಾಜ್ಯದಲ್ಲಿ ಸ್ಥಿರವಾಗಿ ಆಡಳಿತವೇ ನಡೆಯುತ್ತಿಲ್ಲ. ಎರಡೂ ಪಕ್ಷಗಳು ವೈಫಲ್ಯಗಳನ್ನು ಮುಚ್ಚಿಹಾಕಲು ಈ ರೀತಿ ನಾಟಕವಾಡುತ್ತಿವೆ. ಇದು ನಾಟಕವೇ ಆಗಿಲ್ಲದಿದ್ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಹೊರಬರಬೇಕು. ಈ ಸರ್ಕಾರದಿಂದ ಸ್ಥಿರತೆಯ ಆಡಳಿತ ನೀಡಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ ಎಂದರು.

ಎಚ್‌ಡಿಕೆಗೆ ನೈತಿಕ ಹಕ್ಕಿಲ್ಲ-ಕಾರಜೋಳ:

ತಮ್ಮ ಸಂಪುಟದ ಇಬ್ಬರು ಸಚಿವರು ಬಹಿರಂಗವಾಗಿಯೇ ತಮಗೆ ಸಿದ್ದರಾಮಯ್ಯ ಅವರೇ ಈಗಲೂ ಮುಖ್ಯಮಂತ್ರಿ ಎಂಬುದಾಗಿ ಹೇಳಿದ ಮೇಲೆ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕ ಹಕ್ಕೂ ಇಲ್ಲದಂತಾಗಿದೆ. ತಕ್ಷಣವೇ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ ಆಗ್ರಹಿಸಿದರು.

ಚುನಾವಣೆಗೂ ಮುನ್ನವೇ ಸರ್ಕಾರ ಪತನ:

ಜೆಡಿಎಸ್‌-ಕಾಂಗ್ರೆಸ್‌ ಸಚಿವರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಪಕ್ಷಗಳಲ್ಲಿ ಗುಂಪುಗಾರಿಕೆ ಜಾಸ್ತಿಯಾಗುತ್ತಿದೆ. ಇದನ್ನು ಗಮನಿಸುತ್ತಿದ್ದರೆ ಲೋಕಸಭೆ ಚುನಾವಣೆ ಮುನ್ನವೇ ಸರ್ಕಾರ ಪತನಗೊಳ್ಳುವ ಸಂಭವವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಕೆ, ಟಿಕೆಟ್‌ ಹಂಚಿಕೆಯ ಗೊಂದಲದಿಂದಲೇ ಸರ್ಕಾರ ಉರುಳಲಿದೆ. ಕಾಂಗ್ರೆಸ್‌ನವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಜೆಡಿಎಸ್‌ನವರಿಗೆ ಸರ್ಕಾರ ಹೇಗೋ ನಡೆದರೆ ಸಾಕು ಎನ್ನುವಂತಾಗಿದೆ. ಎರಡು ಪಕ್ಷಗಳು ಚುನಾವಣೆ ಪೂರ್ವದಲ್ಲಿ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಬಿಜೆಪಿಗೆ ಅಧಿಕಾರ ಕೊಡಬಾರದು ಎಂಬ ಕಾರಣಕ್ಕೆ ಮಾಡಿಕೊಂಡ ಒಪ್ಪಂದವು ಇದಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಮೊದಲೇ ಹೇಳಿದ್ದೆವು. ದೇವೇಗೌಡ ಹಾಗೂ ರಾಹುಲ್‌ ಗಾಂಧಿ ಕೂಡಿ ಮಾಡಿದ ವೆಲ್ಡಿಂಗ್‌ ಕಿತ್ತುಹೋಗಿದೆ. ಅದರ ಮುನ್ಸೂಚನೆ ಎಂಬಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹತಾಶೆಯಿಂದ ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

click me!