ಮಂಡ್ಯ ಹನಿಟ್ರ್ಯಾಪ್: ಸಲ್ಮಾಭಾನು ಮಾಯಾಜಾಲಕ್ಕೆ ಸಿಲುಕಿದ ಜಗನ್ನಾಥ ಶೆಟ್ಟಿ

By Govindaraj SFirst Published Sep 11, 2022, 9:52 AM IST
Highlights

ಹನಿಟ್ರ್ಯಾಪ್‌ ಎಂಬ ಮಾಯಾಜಾಲಕ್ಕೆ ಚಿನ್ನದ ಉದ್ಯಮಿ ಜಗನ್ನಾಥ ಶೆಟ್ಟಿಯನ್ನು ಸಿಲುಕಿಸಿದ ಸೂತ್ರಧಾರಿ ಸಲ್ಮಾಭಾನು. ಈಕೆಯ ಜೊತೆಗೆ ಯುವತಿ ಸೇರಿದಂತೆ ಮೂವರು ವ್ಯಕ್ತಿಗಳು ಸಾಥ್‌ ನೀಡಿದ್ದಾರೆ. 

ಮಂಡ್ಯ (ಸೆ.11): ಹನಿಟ್ರ್ಯಾಪ್‌ ಎಂಬ ಮಾಯಾಜಾಲಕ್ಕೆ ಚಿನ್ನದ ಉದ್ಯಮಿ ಜಗನ್ನಾಥ ಶೆಟ್ಟಿಯನ್ನು ಸಿಲುಕಿಸಿದ ಸೂತ್ರಧಾರಿ ಸಲ್ಮಾಭಾನು. ಈಕೆಯ ಜೊತೆಗೆ ಯುವತಿ ಸೇರಿದಂತೆ ಮೂವರು ವ್ಯಕ್ತಿಗಳು ಸಾಥ್‌ ನೀಡಿದ್ದಾರೆ. ಹೆಣ್ಣೆಂಬ ಮಾಯೆಯ ಬೆನ್ನೇರಿ ಹೋದ ಜಗನ್ನಾಥ ಶೆಟ್ಟಿವಂಚಕರ ರೂಪಿಸಿದ್ದ ಖೆಡ್ಡಾಗೆ ಬಿದ್ದು ಹಣ ಕಳೆದುಕೊಂಡು ಹರಕೆಯ ಕುರಿಯಾಗಿದ್ದಾರೆ.

ಹೆಣ್ಣಿನ ವ್ಯಾಮೋಹಕ್ಕೊಳಗಾಗಿದ್ದ ಜಗನ್ನಾಥ ಶೆಟ್ಟಿಯ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಳ್ಳಲು ಸಲ್ಮಾಭಾನು ನೇತೃತ್ವದ ತಂಡ ರೂಪಿಸಿದ ತಂತ್ರ ಸಕ್ಸಸ್‌ ಆಯಿತು. ಲಕ್ಷ ಲಕ್ಷ ಹಣ ಕೈ ಸೇರುವಂತೆ ಮಾಡಿತು. ವಂಚಕರಿಂದ ಹಣ ಪಡೆದುಕೊಳ್ಳುವ ಸಲುವಾಗಿ ಜಗನ್ನಾಥಶೆಟ್ಟರು ಪೊಲೀಸರಿಗೆ ದೂರು ಕೊಟ್ಟರು. ಅಂತಿಮವಾಗಿ ಹಲವು ದಶಕಗಳಿಂದ ಸಮಾಜದಲ್ಲಿ ಜಗನ್ನಾಥ ಶೆಟ್ಟಿ ಗಳಿಸಿಕೊಂಡು ಬಂದಿದ್ದ ಗೌರವ-ಮರ್ಯಾದೆಗಳೆಲ್ಲವೂ ಮಣ್ಣುಪಾಲಾಗುವಂತೆ ಮಾಡಿತು.

