Latest Videos

ವಾಲ್ಮೀಕಿ ನಿಗಮ ಅಕ್ರಮ: ಸಿದ್ದು ರಾಜೀನಾಮೆಗೆ ಬಿಜೆಪಿ ಪಟ್ಟು

By Kannadaprabha NewsFirst Published Jun 16, 2024, 7:00 AM IST
Highlights

ಹಣಕಾಸು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 14ಕ್ಕೂ ಅಧಿಕ ಬಾರಿ ಬಜೆಟ್‌ ಮಂಡಿಸಿದ್ದಾರೆ. ಹಾಲಿ ಹಣಕಾಸು ಸಚಿವರೂ ಆಗಿರುವ ಅವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತ ಬೇರೆಡೆಗೆ ವರ್ಗಾವಣೆಯಾಗಿದ್ದು ಹೇಗೆ?, ಸಿದ್ದರಾಮಯ್ಯ ಅವರ ಮೇಲೆ ಅನುಮಾನ ಬರುತ್ತಿದೆ ಎಂದ ರಾಮುಲು

ಬೆಂಗಳೂರು(ಜೂ.16):  ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು. ಮೊತ್ತದ ದೊಡ್ಡ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಶನಿವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣ ಸಂಬಂಧ ಮುಂಬರುವ ದಿನಗಳಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಜೂ.28ರಂದು ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕುಗಳ ಮಟ್ಟದಲ್ಲಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಾಲ್ಮೀಕಿ ಹಗರಣ: ಪದ್ಮನಾಭ ಆಪ್ತನ ಬಳಿ 30 ಲಕ್ಷ ಜಪ್ತಿ: ಈವರೆಗೆ 12 ಕೋಟಿ ರು. ವಶ

ಹಣಕಾಸು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 14ಕ್ಕೂ ಅಧಿಕ ಬಾರಿ ಬಜೆಟ್‌ ಮಂಡಿಸಿದ್ದಾರೆ. ಹಾಲಿ ಹಣಕಾಸು ಸಚಿವರೂ ಆಗಿರುವ ಅವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತ ಬೇರೆಡೆಗೆ ವರ್ಗಾವಣೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ ರಾಮುಲು, ಸಿದ್ದರಾಮಯ್ಯ ಅವರ ಮೇಲೆ ಅನುಮಾನ ಬರುತ್ತಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಚಂದ್ರಶೇಖರ್‌ ಎಂಬ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದನ್ವಯ 187 ಕೋಟಿ ರು. ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಡೆತ್‌ ನೋಟ್‌ನಲ್ಲಿ ಅವರು ಬರೆದಿಟ್ಟಿದ್ದರು ಎಂದು ಹೇಳಿದರು.

25 ಸಾವಿರ ಕೋಟಿ ರು. ದುರ್ಬಳಕೆ:

ಸರ್ಕಾರಗಳು ಪರಿಶಿಷ್ಟ ವರ್ಗಗಳ ಸಮುದಾಯದ ಏಳಿಗೆ, ಮಕ್ಕಳ ಭವಿಷ್ಯದ ಸಲುವಾಗಿ ಮೂಲಸೌಕರ್ಯ, ಭೂ ಒಡೆತನ, ನೇರ ಸಾಲ, ಉನ್ನತ ಶಿಕ್ಷಣ ಸೇರಿ ಶೇ.24 ಹಣವನ್ನು ಮೀಸಲಿಡಬೇಕಿದೆ. ಆದರೆ, ಕಳೆದ ವರ್ಷ ಈ ಸಮುದಾಯದ ಏಳಿಗೆಗಾಗಿ ಮೀಸಲಿಟ್ಟ ಸುಮಾರು 11 ಸಾವಿರ ಕೋಟಿ ರು. ಬೇರೆ ಬೇರೆ ಕಡೆಗೆ ವರ್ಗಾಯಿಸಿರುವ ಕಾಂಗ್ರೆಸ್‌ ಸರ್ಕಾರ ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ವರ್ಷ 14 ಸಾವಿರ ಕೋಟಿ ರು. ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಈ ಎರಡು ವರ್ಷಗಳಲ್ಲಿ ದಲಿತರ 25 ಸಾವಿರ ಕೋಟಿ ರು. ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಣಕಾಸು ಇಲಾಖೆ ಶಾಮೀಲು ಆರೋಪ:

ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣಕ್ಕೆ ವರ್ಗಾವಣೆ ಮಾಡಿದ್ದರು. ಸೆಕ್ಯುರಿಟಿ ಏಜೆನ್ಸಿ, ಚಿನ್ನದ ಅಂಗಡಿ, ವೈನ್ ಶಾಪ್‍ಗಳಲ್ಲಿ ಈ ಹಣವನ್ನು ವಿತ್‍ ಡ್ರಾ ಮಾಡಿದ್ದರು. ಬಳ್ಳಾರಿಯ ಮೈನಿಂಗ್ ಕಂಪನಿಯಲ್ಲಿ ಹಣ ಡ್ರಾ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲದೆ ಇದು ನಡೆದಿದೆಯೇ? ಈ ಭ್ರಷ್ಟಾಚಾರದ ಹಗರಣದಲ್ಲಿ ಹಣಕಾಸು ಇಲಾಖೆ ಶಾಮೀಲಾಗಿದೆಯೇ ಎಂದು ಜನರು ಕೇಳುತ್ತಿದ್ದಾರೆ ಎಂದರು.

ವಾಲ್ಮೀಕಿ ನಿಗಮದ ಹಣ ಬಾರ್‌ಗಳಿಗೆ ಕಳಿಸಿ ವಿತ್‌ ಡ್ರಾ: ಎಸ್‌ಐಟಿ ಶೋಧ

ಎಸ್‍.ಸಿ, ಎಸ್‍.ಟಿ ಸಮುದಾಯಕ್ಕೆ ಪ್ರತ್ಯೇಕ ಸಚಿವ- ಸಚಿವಾಲಯದ ಬೇಡಿಕೆ ಇದ್ದು, ಈ ಸಂಬಂಧ ಮೊದಲನೇ ಸಭೆಯು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದು ನನ್ನನ್ನು ಮೊದಲನೇ ಸಚಿವನನ್ನಾಗಿ ಮಾಡಿತ್ತು. ಅಂತೆಯೇ ಮೀಸಲಾತಿಯನ್ನು ಶೇ.7ಕ್ಕೆ ಏರಿಸಲಾಗಿತ್ತು. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಶೇ.17ಕ್ಕೆ ಏರಿಸಲಾಗಿತ್ತು ಎಂದು ಶ್ರೀರಾಮುಲು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಪಕ್ಷದ ಮುಖಂಡ ರಾಮಚಂದ್ರ ಉಪಸ್ಥಿತರಿದ್ದರು.

click me!