ನೂರಕ್ಕೆ ನೂರರಷ್ಟು ನನ್ನ ಮನಸು ಜೆಡಿಎಸ್‌ನಲ್ಲಿದೆ; ಇನ್ನೊಮ್ಮೆ ಮೈತ್ರಿ ಪರಿಶೀಲಿಸಿ ಗೌಡ್ರೆ: ಇಬ್ರಾಹಿಂ

By Kannadaprabha News  |  First Published Oct 23, 2023, 8:17 AM IST

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರಲ್ಲಿ ಇನ್ನೊಮ್ಮೆ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.



ಬೆಂಗಳೂರು (ಅ.23): ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರಲ್ಲಿ ಇನ್ನೊಮ್ಮೆ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌ ಇದುವರೆಗೆ ಯಾವ ಸಿದ್ಧಾಂತದಲ್ಲಿದೆಯೋ ಅದೇ ಸಿದ್ಧಾಂತದ ಮೇಲೆ ನಿಲ್ಲಬೇಕು ಎನ್ನುವುದು ನನ್ನ ಇಚ್ಛೆ ಎಂದರು.

Tap to resize

Latest Videos

ಬಿಜೆಪಿ ಜೊತೆ ಮೈತ್ರಿಗೆ ತಮ್ಮ ಎಲ್ಲ ಮಿತ್ರಪಕ್ಷಗಳು ಒಪ್ಪಿವೆ ಎಂದು ದೇವೇಗೌಡರು ನೀಡಿದ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಳ್ಳಿಹಾಕಿದ್ದು, ಗೌಡರ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. ಇದನ್ನೆಲ್ಲಾ ನೋಡಿದಾಗ ಮನಸ್ಸಿಗೆ ಬಹಳ ನೋವಾಗುತ್ತದೆ. ಜೆಡಿಎಸ್‌ನ ವಿವಿಧ ಶಾಸಕರು, ಜಿಲ್ಲಾಧ್ಯಕ್ಷರು ನನ್ನ ಸಂಪರ್ಕದಲ್ಲಿದ್ದಾರೆ. ನಾನು ಯಾರನ್ನೂ ಬಹಿರಂಗವಾಗಿ ಕರೆದಿಲ್ಲ. ಇನ್ನೂ ಪರಿಸ್ಥಿತಿ ಕೆಟ್ಟಿಲ್ಲ. ನೀವು ಎಲ್ಲಿ ಇದ್ದೀರೋ ಅಲ್ಲೇ ಇರಿ. ಸಮಯ ಬಂದಾಗ ಮಾತನಾಡೋಣ ಎಂದು ಹೇಳಿದ್ದೇನೆ. ಹಾಗಾಗಿ ನಾನು ದೇವೇಗೌಡರಿಗೆ ಹೇಳೋದು ಬಿಜೆಪಿ ಜೊತೆ ಮೈತ್ರಿ ಬೇಡ. ಅವರು ಕೂಡಲೇ ಮೈತ್ರಿ ವಿಚಾರ ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು.

 

ಸಿಎಂ ಇಬ್ರಾಹಿಂ ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ: ಶಾಸಕ ಎ.ಮಂಜು

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲೂ ಈ ಬಗ್ಗೆ ನಾನು ಮನವಿ ಮಾಡುತ್ತೇನೆ. ನೀವು ಕುವೆಂಪು, ಬಸವಣ್ಣನ ಸಿದ್ದಾಂತ ಒಪ್ಪಿಕೊಳ್ಳಿ ಅಂತ ಅಷ್ಟೇ ಕೇಳ್ತಾ ಇರೋದು. ಮೋದಿ, ಅಮಿಶ್ ಶಾ ಬಗ್ಗೆ ಗೌರವ ಕೋಡೋಣ. ವ್ಯಕ್ತಿಗತವಾಗಿ ನಮಗೆ ಯಾವುದೇ ಭಿನ್ನಮತ ಅವರೊಂದಿಗೆ ಇಲ್ಲ. ಆದರೆ, ಅವರೊಂದಿಗೆ ಮೈತ್ರಿ ಬೇಡ ಎನ್ನುವುದು ನನ್ನ ಮನವಿ. ದೇವೇಗೌಡರ ಮೇಲೆ ನನಗೆ ಭರವಸೆ ಇದೆ. ಕುಮಾರಸ್ವಾಮಿ ಮೇಲೆ ನನಗೆ ಭರವಸೆ ಇಲ್ಲ. ಆದರೂ ಮನವಿ ಮಾಡುತ್ತೇನೆ. ಅವರು ಉತ್ತಮ ತೀರ್ಮಾನ ಮಾಡಬೇಕು ಎಂದರು.

