ಪಂಚಮಸಾಲಿಗೆ ಬಿಜೆಪಿ ಅನ್ಯಾಯ, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ: ವಚನಾನಂದ ಶ್ರೀ ಎಚ್ಚರಿಕೆ

By Kannadaprabha NewsFirst Published Apr 12, 2024, 6:34 AM IST
Highlights

ಪಂಚಮಸಾಲಿಗಳ ಸಾಕಷ್ಟು ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪಂಚಮಸಾಲಿಗಳನ್ನು ಅಧಿಕಾರದಿಂದ ದೂರು ಇರಿಸುವ ಕೆಲಸವಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ ಪಂಚಮಸಾಲಿ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಬೇಸರ ಹೊರಹಾಕಿದ ವಚನಾನಂದ ಸ್ವಾಮೀಜಿ 

ಬೆಂಗಳೂರು(ಏ.12): ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ಗಣನೀಯ ಪಾತ್ರ ನಿರ್ವಹಿಸಿದ ಪಂಚಮಸಾಲಿ ಲಿಂಗಾಯತರನ್ನು ಪಕ್ಷ ಕಡೆಗಣಿಸಿದೆ ಎಂದು ಆರೋಪಿಸಿರುವ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಳೆದ 25 ವರ್ಷಗಳಿಂದ ಲಿಂಗಾಯತರಲ್ಲಿ ಅತಿಹೆಚ್ಚು ಜನಸಂಖ್ಯೆಯುಳ್ಳ ಪಂಚಮಸಾಲಿ ಸಮುದಾಯದ ಲಕ್ಷಾಂತರ ಯುವಕರು, ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಲಿಂಗಾಯತರು ಇರುವುದರಿಂದಲೇ ದಕ್ಷಿಣ ಭಾರತದಲ್ಲಿ ಪ್ರಥಮ ಬಿಜೆಪಿ ಸರ್ಕಾರ ಬರಲು ಸಾಧ್ಯವಾಗಿದೆ. ಪಂಚಮಸಾಲಿಗಳ ಸಾಕಷ್ಟು ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪಂಚಮಸಾಲಿಗಳನ್ನು ಅಧಿಕಾರದಿಂದ ದೂರು ಇರಿಸುವ ಕೆಲಸವಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ ಪಂಚಮಸಾಲಿ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

ರಾಜಕಾರಣ ಶುದ್ಧಿ ಮಾಡಲಿಕ್ಕೆ ಪರಮಪೂಜ್ಯರು ಬಹಳ ಯೋಗ್ಯರು: ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಸ್ವಾಗತಿಸಿದ ವಚನಾನಂದ ಶ್ರೀ!

ಬಿಜೆಪಿಯವರು ಪಂಚಮಸಾಲಿ ನಾಯಕರ ನಡುವೆ ಒಳಗೊಳಗೆ ಜಗಳ ಹಚ್ಚಿ ಅಧಿಕಾರ ಪಡೆದುಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದರು. ಪಂಚಮಸಾಲಿ ಎಂದರೆ ಬಿಜೆಪಿ ಎನ್ನುವಂತಿತ್ತು. ಸಮುದಾಯದ ಜನ ಜಾಗೃತರಾಗಿದ್ದಾರೆ. ಈಗಾಗಲೇ ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮುದಾಯ ಸಭೆ ಮಾಡುತ್ತಿದ್ದೇವೆ. ಆ ಸಭೆಯಲ್ಲಿ ಸಮುದಾಯದ ಭಕ್ತರ ಅಭಿಪ್ರಾಯ, ಅನಿಸಿಕೆ ಸಂಗ್ರಹಿಸುತ್ತಿದ್ದೇವೆ. ಸಮುದಾಯದವರು ಈ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರಕ್ಕೆ ಬಂದಾಗ ಪಂಚಮಸಾಲಿ ಸಮುದಾಯದವರನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಮಾಡಲಿಲ್ಲ. ಪ್ರಮುಖ ಸಚಿವ ಸ್ಥಾನ ನೀಡಲಿಲ್ಲ. ಇತ್ತೀಚೆಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡುವ ಅವಕಾಶ ಇತ್ತಾದರೂ ನೀಡಲಿಲ್ಲ. ಮೇಲ್ಮನೆ ಅಥವಾ ಕೆಳಮನೆಯಲ್ಲಿ ಪಂಚಮಸಾಲಿಗಳನ್ನು ಸ್ಪೀಕರ್‌ ಮಾಡಲಿಲ್ಲ. ಇನ್ನು ರಾಜ್ಯ ಬಿಜೆಪಿಯ ಕೋರ್‌ ಕಮಿಟಿಯಲ್ಲಿ ಪಂಚಮಸಾಲಿಯ ಒಬ್ಬ ನಾಯಕನೂ ಇಲ್ಲ. ಅಂದರೆ, ಈ ಮೂಲಕ ನಮ್ಮ ಸಮುದಾಯ ದನಿ ಅಡಗಿಸುವ ಕೆಲಸ ಮಾಡಲಾಗಿದೆ ಎಂದು ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆ 2024: ಪಂಚಮಸಾಲಿಗೆ ನ್ಯಾಯ ಸಿಗದಿದ್ದರೆ ಸೂಕ್ತ ಉತ್ತರ, ವಚನಾನಂದ ಶ್ರೀ ಎಚ್ಚರಿಕೆ

ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಲಿಂಗಾಯತ ಸಮುದಾಯಕ್ಕೆ 9 ಟಿಕೆಟ್‌ ನೀಡಿದೆ. ಈ ಪೈಕಿ ಪಂಚಮಸಾಲಿಗಳಿಗೆ ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಲಿಂಗಾಯತರಿಗೆ 5 ಟಿಕೆಟ್‌ ನೀಡಿದ್ದು, ಇದರಲ್ಲಿ ಪಂಚಮಸಾಲಿಗಳಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ಕೊಟ್ಟಿದೆ. ಕಾಂಗ್ರೆಸ್‌ನವರು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಆದರೆ, ಬಿಜೆಪಿಯವರು ನಮ್ಮ ಸಮುದಾಯಕ್ಕೆ ನೇರ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಪಂಚಮಸಾಲಿ ನಾಯಕರ ನಡುವೆ ಒಳಗೊಳಗೆ ಜಗಳ ಹಚ್ಚಿ ಅಧಿಕಾರ ಪಡೆದುಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಲೋಕಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಲಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ವಚನಾನಂದ ಸ್ವಾಮೀಜಿ ತಳಿಸಿದ್ದಾರೆ. 

click me!