ಪೊಲೀಸರನ್ನೇ ಸುಳ್ಳು ಕೇಸಲ್ಲಿ ಸಿಲುಕಿಸಿದ್ದ ಡಿಸಿಪಿಗೆ ಮುಖಭಂಗ

Published : Nov 22, 2018, 08:47 AM IST
ಪೊಲೀಸರನ್ನೇ ಸುಳ್ಳು ಕೇಸಲ್ಲಿ ಸಿಲುಕಿಸಿದ್ದ ಡಿಸಿಪಿಗೆ ಮುಖಭಂಗ

ಸಾರಾಂಶ

ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತನ್ನ ಅಧೀನದ ಪೊಲೀಸರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಲ್ಲದೆ, ಆ ಕುರಿತು ತಾನೇ ತನಿಖೆಯನ್ನೂ ನಡೆಸಿ ಅನಧಿಕೃತವಾಗಿ ಚಾರ್ಜ್ ಶೀಟ್ ಸಲ್ಲಿಸಿದ ಪ್ರಸಂಗ ನಡೆದಿದೆ.

ಬೆಂಗಳೂರು :  ಜನಸಾಮಾನ್ಯರನ್ನು ಪೊಲೀಸರು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ ಹಲವು ಪ್ರಕರಣಗಳು ಜರುಗಿವೆ. ಆದರೆ, ಇಲ್ಲೊಂದು ಅಪರೂಪದ ಘಟನೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತನ್ನ ಅಧೀನದ ಪೊಲೀಸರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಲ್ಲದೆ, ಆ ಕುರಿತು ತಾನೇ ತನಿಖೆಯನ್ನೂ ನಡೆಸಿ ಅನಧಿಕೃತವಾಗಿ ಚಾರ್ಜ್ ಶೀಟ್ ಸಲ್ಲಿಸಿದ ಪ್ರಸಂಗ ನಡೆದಿದೆ.

ಆದರೆ, ಕಿರಿಯ ಶ್ರೇಣಿಯ ಪೊಲೀಸರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಉನ್ನತಾಧಿಕಾರಿಯ ಕಾರ್ಯ ವೈಖರಿಯನ್ನು ಟೀಕಿಸಿದೆ.

ರಕ್ತ ಚಂದನದ ಅಕ್ರಮ ಸಾಗಣೆ ಹಾಗೂ ಮಾರಾಟ ಕುರಿತಂತೆ ಚೀನಾ ಮಹಿಳೆಯನ್ನು ರಕ್ಷಿಸಲು 10 ಲಕ್ಷ ರು. ಲಂಚಕ್ಕೆ ಬೇಡಿಕೆಯಿಟ್ಟಮತ್ತು ಆಕೆಯಿಂದ ಗೌಪ್ಯವಾಗಿ ರಕ್ತ ಚಂದನ, ಒಂದು ಲಕ್ಷ ರು. ಹಾಗೂ ಇತರೆ ವಸ್ತುಗಳನ್ನು ಪಡೆದಿದ್ದಾರೆ ಎಂದು ಮೂವರು ಪೊಲೀಸರ ವಿರುದ್ಧ ಆರೋಪ ಮಾಡಲಾಗಿತ್ತು. ಇವುಗಳ ಜೊತೆಗೆ ‘ತಪ್ಪಿತಸ್ಥ’ ಪೊಲೀಸರ ವಿರುದ್ಧ ಕ್ರಮ ಜರುಗಿಸದೆ ಕರ್ತವ್ಯಲೋಪ ಎಸಗಿದ ಆರೋಪವನ್ನೂ ಹೊರಿಸಿ ಕಬ್ಬನ್‌ಪಾರ್ಕ್ ಠಾಣೆಯ ಹಿಂದಿನ ಇನ್ಸ್‌ಪೆಕ್ಟರ್‌ ಜಿ.ವಿ.ಉದಯ ಭಾಸ್ಕರ್‌, ಪೇದೆಗಳಾದ ವಿಠಲ್‌ ಕುಮಾರ್‌ ಮತ್ತು ಸುಧಾಕರ್‌ ವಿರುದ್ಧ ಹಿಂದಿನ ಡಿಸಿಪಿ ನ್ಯಾಮೇಗೌಡ (ಈಗ ನಿವೃತ್ತ) ದೋಷಾರೋಪ ಪಟ್ಟಿದಾಖಲಿಸಿದ್ದರು. ಅದನ್ನು ಮತ್ತು ಪ್ರಕರಣ ಕುರಿತ ನಗರದ ಎಂಟನೇ ಹೆಚ್ಚುವರಿ ಸಿಎಂಎಂ ಕೋರ್ಟ್‌ ವಿಚಾರಣೆಯನ್ನು ಇದೀಗ ಹೈಕೋರ್ಟ್‌ ರದ್ದುಪಡಿಸಿದೆ.

