
ಬೆಂಗಳೂರು (ಫೆ.16): ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಶುಕ್ರವಾರ ಮಂಡನೆಯಾಗುತ್ತಿದ್ದು, ತಮ್ಮ ಎರಡನೇ ಬಜೆಟ್ ಮಂಡಿಸುವ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳ ಘೋಷಣೆಗೆ ಸಜ್ಜಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆ ಮಾಡಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಬಜೆಟ್ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಮುಖ್ಯಮಂತ್ರಿಗಳು ಪಕ್ಷದ ಪ್ರಣಾಳಿಕೆ ರೂಪದ ಭರವಸೆಗಳನ್ನು ಒಳಗೊಂಡ ಚುನಾವಣಾ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಬಡವರು, ನೀರಾವರಿ, ಗ್ರಾಮೀಣ, ರೈತರು, ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಯೋಜನೆಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಬಿಜೆಪಿಯವರಂತೆ ಅಮಾಯಕರ ಬಲಿಕೊಟ್ಟು ರಾಜಕಾರಣ ಮಾಡಿಲ್ಲ: ಎಚ್‌ಡಿಕೆ
2ನೇ ಅವಕಾಶ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮೊದಲಿಗೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಅವರು ಎರಡು ಬಜೆಟ್‌ಗಳನ್ನು ಮಂಡಿಸಿ ಅಧಿಕಾರ ತ್ಯಜಿಸಿದರು. ನಂತರ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗುವ ಅದೃಷ್ಟಒಲಿದು ಬಂತು. ಇದೀಗ ಮುಖ್ಯಮಂತ್ರಿಯಾಗಿ ಎರಡನೇ ಬಜೆಟ್ ಮಂಡಿಸಲಿದ್ದಾರೆ.
3 ಲಕ್ಷ ಕೋಟಿ ಬಜೆಟ್?: ಕಳೆದ ಎರಡು ವರ್ಷ ಕೋವಿಡ್ ಮಹಾಮಾರಿಯಿಂದಾಗಿ ರಾಜ್ಯಕ್ಕೆ ಆದಾಯ ಕ್ರೋಢೀಕರಣದಲ್ಲಿ ಹಿನ್ನಡೆಯಾಗಿತ್ತು. ಆದರೆ, ಈ ಬಾರಿ ಉತ್ತಮ ಆದಾಯ ಸಂಗ್ರಹಣೆಯಾಗಿದೆ. ಆದಾಯ ಮೂಲಗಳಲ್ಲಿ ಚೇತರಿಕೆ ಕಂಡು ಬಂದಿರುವುದರಿಂದ ಬಸವರಾಜ ಬೊಮ್ಮಾಯಿ ಅವರು ನಿಟ್ಟಿಸಿರು ಬಿಡುವಂತಾಗಿದೆ. 2022-23ನೇ ಸಾಲಿನಲ್ಲಿ 2.65 ಲಕ್ಷ ಕೋಟಿ ರು. ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಸುಮಾರು ಮೂರು ಲಕ್ಷ ಕೋಟಿ ರು.ಗಳ ಬಜೆಟ್ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಜನಪ್ರಿಯ ಯೋಜನೆ ಪ್ರಕಟ: ಜಿಎಸ್‌ಟಿ ಸಂಗ್ರಹ ಸಹ ಅತ್ಯುತ್ತಮವಾಗಿದೆ. ತೆರಿಗೆ ಸಂಗ್ರಹಿಸುವ ಇಲಾಖೆಗಳು ನೀಡಿರುವ ಗುರಿಗಿಂತ ಹೆಚ್ಚು ಆದಾಯ ಕ್ರೋಢೀಕರಣ ಮಾಡುತ್ತಿದೆ. ಜನವರಿ ತಿಂಗಳಲ್ಲಿ 11 ಸಾವಿರ ಕೋಟಿ ರು.ಗಳಷ್ಟುಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಉತ್ತಮ ಆದಾಯ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಮತ್ತು ಚುನಾವಣೆ ವರ್ಷವಾಗಿರುವ ಕಾರಣ ಜನಪ್ರಿಯ ಯೋಜನೆಗಳ ಘೋಷಿಸುವ ನಿರೀಕ್ಷೆ ಇದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವುದು, ರೈತರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಬಜೆಟ್ ಇದಾಗಲಿದೆ ಎನ್ನಲಾಗಿದೆ.
ನೌಕರರಿಗೆ ಬಂಪರ್?: ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇನ್ನು, ಏಳನೇ ವೇತನ ಆಯೋಗ ರಚನೆ ಮಾಡಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಾಗಲಿದೆ. ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಗಳನ್ನು ಸೆಳೆಯಲು ಹಲವು ಭರವಸೆಗಳನ್ನು ನೀಡಬಹುದು ಎಂದು ಹೇಳಲಾಗಿದೆ.
ಕಾಂಗ್ರೆಸ್ ಭಯೋತ್ಪಾದಕರ ಪಕ್ಷ: ನಳಿನ್‌ಕುಮಾರ್ ಕಟೀಲ್
ಹಲವು ಯೋಜನೆ ವಿಲೀನ: ಆರ್ಥಿಕ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಪ್ರಸ್ತಾವನೆ ಕಳುಹಿಸುವ ವೇಳೆ ಏಕ ಉದ್ದೇಶ ಇರುವ ಯೋಜನೆಗಳನ್ನು ಪ್ರತ್ಯೇಕಿಸದೆ ವಿಲೀನಗೊಳಿಸುವಂತೆ ಸೂಚನೆ ನೀಡಿತ್ತು. ಹಲವು ಬಾರಿ ಯೋಜನೆಗಳ ಉದ್ದೇಶ ಒಂದೇ ಆಗಿರುತ್ತದೆ. ಆದರೆ, ಯೋಜನೆಗಳನ್ನು ಪ್ರತ್ಯೇಕಿಸಲಾಗಿರುತ್ತದೆ. ಇದರಿಂದ ಗೊಂದಲ, ದುಂದು ವೆಚ್ಚಕ್ಕೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲ, ದುಂದುವೆಚ್ಚ ಇಲ್ಲದೆ ನಿಖರವಾದ ಅಂದಾಜನ್ನು ಕಳುಹಿಸುವಂತೆ ತಿಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಯೋಜನೆಗಳನ್ನು ಪ್ರತ್ಯೇಕಿಸಿದೆ ಏಕ ಉದ್ದೇಶ ಇರುವ ಯೋಜನೆಗಳನ್ನು ವಿಲೀನಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