ರಾಜ್ಯ ಘಟಕ ವಿಸರ್ಜನೆ ಅಕ್ರಮ:

ನೀವು ತಾಂತ್ರಿಕವಾಗಿ ಮತ್ತು ಮಾನಸಿಕವಾಗಿ ಇನ್ನೂ ಜೆಡಿಎಸ್‌ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ, ನೂರಕ್ಕೆ ನೂರು ನಾನು ಜೆಡಿಎಸ್‌ನಲ್ಲಿ ಇದ್ದೀನಿ. ನಾನೇ ಈಗಲೂ ಜೆಡಿಎಸ್‌ನ ರಾಜ್ಯಾಧ್ಯಕ್ಷ. ಯಾಕೆಂದರೆ ರಾಜ್ಯ ಘಟಕವನ್ನು ಅವರು ವಿಸರ್ಜನೆ ಮಾಡೋಕೆ ಬರೋದೇ ಇಲ್ಲ. ಅದೇನು ಕೋಳಿ ಮೊಟ್ಟೆನಾ ಒಡೆದು ಆಮ್ಲೇಟ್‌ ಹಾಕೋಕೆ. ಒಂದು ಚುನಾವಣೆ ಮೂಲಕ ಆಯ್ಕೆ ಆಗಿರುವ ಘಟಕ ಅದು. ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿರುವ ಪಕ್ಷ ನಿಯಮಾವಳಿ ಪ್ರಕಾರ ಪಕ್ಷವನ್ನು ನಡೆಸಬೇಕು. ತಮಗೆ ಇಷ್ಟ ಬಂದಂಗೆ ನಡೆಸೋಕೆ ಆಗಲ್ಲ ಎಂದು ಹೇಳಿದರು.

 

ಕ್ಯಾಪ್ಟನ್ ಆಫ್ ದಿ ಶಿಪ್ ಕುಮಾರಣ್ಣ: ಲೋಕಸಭೆಯ ಸನಿಹದಲ್ಲಿ ಇದೆಂಥಾ ಬದಲಾವಣೆ..?

ರಾಜ್ಯ ಘಟಕದ ಕೋರ್‌ ಕಮಿಟಿ ಮಾಡಿ ಪದಾಧಿಕಾರಿಗಳನ್ನು ಮಾಡಿದ್ದು ನಾನು. ರಾಜ್ಯದಲ್ಲಿ ಅದನ್ನು ವಿಸರ್ಜಿಸುವ ಅಧಿಕಾರ ರಾಜ್ಯಾಧ್ಯಕ್ಷರಿಗೆ ಇರುತ್ತದೆ. ಒಂದು ವೇಳೆ ರಾಜ್ಯಾಧ್ಯಕ್ಷರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಮೂರನೇ ಎರಡರಷ್ಟು ಬಹುಮತದ ಸದಸ್ಯರೊಂದಿಗೆ ನೋಟಿಸ್‌ ಕೊಡಬೇಕು. ನಂತರ ಸಭೆ ಕರೆದು ರಾಜ್ಯಾಧ್ಯಕ್ಷರನ್ನು ತೆಗೆಯಬಹುದು. ಇದ್ಯಾವುದೂ ಮಾಡಿಲ್ಲ. ದೇವೇಗೌಡ ತಪ್ಪು ಮಾಡಿದ್ದಾರೆ ಎಂದು ನೋವಿಲ್ಲ. ಇದನ್ನ ಸರಿಪಡಿಸಿಕೊಂಡು ಹೋಗೋಣ ಎನ್ನುವುದು ನನ್ನ ಭಾವನೆ ಎಂದು ತಿಳಿಸಿದರು.

click me!