ಈ ಕುರಿತಂತೆ ತಮ್ಮ ವಿರುದ್ಧದ ಪ್ರಕರಣ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಈ ಮೂವರು ಪೊಲೀಸರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌, ಈ ಆದೇಶ ನೀಡಿದೆ.

ಸುಳ್ಳು ಆರೋಪದಲ್ಲಿ ಸಿಲುಕಿಸಿದ್ದರು:  ಪ್ರಕರಣದ ಕುರಿತು ಇಲಾಖೆ ತನಿಖೆಯಲ್ಲಿ ಅರ್ಜಿದಾರರು ನಿರಪರಾಧಿಗಳೆಂದು ತೀರ್ಮಾನವಾಗಿದೆ. ಮತ್ತೊಂದೆಡೆ ನ್ಯಾಮೇಗೌಡ ಅವರು, ಅರ್ಜಿದಾರರನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸಿದ್ದಾರೆ ಎಂಬುದು ದೃಢಪಟ್ಟಿದೆ. ಪ್ರಕರಣದ ದೂರುದಾರರಾಗಿದ್ದ ನ್ಯಾಮೇಗೌಡ ಅವರು ತನಿಖೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಬೇಕಿತ್ತು. ಆದರೆ, ತಾವೇ ತನಿಖೆ ನಡೆಸಿ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಹಾಗೂ ಅದೂ ಡಿಸಿಪಿ ಹುದ್ದೆಯಿಂದ ವರ್ಗಾವಣೆಯಾದ ನಂತರವೂ ಅಧೀನ ನ್ಯಾಯಾಲಯಕ್ಕೆ ಅನಧಿಕೃತವಾಗಿ ಅರ್ಜಿದಾರರ ವಿರುದ್ಧ ದೋಷರೋಪ ಪಟ್ಟಿಸಲ್ಲಿಸಿದ್ದಾರೆ. ಈ ರೀತಿ ಮಾಡಿರುವುದು ಅವರು ಮಾಡಿದ ಲೋಪಗಳು ಹಾಗೂ ಪ್ರಕರಣದಲ್ಲಿ ಹೊಂದಿದ್ದ ಹಿತಾಸಕ್ತಿ ಪ್ರದರ್ಶಿಸುತ್ತದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಹಾಗೆಯೆ, ಅರ್ಜಿದಾರರು ಚೀನಾ ಮಹಿಳೆಯಿಂದ 10 ಲಕ್ಷ ರು. ಲಂಚಕ್ಕೆ ಬೇಡಿಯಿಟ್ಟ, ಮಹಿಳೆಯಿಂದ ವಶಕ್ಕೆ ಪಡೆದ ರಕ್ತ ಚಂದನ ಹಾಗೂ ಇತರೆ ಮರದ ಪೆಟ್ಟಿಗೆಗಳನ್ನು ಠಾಣೆ ಬದಲಾಗಿ ಬೇರೆಲ್ಲಿಗೋ ಸಾಗಿಸಿದ ಮತ್ತು ಹಣ ಸೇರಿ ಇತರೆ ವಸ್ತುಗಳನ್ನು ಪಡೆದ ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಲಂಚ ಕೇಳಿದ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಯಮಗಳಡಿ ಪ್ರಕರಣ ದಾಖಲಿಸಿಲ್ಲ ಎಂದು ಅಭಿಪ್ರಾಯಪಟ್ಟಹೈಕೋರ್ಟ್‌, ಪ್ರಾಸಿಕ್ಯೂಷನ್‌ ತೀವ್ರ ಸಂಶಯಾಸ್ಪದವಾಗಿದ್ದರೆ ಹಾಗೂ ದೋಷಾರೋಪಗಳು ದೃಢಪಡುವ ಸಾಧ್ಯತೆ ಇಲ್ಲದ ಸಂದರ್ಭದಲ್ಲಿ ಅಮೂಲ್ಯವಾದ ನ್ಯಾಯಾಂಗದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಪ್ರಕರಣವನ್ನು ರದ್ದುಪಡಿಸಬಹುದಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.