ಲಾಡ್ಜ್‌​ನಲ್ಲಿ ಯುವತಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಪ್ರೀತಿಯ ಮಾತಿಗೆ ಮರುಳು: ಸಲ್ಮಾಭಾನು ಹಾಗೂ ನಸ್ರೀನ್‌ (ಹೆಸರು ಬದಲಿಸಿದೆ) ಇಬ್ಬರೂ ಪರಿಚಯಸ್ಥರು. ಇಬ್ಬರೂ ನಗರದ ಶ್ರೀನಿಧಿ ಗೋಲ್ಡ್‌ ಮಾಲೀಕ ಜಗನ್ನಾಥ ಎಸ್‌.ಶೆಟ್ಟಿ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಚಲನವಲನಗಳನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದೊಂದು ದಿನ ಅನಾಮಧೇಯ ಮೆಸೇಜ್‌ವೊಂದು ಶೆಟ್ಟರ ದೂರವಾಣಿಗೆ ಹೋಗಿದೆ. ಕುತೂಹಲಕ್ಕಾಗಿ ಅದನ್ನು ಪರಿಶೀಲಿಸಲು ಹೋದ ಸಮಯದಲ್ಲಿ ನಸ್ರೀನ್‌ ಮಾತನಾಡಿದ್ದಾಳೆ. ಶೆಟ್ಟರ ಜೊತೆ ಮಾತನಾಡುತ್ತಲೇ ನಿಧಾನವಾಗಿ ಅವರನ್ನು ಸೆಳೆದುಕೊಂಡಿದ್ದಾಳೆ. ಆಕೆಯ ನಯವಾದ, ಪ್ರೀತಿಯ ಮಾತುಗಳಿಗೆ ಆಕರ್ಷಿತರಾಗಿದ್ದಾರೆ. ಇಬ್ಬರ ನಡುವೆ ಪದೇ ಪದೇ ದೂರವಾಣಿ ಸಂಭಾಷಣೆ ಮುಂದುವರೆದಿತ್ತು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.

ಜಗನ್ನಾಥ ಶೆಟ್ಟರು ಕರೆ ಮಾಡಿದಾಗಲೆಲ್ಲಾ ನಸ್ರೀನ್‌ ಅದನ್ನು ಅವರಿಗೆ ಗೊತ್ತಾಗದಂತೆ ಮೊಬೈಲ್‌ನಲ್ಲಿ ರೆಕಾರ್ಡಿಂಗ್‌ ಮಾಡಿಕೊಂಡಿದ್ದಾಳೆ. ಶೆಟ್ಟರು ತಾನೊಬ್ಬ ಉಪನ್ಯಾಸಕ ಎಂದು ಹೇಳಿದ ಸುಳ್ಳನ್ನೇ ವಂಚಕರ ತಂಡ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿದೆ. ನಸ್ರೀನ್‌ ತಾನು ವಿದ್ಯಾರ್ಥಿನಿ ಎಂದು ಪರಿಚಯಿಸಿಕೊಂಡು ಶೆಟ್ಟರನ್ನು ತಮ್ಮ ಮಾಯಾಜಾಲಕ್ಕೆ ಸಿಲುಕಿಸುವ ಪ್ರಯತ್ನ ಮುಂದುವರೆಸಿದ್ದಳು ಎನ್ನಲಾಗಿದೆ.

ಮೋಡಿ ಮಾಡಿದ್ದ ಯುವತಿ: ದೂರವಾಣಿ ಸಂಭಾಷಣೆಯಲ್ಲೂ ಅಷ್ಟೇ ಜಾಣತನದಿಂದ ಶೆಟ್ಟರ ಮಾತುಗಳಿಗೆ ನಸ್ರೀನ್‌ ಉತ್ತರ ನೀಡಿದ್ದಳು. ಅವರ ಮಾತುಗಳು ಪ್ರಣಯದ ಕಡೆಗೆ ತಿರುಗಿದರೂ ತಕ್ಷಣವೇ ಮಾತು ಬದಲಿಸುತ್ತಾ ಆ ಬಗ್ಗೆ ತನಗೇನೂ ಗೊತ್ತೇ ಇಲ್ಲವೆಂಬ ಭಾವವನ್ನು ಮಾತುಗಳಲ್ಲಿ ವ್ಯಕ್ತಪಡಿಸುತ್ತಿದ್ದಳು. ಎಲ್ಲಿಯೂ ಸಣ್ಣ ಅನುಮಾನಕ್ಕೂ ಆಸ್ಪದವಾಗದಂತೆ, ಮಾತುಗಳಲ್ಲಿ ವ್ಯತ್ಯಾಸವಾಗದಂತೆ ಜಾಗರೂಕತೆಯಿಂದ ಮಾತನಾಡಿ ಶೆಟ್ಟರನ್ನು ಮೋಡಿ ಮಾಡಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕ್ಲೈಮ್ಯಾಕ್ಸ್‌ ತಲುಪಿದ ಸಂಭಾಷಣೆ: ಯುವತಿಯ ವ್ಯಾಮೋಹಕ್ಕೊಳಗಾದ ಜಗನ್ನಾಥ ಶೆಟ್ಟರು ಪದೇ ಪದೇ ನಸ್ರೀನ್‌ಗೆ ಕರೆ ಮಾಡಲಾರಂಭಿಸಿದರು. ಕೆಲವೊಮ್ಮೆ ಆಕೆ ಫೋನ್‌ ರಿಸೀವ್‌ ಮಾಡುತ್ತಿರಲಿಲ್ಲ. ಕರೆ ಸ್ವೀಕರಿಸದಿರುವುದಕ್ಕೂ ಚಿಕ್ಕಪ್ಪನ ಕಾರಣವನ್ನು ಸೃಷ್ಟಿಸಿಕೊಂಡು ಶೆಟ್ಟರನ್ನು ನಂಬಿಸಿದ್ದಳು. ಸಲ್ಮಾಭಾನು ಇರುವ ಸಂದರ್ಭದಲ್ಲಷ್ಟೇ ನಸ್ರೀನ್‌ ಕರೆ ಮಾಡುವುದು, ಸ್ವೀಕರಿಸುವುದು ಮಾಡುತ್ತಿದ್ದಳು. ಎಲ್ಲವೂ ಸಲ್ಮಾಭಾನು ಹೇಳಿದಂತೆಯೇ ನಡೆಯುತ್ತಿತ್ತು ಎಂದು ಗೊತ್ತಾಗಿದೆ.

