ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ, ಹಾಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಬೆಂಗಳೂರು (ಡಿ.30): ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರ ಇಲ್ಲ. ಅವರ ಹೆಸರು ಡೆತ್‌ನೋಟ್‌ನಲ್ಲಿ ಬರೆದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಗಳಿಗೆ ಪ್ರತಿಕ್ರಿಯಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಯಾರದೋ ಹೆಸರು ಬರೆದಾಕ್ಷಣ ಯಾವ ಆಧಾರವೂ ಇಲ್ದೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಸಾಧ್ಯವಿಲ್ಲ. ಈ ಪ್ರಕರಣ ಸಿಬಿಐಗೆ ವಹಿಸುವ ಪ್ರಶ್ನೆ ಇಲ್ಲ. ಕಾನೂನು ಪ್ರಕಾರ ಹೇಗೆ ತನಿಖೆ ನಡೆಸಬೇಕೋ ಹಾಗೆ ನಡೆಯುತ್ತೆ ಎಂದರು.
ರಾಜ್ಯ ಸರ್ಕಾರ, ಪೊಲೀಸರ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ: ಸಿಬಿಐ ತನಿಖೆಗೆ ಒತ್ತಾಯಿಸಿದ ಸಚಿನ್ ಕುಟುಂಬ
ಇನ್ನು ಡಿಕೆ ಶಿವಕುಮಾರ್ ಆರೋಪಿ ರಾಜು ಕುಪನೂರು ಜೊತೆ ಇರುವ ಫೋಟೋ ಬಿಜೆಪಿ ಬಿಡುಗಡೆ ಮಾಡಿದ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋಡ್ರಿ ನನ್ನ ಜೊತೆಗೆ ವಿಜಯೇಂದ್ರಾನು ಇದಾನೆ, ಯಡಿಯೂರಪ್ಪ ಅವರು ಇದಾರೆ. ಬೇಕಾದಷ್ಟು ಜನ ನನ್ನ ಜೊತೆಗೆ ಫೋಟೋ ತೆಗೆಸಿಕೊಂಡವರು ಇದ್ದಾರೆ. ನಮ್ಮ ಮನೆಗೆ ಬಂದವರದೆಲ್ಲ ಫೋಟೋಗಳು ಇವೆ. ಹಾಗಾದ್ರೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಪೋಟೋ ಬಿಡುಗಡೆ ಮಾಡೋಣ್ವಾ? ಎಂದು ಟಾಂಗ್ ನೀಡಿದರು. ಮುಂದುವರಿದು, ಯಾರಾರದ್ದೋ ಎಂತೆಂಥ ಕ್ರಿಮಿಗಳ ಫೋಟೋ ಇವೆ ಬೇಕಾ? ನಾವು ಮದುವೆಗೆ ಹೋದಾಗ ಜನ ಅಡ್ಡ ಬಂದು ಫೋಟೋ ತೆಗೆದುಕೊಳ್ತಾರೆ. ಎಲ್ಲ ಲೀಡರ್ಸ್ ಜೊತೆಗೆ ಫೋಟೋ ತೆಗೆಸಿಕೊಳ್ತಾರೆ. ಏನಾದರೂ ಆಫಿಷಿಯಲ್ ಆಗಿ ಮಾತಾಡಿದ್ರೆ ವ್ಯವಹಾರ ಮಾಡಿದ್ರೆ ಒಪ್ಪಿಕೊಳ್ಳೋಣ, ನಮ್ದು ಕ್ಲೀನ್ ಗವರ್ನಮೆಂಟ್. ಪಾಪ ಅವರಿಗೆ ಏನೂ ಮಾತಾಡೋಕೆ ಇಲ್ಲ ಅದಕ್ಕೆ ಇಂಥ ವಿಚಾರದಲ್ಲಿ ಮಾತಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಮುತ್ತಿಗೆ ಬೇಕಾದ್ರೂ ಹಾಕಿಕೊಳ್ಳಲಿ ನನ್ನ ಹೇಳಿಲ್ವಾ? ರಾಜರಾಜೇಶ್ವರಿನಗರ ಕೇಸ್ ಸಹ ಸಿಬಿಐಗೆ ಕೊಡೋಣ. ಬಿಜೆಪಿಯವರು ನಂದು ಒಬ್ಬಂದು ಮಾತ್ರವೇ ಸಿಬಿಐಗೆ ಕೊಟ್ಟಿದ್ರು. ನಾವು ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ ರವಿ ಪ್ರಕರಣದಲ್ಲಿ ಜಾರ್ಜ್ ಸೇರಿದಂತೆ 12 ಕೇಸ್ ಸಿಬಿಐಗೆ ಕೊಟ್ಟಿದ್ದೇವೆ. ಆದ್ರೆ ಬಿಜೆಪಿಯವರು ನನ್ನೊಬ್ಬನ ಕೇಸ್ ಮಾತ್ರ ಸಿಬಿಐಗೆ ಕೊಟ್ಟಿದ್ರು. ಬೇರೆ ಕೇಸ್ ಇತ್ತಲ್ವ? ಅದನ್ನ ಸಿಬಿಐಗೆ ಯಾಕೆ ಕೊಡ್ಲಿಲ್ಲ? ಮಂತ್ರಿಗಳು, ಶಾಸಕರು ಮೇಲೆ ಕೇಸ್‌ಗಳು ಬಹಳ ಇದ್ವು ಅವರು ಯಾಕೆ ಕೊಡ್ಲಿಲ್ಲ? ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ:
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ಇಲ್ಲ. ಅದರ ಎಲ್ಲಿಯೂ ಹೆಸರು ಬರೆದಿಲ್ಲ. ಹೀಗಿರುವಾಗ ರಾಜೀನಾಮೆ ಯಾಕೆ ಕೊಡಬೇಕು, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಬಿಜೆಪಿಯವರಿಗೆ ಪ್ರಿಯಾಂಕ ಖರ್ಗೆ ಮೇಲೆ ಅಸೂಯೆ ಇದೆ. ಒಬ್ಬ ದಲಿತ ಸಮುದಾಯದ ನಾಯಕ ಐಟಿಬಿಟಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಅದನ್ನು ಬಿಜೆಪಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಎಸ್‌ಎಂ ಕೃಷ್ಣ ನಂತ್ರ ಐಟಿ ಬಿಟಿ ವಲಯದಲ್ಲಿ ಪ್ರಿಯಾಂಕ್ ಖರ್ಗೆ ಕೆಲಸ ಸದ್ದು ಮಾಡ್ತಿದೆ. ಇಂದು ಮಾರ್ಕೆಟಿಂಗ್ ಬರ್ತಿದೆ ಅಂದ್ರೆ ಅದಕ್ಕೆ ಪ್ರಿಯಾಂಕ ಖರ್ಗೆ ಕಾರಣ. ಹೀಗಾಗಿ ಅದನ್ನು ಸಹಿಸಿಕೊಳ್ಳೋಕಾಗದೆ ಬಿಜೆಪಿಯವರು ರಾಜೀನಾಮೆ ಕೇಳ್ತಿದ್ದಾರೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.