ನಂತರ ಅರ್ಜಿದಾರರ ವಿರುದ್ಧದ ಚಾರ್ಜ್ ಶೀಟ್‌ ಮತ್ತು ಅಧೀನ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

2013ರಲ್ಲಿ ದೂರು ನೀಡಿದ್ದ ಮಹಿಳೆ:  ನಗರದ ತಿಪ್ಪಸಂದ್ರದಲ್ಲಿ ನೆಲೆಸಿದ್ದರು ಎನ್ನಲಾದ ಚೀನಾ ಮೂಲದ ವೆನ್‌ ಪಿಂಗ್‌ ಎಂಬ ಮಹಿಳೆ, ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿಗೆ 2013ರ ಡಿ.18ರಂದು ದೂರಿತ್ತಿದ್ದರು. ಆರ್‌ಎಚ್‌ಪಿ ರಸ್ತೆಯ ರೆಸ್ಟ್‌-ಇನ್‌ ಹೋಟೆಲ್‌ನ ಕೊಠಡಿ ಹಾಗೂ ಮನೆಯಲ್ಲಿ ತಾನು ಇಟ್ಟಿದ್ದ ಹತ್ತು ಮರದ ಪೆಟ್ಟಿಗೆಗಳನ್ನು ಪೊಲೀಸರು ವಶಪಡಿಸಿಕೊಂಡು, ಕೇಸು ದಾಖಲಿಸದಿರಲು 10 ಲಕ್ಷ ರು. ಹಣ ಕೇಳಿದ್ದರು. ಅಲ್ಲದೆ, ತನ್ನ ಹ್ಯಾಂಡ್‌ ಬ್ಯಾಗಿನಿಂದ ಒಂದು ಲಕ್ಷ ನಗದು, 300 ಯುವಾನ್‌ (ಚೀನಾ ಕರೆನ್ಸಿ), ಲ್ಯಾಪ್‌ಟಾಪ್‌, ರೋಲೆಕ್ಸ್‌ ವಾಚ್‌ ಹಾಗೂ ಒಂದು ಪೆಟ್ಟಿಗೆಯಷ್ಟುರಕ್ತ ಚಂದನವನ್ನು ಗೌಪ್ಯವಾಗಿ ಪಡೆದರು ಎಂದು ಮಹಿಳೆ ಆರೋಪಿಸಿದ್ದರು.

ಎಸಿಪಿಯು ಆ ದೂರನ್ನು ಅಂದಿನ ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ನ್ಯಾಮೇಗೌಡಗೆ ಶಿಫಾರಸು ಮಾಡಿದ್ದರು. ಅದರಂತೆ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಅವರು, ಚೀನಾ ಮಹಿಳೆ ಹಾಗೂ ಇತರರು ರಕ್ತ ಚಂದನವನ್ನು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾಗೆ ಅಕ್ರಮವಾಗಿ ಸಾಗಿಸುವುದರಲ್ಲಿ ಭಾಗಿಯಾಗಿದ್ದರು. ಪ್ರಕರಣದಿಂದ ಆಕೆಯನ್ನು ರಕ್ಷಿಸಲು ವಿಠಲ್‌ ಮೂರ್ತಿ, ಸುಧಾಕರ್‌ 10 ಲಕ್ಷ ರು. ಲಂಚ ಕೇಳಿದ್ದರು ಹಾಗೂ ಹಣ ಹಾಗೂ ಇತರೆ ವಸ್ತುಗಳನ್ನು ಪಡೆದರು. ಆದರೆ, ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಬ್ಬನ್‌ ಪಾರ್ಕ್ ಠಾಣಾ ಇನ್ಸ್‌ಪೆಕ್ಟರ್‌ ಆಗಿದ್ದ ಉದಯ ಕುಮಾರ್‌ ಯಾವುದೇ ಕ್ರಮ ಜರುಗಿಸಿಲ್ಲ ಎಂದು 2014ರ ಫೆ.2ರಂದು ವರದಿ ಸಲ್ಲಿಸಿದ್ದರು. ಆ ವರದಿ ಅನುಸಾರ ಅರ್ಜಿದಾರರ ವಿರುದ್ಧ ದೂರು ದಾಖಲಾಗಿತ್ತು ಹಾಗೂ ದೋಷರೋಪ ಪಟ್ಟಿಸಲ್ಲಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