ನಸ್ರೀನ್‌ಳ ಪಾಶಕ್ಕೆ ಸಿಲುಕಿದ್ದ ಜಗನ್ನಾಥಶೆಟ್ಟರು ತಮ್ಮ ಮನದಾಳದ ಆಸೆಯನ್ನೆಲ್ಲಾ ಆಕೆ ಎದುರು ಬಿಚ್ಚಿಟ್ಟಿದ್ದರು. ಶೆಟ್ಟರ ಆಸೆ, ಕುತೂಹಲ ಹೆಚ್ಚಾಗಿರುವುದನ್ನು ಖಚಿತಪಡಿಸಿಕೊಂಡ ಸಲ್ಮಾಭಾನು ತಂಡ ಅಂತಿಮವಾಗಿ ಖೆಡ್ಡಾಗೆ ಕೆಡವಲು ನಿರ್ಧರಿಸಿತು. ಯುವತಿ ಭೇಟಿ ಮಾಡುವ ಸ್ಥಳ, ಇರಲು ಮಾಡುವ ಲಾಡ್ಜ್‌ ವ್ಯವಸ್ಥೆಯನ್ನು ಶೆಟ್ಟರ ಆಯ್ಕೆಗೇ ಬಿಟ್ಟರು ಎಂದು ಹೇಳಲಾಗಿದೆ.

ಜಾಲದ ಸುಳಿವೇ ತಿಳಿಯಲಿಲ್ಲ: ಯುವತಿಯೊಂದಿಗೆ ಎರಡು ನೈಟ್‌, ಒಂದು ಡೇ ಕಳೆಯುವ ಖುಷಿಯಲ್ಲಿದ್ದ ಜಗನ್ನಾಥ ಶೆಟ್ಟರಿಗೆ ತನ್ನ ಸುತ್ತ ವಂಚಕರ ತಂಡ ಹೆಣೆದಿರುವ ಜಾಲದ ಸುಳಿವೇ ಗೊತ್ತಾಗಲಿಲ್ಲ. ದರ್ಶನ್‌ ಪ್ಯಾಲೇಸ್‌ ಲಾಡ್ಜ್‌ಗೆ ಯುವತಿಯನ್ನು ಕರೆದುಕೊಂಡು ಹೋದ ಸಮಯದಲ್ಲೇ ಸಲ್ಮಾಭಾನು ಮತ್ತು ತಂಡ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ. ಜಗನ್ನಾಥಶೆಟ್ಟರು ಹಾಗೂ ಯುವತಿ ಲಾಡ್ಜ್‌ನ ಕೊಠಡಿಯನ್ನು ಸೇರಿಕೊಂಡ ಕೆಲ ಸಮಯದ ಬಳಿಕ ಕೊಠಡಿಯ ಬಾಗಿಲು ಬಡಿದಿದ್ದಾರೆ. ಶೆಟ್ಟರು ಬಾಗಿಲು ತೆರೆಯುತ್ತಿದ್ದಂತೆ ಸಲ್ಮಾಭಾನು, ಮೂವರು ವ್ಯಕ್ತಿಗಳು ಏಕಾಏಕಿ ಒಳನುಗ್ಗಿದ್ದಾರೆ. ದಿಢೀರ್‌ ದಾಳಿಯಿಂದ ಜಗನ್ನಾಥಶೆಟ್ಟರು ದಿಗ್ಭ್ರಾಂತರಾಗಿದ್ದಾರೆ.

