ಶಿವರಾತ್ರಿ 'ಚಂದಾ' ನೀಡದ ಅಂಗಡಿ ಯುವಕನಿಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

Published : Feb 07, 2026, 09:25 PM IST
Bidar Shivaratri Fund fight

ಸಾರಾಂಶ

ಬೀದರ್‌ನಲ್ಲಿ ಮಹಾಶಿವರಾತ್ರಿ ಹಬ್ಬದ ಚಂದಾ ವಸೂಲಿ ವೇಳೆ, ಕೇಳಿದಷ್ಟು ಹಣ ನೀಡದ ಕಾರಣಕ್ಕೆ ಯುವಕರ ಗುಂಪೊಂದು ಅಂಗಡಿಯಲ್ಲಿದ್ದ ಮಹೇಶ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಗುಂಪಿನಲ್ಲಿದ್ದ ಓರ್ವ ಮಹೇಶ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.

ಬೀದರ್ (ಫೆ.07): ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ, ಗಡಿಜಿಲ್ಲೆ ಬೀದರ್‌ನಲ್ಲಿ ಹಬ್ಬದ ಹೆಸರಿನಲ್ಲಿ ನಡೆಯುವ ಬಲವಂತದ ಚಂದಾ ವಸೂಲಿ (Donation) ವಿಕೋಪಕ್ಕೆ ತಿರುಗಿದೆ. ಕೇಳಿದಷ್ಟು ಚಂದಾ ಹಣ ನೀಡಲಿಲ್ಲ ಮತ್ತು ಅಂಗಡಿ ಮಾಲೀಕರು ಸ್ಥಳದಲ್ಲಿಲ್ಲ ಎಂಬ ಕಾರಣಕ್ಕೆ ಪುಂಡರ ಗುಂಪೊಂದು ಯುವಕನ ಕುತ್ತಿಗೆಗೆ ಚಾಕುವಿನಿಂದ ಇರಿದು ಭೀಕರ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಗರದ ಮೈಲೂರು ಬಡಾವಣೆಯಲ್ಲಿ ನಡೆದಿದೆ.

ಘಟನೆಯ ವಿವರ:

ಬೀದರ್ ನಗರದ ಮೈಲೂರು ಬಡಾವಣೆಯಲ್ಲಿರುವ ಅಂಗಡಿಯೊಂದಕ್ಕೆ ವಿದ್ಯಾನಗರ ಬಡಾವಣೆಯ ನಾಲ್ಕೈದು ಯುವಕರ ಗುಂಪು ಶಿವರಾತ್ರಿ ಹಬ್ಬದ ಆಚರಣೆಗಾಗಿ ಚಂದಾ ಕೇಳಲು ಬಂದಿತ್ತು. ಈ ವೇಳೆ ಅಂಗಡಿಯಲ್ಲಿ ಮಾಲೀಕರು ಇರಲಿಲ್ಲ. ಅಂಗಡಿಯಲ್ಲಿದ್ದ ಮಹೇಶ್ ಎಂಬ ಯುವಕ, 'ಮಾಲೀಕರು ಈಗ ಇಲ್ಲ, ಅವರು ಬಂದ ಮೇಲೆ ಬನ್ನಿ ಅಥವಾ ಅವರೊಂದಿಗೆ ಮಾತನಾಡಿ ಹಣ ಪಡೆಯಿರಿ' ಎಂದು ಸೌಜನ್ಯದಿಂದಲೇ ಹೇಳಿದ್ದಾರೆ. ಆದರೆ, ಇಷ್ಟಕ್ಕೇ ಕೋಪಗೊಂಡ ಆ ಪುಂಡರ ಗುಂಪು, ಈಗಲೇ ಹಣ ಕೊಡಬೇಕು, ನಾವು ಕೇಳಿದಷ್ಟು ಕೊಡಬೇಕು ಎಂದು ದಬಾಯಿಸಲು ಶುರುಮಾಡಿದೆ.

ಮಾತಿಗೆ ಮಾತು ಬೆಳೆದು ಚಾಕು ಇರಿತ:

ಯುವಕ ಮಹೇಶ್ ಮತ್ತು ಚಂದಾ ವಸೂಲಿ ಮಾಡಲು ಬಂದವರ ನಡುವೆ ವಾಗ್ವಾದ ಜೋರಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಯುವಕರ ಗುಂಪು ಏಕಾಏಕಿ ಮಹೇಶ್ ಮೇಲೆ ಮುಗಿಬಿದ್ದಿದೆ. ಈ ವೇಳೆ ಗುಂಪಿನಲ್ಲಿದ್ದ ಓರ್ವ ತನ್ನ ಬಳಿಯಿದ್ದ ಚಾಕುವಿನಿಂದ ಮಹೇಶ್ ಅವರ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಹಲ್ಲೆಯಿಂದಾಗಿ ಮಹೇಶ್ ತೀವ್ರವಾಗಿ ಗಾಯಗೊಂಡಿದ್ದು, ರಕ್ತಸ್ರಾವವಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳುವನ್ನು ರಕ್ಷಿಸಿ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ:

ಪುಂಡರು ಅಂಗಡಿಗೆ ನುಗ್ಗಿ ದರ್ಪ ತೋರುವುದು, ವಾಗ್ವಾದ ನಡೆಸುವುದು ಮತ್ತು ನಂತರ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಹಬ್ಬದ ಹೆಸರಿನಲ್ಲಿ ನಡೆಯುವ ಇಂತಹ ಗೂಂಡಾಗಿರಿಯನ್ನು ಕಂಡು ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಬಲವಂತದ ಚಂದಾ ವಸೂಲಿಯಿಂದ ವ್ಯಾಪಾರಿಗಳು ಹೈರಾಣಾಗಿದ್ದು, ಇದೀಗ ಪ್ರಾಣದ ಮೇಲೆಯೇ ಸಂಚಕಾರ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ದೂರು ದಾಖಲು:

ಘಟನೆಗೆ ಸಂಬಂಧಿಸಿದಂತೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಬ್ಬದ ನೆಪದಲ್ಲಿ ಹಫ್ತಾ ವಸೂಲಿಯಂತೆ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸಿಎಲ್ ಆಡಲು ಅಭಿಮಾನಿಗಳಿಗೂ ಅವಕಾಶ: 'ಕರ್ನಾಟಕ ಬುಲ್ಡೋಜರ್ಸ್' ತಂಡ ಸೇರಲು ಗಲ್ಲಿ ಕ್ರಿಕೆಟಿಗರಿಗೂ ಕಿಚ್ಚನ ಆಹ್ವಾನ!
ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!