
ಬೆಂಗಳೂರು (ಅ.08): ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯ ಭೀಕರ ಘಟನೆಯನ್ನು ಈಗ ಕರ್ನಾಟಕ ಬಿಜೆಪಿಯು ಶಿವಮೊಗ್ಗ (Shivamogga) ಗಲಭೆಕೋರರಿಗೆ ಹೋಲಿಕೆ ಮಾಡಿ, ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ವಿಭಾಗವು ಎಕ್ಸ್ (ಹಳೆಯ ಟ್ವಿಟರ್)ನಲ್ಲಿ 'ಇಂದು ಯಹೂದಿಗಳ ದೇಶ ಇಸ್ರೇಲ್ ಮೇಲೆ ಗನ್ನು-ಗುಂಡುಗಳಿಂದ ದಾಳಿ ಮಾಡುತ್ತಿರುವ ದಾಳಿಕೋರರಿಗೂ ಮೊನ್ನೆ ಶಿವಮೊಗ್ಗದಲ್ಲಿ ತಲ್ವಾರ್ ಮೆರವಣಿಗೆ ಮಾಡುತ್ತಾ, ಭಯದ ವಾತಾವರಣ ಸೃಷ್ಟಿಸುತ್ತಾ, ಅಲ್ಪಸಂಖ್ಯಾತ ಬಾಹುಳ್ಯವುಳ್ಳ ಸ್ಥಳಗಳಿಂದ ಹಿಂದೂಗಳನ್ನು ಓಡಿಸಲೆತ್ನಿಸಿದ ಮತಾಂಧರಿಗೂ ಏನೇನೂ ವ್ಯತ್ಯಾಸವಿಲ್ಲ!
ಖಡ್ಗವೇ ಅವರ ಸ್ಫೂರ್ತಿ ಒಂದೇ!
ಖಡ್ಗವೇ ಅವರ ಉದ್ದೇಶ ಒಂದೇ!
ಖಡ್ಗವೇ ಅವರ ಘೋಷ ಒಂದೇ!
ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ‘ಹಮಾಸ್’ ದಾಳಿಗೆ ಪ್ರತ್ಯುತ್ತರವಾಗಿ ಇದೀಗ ಆರಂಭವಾಗಿರುವ ಯುದ್ಧವು ಆದಷ್ಟು ಶೀಘ್ರದಲ್ಲಿ ಅಂತ್ಯ ಕಂಡು ಶಾಂತಿ ನೆಲಸುವಂತಾಗಲಿ ಎಂದು ಬರೆದುಕೊಮಡು ಪೋಸ್ಟ್ ಮಾಡಿದೆ.
ಶಿವಮೊಗ್ಗ ಅಡಿಕೆ ಬೆಳೆಗಾರ ಕುಟುಂಬದ ಸಜೀವ ದಹನ: ಬೆಂಕಿ ಆಕಸ್ಮಿಕವಲ್ಲ, ಇದೊಂದು ಕೌಟುಂಬಿಕ ಆತ್ಮಹತ್ಯೆ
ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇಸ್ರೇಲ್ ಕೂಡ ತಕ್ಕ ಎದುರೇಟು ನೀಡಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ನೆಲೆಸಿದ್ದ ಬಹುಮಹಡಿ ಕಟ್ಟಡವನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿದೆ. ಇಸ್ರೇಲ್ ಬಾಂಬ್ ದಾಳಿಗೆ ತುತ್ತಾಗಿ ನೋಡು ನೋಡುತ್ತಿದ್ದಂತೆ ಬಹುಮಹಡಿ ಬೃಹತ್ ಕಟ್ಟಡವೊಂದು ತರಗೆಲೆಯಂತೆ ಕೆಳಗುರುಳಿದೆ. ಸೆಂಟ್ರಲ್ ಗಾಜಾ ನಗರದಲ್ಲಿ ಇಸ್ರೇಲ್ (Israel) ನಡೆಸಿದವ ವೈಮಾನಿಕ ದಾಳಿಗೆ ಬಹುಮಹಡಿ ಕಟ್ಟಡವೊಂದು ನೆಲಕ್ಕುರುಳಿದೆ. 14 ಅಂತಸ್ತಿನ ಈ ಪ್ಯಾಲೆಸ್ತೀನ್ ಟವರ್ ಹತ್ತಾರು ಕುಟುಂಬಗಳಿಗೆ ನೆಲೆಯಾಗಿತ್ತು. ಜೊತೆಗೆ ಇದು ಭಯೋತ್ಪಾದಕ ಸಂಘಟನೆ ಹಮಾಸ್ (Hamas) ಜೊತೆ ನಿಕಟ ಸಂಪರ್ಕ ಹೊಂದಿದ ಕೆಲ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇನ್ನು ಹಮಾಸ್ ಉಗ್ರರು 500 ಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅಲ್ಲದೇ ದೇಶದ ಒಳಗೆ ನುಗ್ಗಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ಹೋರಾಡುತ್ತಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಚ್ಟ್ ತಿಳಿಸಿದ್ದಾರೆ. ಯುದ್ಧ ಘೋಷಣೆಯ ಬಳಿಕ ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರುವಂತೆ ಎಚ್ಚರಿಸಿದೆ. ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಸೂಚಿಸಿದ್ದು, ಅನಗತ್ಯವಾಗಿ ಮನೆಯಿಂದ ಹೊರಗೆ ಬರದಿರುವಂತೆ ತಿಳಿಸಿದೆ.
ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು
ನಾವು ಯುದ್ಧದಲ್ಲಿದ್ದೇವೆ. ಈ ಹೋರಾಟಕ್ಕೆ ಸಾಮೂಹಿಕವಾಗಿ ಸೇನೆ ಸಜ್ಜುಗೊಳಿಸಿದ್ದೇವೆ, ಇದೊಂದು ಕಾರ್ಯಾಚರಣೆ ಅಲ್ಲ, ಇದು ಒಂದು ಸುತ್ತಲ್ಲ, ಇದೊಂದು ಯುದ್ಧ, ನಮ್ಮನ್ನು ಕೆಣಕಿದ ಶತ್ರುಗಳು ನಿರೀಕ್ಷೆಯೂ ಮಾಡದಷ್ಟು ಅಮೂಲ್ಯವಾದ ಬೆಲೆ ತೆರಬೇಕಾಗುತ್ತದೆ. ಶತ್ರುಗಳಿಗೆ ಎಣಿಕೆಗೂ ಸಿಗದಂತಹ ಬೆಂಕಿಯನ್ನು ನಾವು ಮರಳಿಸಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ನಿನ್ನೆ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