ಹಲ್ಲೆ ಮಾಡುವಾಗಲೂ ಹೈಡ್ರಾಮಾ: ಬಹಿರಂಗವಾಗಿರುವ ವಿಡಿಯೋದಲ್ಲಿ ಜಗನ್ನಾಥಶೆಟ್ಟರು ಮಾತ್ರ ಬನಿಯನ್‌, ಪಂಚೆಯಲ್ಲಿದ್ದರೆ, ಯುವತಿ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಮೈತುಂಬಾ ಬಟ್ಟೆಧರಿಸಿಕೊಂಡಿದ್ದಾಳೆ. ಈ ನಡುವೆ ಸಲ್ಮಾಭಾನು ಜಗನ್ನಾಥ ಶೆಟ್ಟಿಯ ಬಗ್ಗೆ ಸ್ಥಳದಿಂದಲೇ ವಿವರಣೆ ನೀಡುತ್ತಾಳೆ. ವ್ಯಕ್ತಿಯೊಬ್ಬ ಯಾರೇ ಅವನು, ಇಲ್ಲಿಗ್ಯಾಕೆ ಬಂದೆ, ಪಾಠ ಮಾಡೋ ಜಾಗನೇನೆ ಇದು ಎಂದು ಯುವತಿಗೆ ಹೊಡೆಯಲು ಹೋಗುತ್ತಾನಷ್ಟೇ. ಆದರೆ, ಜಗನ್ನಾಥಶೆಟ್ಟಿಮೇಲೆ ಹಲ್ಲೆ ಮಾಡುವಾಗ, ಅವರು ನಮ್ಮ ಲೆಕ್ಚರರ್ರು, ಅವರಿಗೇನು ಮಾಡಬೇಡಿ ಚಿಕ್ಕಪ್ಪ ಎಂದು ಜಗನ್ನಾಥ ಶೆಟ್ಟರ ಎದುರು ನಸ್ರೀನ್‌ ಹೈಡ್ರಾಮಾ ಮಾಡಿದ್ದಾಳೆ.

ಸಲ್ಮಾಭಾನು, ಯುವತಿ ಮತ್ತವರ ತಂಡ ನಡೆಸಿದ್ದು ಬರೀ ನಾಟಕ ಎನ್ನುವುದು ಜಗನ್ನಾಥಶೆಟ್ಟರ ಅರಿವಿಗೆ ಬರಲೇ ಇಲ್ಲ. ನಿಜವಾಗಿಯೂ ಯುವತಿಯ ಚಿಕ್ಕಪ್ಪ ಮತ್ತು ಆಕೆಯ ಮನೆಯವರೇ ಹೋಟೆಲ್‌ಗೆ ಬಂದಿರಬಹುದೆಂದು ಭಾವಿಸಿದ್ದರು. ಕೊನೆಗೆ ಅವರು ಆರಂಭದಲ್ಲಿ 4 ಕೋಟಿ ಹಣಕ್ಕೆ ಬೇಡಿಕೆ ಇಟ್ಟರು. ಕೊನೆಗೆ 50 ಲಕ್ಷ ರು. ಕೊಡುವುದಾಗಿ ಶೆಟ್ಟರು ಒಪ್ಪಿಕೊಂಡ ಬಳಿಕ ಅವರನ್ನು ಬಿಟ್ಟರು.

