ತಾಜ್ ವೆಸ್ಟೆಂಡ್ ನಲ್ಲಿ ಸಿಎಂ ಕುಮಾರಸ್ವಾಮಿ ಕೊಠಡಿ

Published : Nov 22, 2018, 10:21 AM IST
ತಾಜ್ ವೆಸ್ಟೆಂಡ್ ನಲ್ಲಿ ಸಿಎಂ ಕುಮಾರಸ್ವಾಮಿ ಕೊಠಡಿ

ಸಾರಾಂಶ

ಸಿಎಂ ಕುಮಾರಸ್ವಾಮಿ ಪ್ರಸಿದ್ಧ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕೊಠಡಿ ಹೊಂದಿದ್ದು ಸಾಕಷ್ಟು ವಿವಾದಕ್ಕೆ ಈಡಾಗುತ್ತಿದ್ದು ಈ ಸಂಬಂಧ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಗರದ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕೊಠಡಿ ಹೊಂದಿರುವ ವಿಷಯ ವಿವಾದಕ್ಕೆಡೆ ಮಾಡಿಕೊಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಟೀಕಿಸಿದ್ದಾರೆ.

‘ಖಾಸಗಿ ಜೀವನವಿದೆ, ಕಡತಗಳನ್ನು ಪರಿಶೀಲಿಸಲು ಏಕಾಂತ ಬೇಕು ಎಂಬ ಕಾರಣ ನೀಡಿ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ರೂಮ್‌ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನಸೌಧ ಕಟ್ಟಿದ ಕೆಂಗಲ್‌ ಹನುಮಂತಯ್ಯ ಅವರಿಗೆ ಅಪಮಾನ ಮಾಡಿದ್ದಾರೆ’ ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಒಂದು ಕಡೆ ಸರ್ಕಾರದ ದುಡ್ಡು ಉಳಿಸಲು ಸರ್ಕಾರಿ ಕಾರು ಉಪಯೋಗ ಮಾಡುವುದಿಲ್ಲ ಎನ್ನುತ್ತೀರಿ. ಮತ್ತೊಂದೆಡೆ ಲಕ್ಷಗಟ್ಟಲೆ ರು.ಗಳನ್ನು ಕಾರು, ರೂಮಿನ ಮೇಲೆ ಖರ್ಚು ಮಾಡುತ್ತೀರಿ. ನೀವು ಖಾಸಗಿ ಜೀವನ ಬಯಸುವವರು ಮುಖ್ಯಮಂತ್ರಿಯಾಗಿ ಸಾರ್ವಜನಿಕ ಜೀವನ ಹೇಗೆ ನಡೆಸುತ್ತೀರಿ? ನಿಮ್ಮ ನಡೆ ನುಡಿಯಲ್ಲಿ ಸಾಮ್ಯತೆ ಇಲ್ಲ. ಇದಕ್ಕೆ ನೀವೇ ಉತ್ತರ ಕೊಡಬೇಕು ಎಂದು ಪತ್ರಿಕಾ ಹೇಳಿಕೆ ಆಗ್ರಹಿಸಿದ್ದಾರೆ.

ವಿಧಾನಸೌಧ ರಾಜ್ಯದ ದೇಗುಲವಿದ್ದಂತೆ. ಹಿಂದೆ ಎಲ್ಲ ಮುಖ್ಯಮಂತ್ರಿಗಳೂ ಅಲ್ಲಿಂದಲೇ ಆಡಳಿತ ನಡೆಸಿ, ಅದರ ಪ್ರಾಮುಖ್ಯತೆ ಕಾಪಾಡಿದ್ದಾರೆ. ಈಗಾಗಲೇ ಅನೇಕ ಸಚಿವರು ತಮ್ಮ ತಮ್ಮ ಖಾಸಗಿ ಸ್ಥಳಗಳಿಂದ ಆಡಳಿತ ನಡೆಸುತ್ತಿದ್ದಾರೆ. ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬೀಗ ಹಾಕುವ ಸಂಭವ ಬಂದರೂ ಬರಬಹುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸರ್ಕಾರಿ ಕಚೇರಿ ಇದ್ದರೂ ಹೋಟೆಲ್‌ ಯಾಕೆ:  ಇದೇ ವೇಳೆ ಬುಧವಾರ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಸರ್ಕಾರದಿಂದ ಕಚೇರಿ, ಬಂಗಲೆ, ಸಿಬ್ಬಂದಿ ಎಲ್ಲಾ ನೀಡಿದರೂ ತಾಜ್‌ವೆಸ್ಟ್‌ ಎಂಡ್‌ನಲ್ಲಿ ಕುಳಿತು ಏಕೆ ನಿರ್ಧಾರ ಕೈಗೊಳ್ಳಬೇಕು? ಅಲ್ಲಿಯೇ ಕುಳಿತು ಸರ್ಕಾರದ ತೀರ್ಮಾನಗಳನ್ನು ಕೈಗೊಳ್ಳುವುದಾದರೆ ವಿಧಾನಸೌಧ ಯಾಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಖಾಸಗಿತನ ಬೇಕಾದರೆ ಮುಖ್ಯಮಂತ್ರಿಯಾಗಿ ಯಾವ ಕಾರಣಕ್ಕಾಗಿ ಇದ್ದೀರಿ? ತುರ್ತು ಪರಿಸ್ಥಿತಿ ವೇಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಜೆಡಿಎಸ್‌ ಕಚೇರಿಗೆ ಜೆ.ಪಿ.ಭವನದ ಹೆಸರಿಟ್ಟಿದ್ದಾರೆ. ಆದರೆ, ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್