ಶೆಟ್ಟರ ಗೌರವ-ಮರ್ಯಾದೆಗಳೆಲ್ಲವೂ ಹಾಳು: ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷರಾಗಿ, ದೇವರಾಜ ಅರಸು ಜೀವನ ಚರಿತ್ರ ಪುಸ್ತಕದ ಕರ್ತೃವಾಗಿ, ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಜಿಲ್ಲಾ ಪರಿಷತ್‌ ಸದಸ್ಯರಾಗಿ, ಗೌರವಾನ್ವಿತ ವ್ಯಕ್ತಿಯಾಗಿ, ಸಾಂಸ್ಕೃತಿಕ ರಾಯಭಾರಿ ಎಂದು ಗುರುತಿಸಿಕೊಂಡಿದ್ದ ಜಗನ್ನಾಥಶೆಟ್ಟಿನಿಜಸ್ವರೂಪ ಕಂಡು ಅವರ ಸುತ್ತಮುತ್ತಲಿನ ಜನರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವದಲ್ಲಿ ಕಾಣುವ ಶೆಟ್ಟರ ವ್ಯಕ್ತಿತ್ವವೇ ಬೇರೆ, ಅವರ ಒಳಗಿನ ಆಂತರ‍್ಯದಲ್ಲಿರುವ ವ್ಯಕ್ತಿತ್ವವೇ ಬೇರೆ ಎನ್ನುವುದು ಬಹಿರಂಗಗೊಂಡಿದೆ. ಅವರೊಂದಿಗೆ ಸದಾಕಾಲ ಇರುತ್ತಿದ್ದ ಸ್ನೇಹ ಬಳಗ ಈಗ ಅವರೊಂದಿಗೆ ಮಾತನಾಡುವುದಕ್ಕೂ ಮುಜುಗರಪಡುತ್ತಿದ್ದಾರೆ. ಅವರನ್ನು ಸಮರ್ಥಿಸಿಕೊಳ್ಳುವ, ಅವರ ಪರವಾಗಿ ನಿಲ್ಲುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಕುಟುಂಬ ಸದಸ್ಯರ ನಂಬಿಕೆಯನ್ನು ಹುಸಿಗೊಳಿಸಿಕೊಂಡಿರುವ ಜಗನ್ನಾಥಶೆಟ್ಟರು ಏಕಾಂಗಿಯಾಗಿದ್ದಾರೆ. ಈ ಪ್ರಕರಣದಿಂದ ಅವರ ಚಿನ್ನದಂಗಡಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.

ಕುಂಬಳಕಾಯಿ ಕಳ್ಳರು ಎಲ್ಲೆಡೆ ಇದ್ದರೆ ನಾನೇನ್‌ ಮಾಡ್ಲಿ: ದಳಪತಿಗಳಿಗೆ ಸುಮಲತಾ ತಿರುಗೇಟು

ಬಂಧಿತ ಜಯಸಿಂಹ ಕ್ರೀಡಾ ತರಬೇತುದಾರ: ಜಗನ್ನಾಥಶೆಟ್ಟಿ ಯುವತಿಯೊಂದಿಗಿದ್ದ ಲಾಡ್ಜ್‌ನೊಳಗೆ ವಿಡಿಯೋ ಮಾಡಿದ ಜಯಸಿಂಹ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ರಾಮನಗರ ತಾಲೂಕು ಅಕ್ಕೂರು ಗ್ರಾಮದವನು ಎಂದು ತಿಳಿದುಬಂದಿದೆ. ಓಶೋ ಕ್ರೀಡಾ ತರಬೇತುದಾರನಾಗಿರುವ ಈತನ ಜೊತೆಯಲ್ಲೇ ಯುವತಿಯೂ ಕ್ರೀಡಾ ತರಬೇತಿ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ. ಜಯಸಿಂಹ ಬಂಧನದೊಂದಿಗೆ ಪ್ರಕರಣದಲ್ಲಿ ಇದುವರೆಗೆ ನಾಲ್ವರ ಬಂಧನವಾಗಿದೆ. ಸಲ್ಮಾಭಾನು, ರಾಮನಗರ ಜಿಲ್ಲೆ ಚನ್ನಪಟ್ಟಣ ನಗರಸಭೆ ಗುತ್ತಿಗೆ ನೌಕರ ಜಿ.ಜಯಂತ್‌, ಹಾಗೂ ಕನಕಪುರ ತಾಲೂಕು ಚೌಕಸಂದ್ರ ಗ್ರಾಮದ ಸಿ.ಎನ್‌.ಮೋಹನ್‌ಕುಮಾರ್‌ ನಾಯ್ಕ್‌ ಈಗಾಗಲೇ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ. ಈತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ ನಂತರದಲ್ಲಿ ಮೊಬೈಲ್‌ನಲ್ಲಿ ಮಾತನಾಡಿರುವ ಆಡಿಯೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಕುತೂಹಲ ಮೂಡಿಸಿದೆ.

click me!