ಬಿಡದಿ ಟೌನ್‌ಶಿಪ್: ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ ಡಿಕೆಶಿ; ರೈತರಿಗೆ ಪರಿಹಾರ, ಚರ್ಚೆಗೆ ಸಿದ್ಧ

Kannadaprabha News   | Kannada Prabha
Published : May 21, 2026, 10:09 AM IST
DK Shivakumar vs HD Kumaraswamy

ಸಾರಾಂಶ

ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಚರ್ಚಿಸಲು ಕುಮಾರಸ್ವಾಮಿ ನೀಡಿದ ಪಂಥಾಹ್ವಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದಾರೆ. ರೈತರೊಂದಿಗೆ ಸಭೆ ನಡೆಸಿ, ಜೂನ್ ಮೊದಲ ವಾರದಿಂದ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದು, ಈ ಯೋಜನೆ ಕುಮಾರಸ್ವಾಮಿ ಕಾಲದಲ್ಲೇ ಆರಂಭವಾಗಿದ್ದನ್ನು ನೆನಪಿಸಿದ್ದಾರೆ.

ಬೆಂಗಳೂರು (ಮೇ.21): ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಚರ್ಚಿಸಲು ಕುಮಾರಸ್ವಾಮಿ ಅವರು ನೀಡಿರುವ ಪಂಥಾಹ್ವಾನವನ್ನು ನಾನು ಸ್ವೀಕರಿಸಿದ್ದು, ಯಾವತ್ತು ಸಮಯ ನಿಗದಿ ಮಾಡುತ್ತಾರೋ ಅಂದು ನಾನು ಸಿದ್ಧನಿದ್ದೇನೆ. ಜಾಗ ಮತ್ತು ಸಮಯ ಅವರೇ ನಿಗದಿ ಮಾಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ಕುಮಾರಪಾರ್ಕ್‌ನಲ್ಲಿನ ಸರ್ಕಾರಿ ನಿವಾಸದಲ್ಲಿ ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಆ ಭಾಗದ ರೈತರೊಂದಿಗೆ ಡಿ.ಕೆ. ಶಿವಕುಮಾರ್‌ ಸಭೆ ನಡೆಸಿ ಯೋಜನೆ ಕುರಿತು ವಿವರಣೆ ನೀಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಿರುವ ರೈತರಿಗೆ ಜೂನ್‌ ಮೊದಲ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮ ವಹಿಸುತ್ತೇನೆ. ಮೂರು-ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾದ ಅಂತಿಮ ಅಧಿಸೂಚನೆ ಮಾಡಬೇಕು ಎಂದೂ ನಾವು ತೀರ್ಮಾನಿಸಿದ್ದೇವೆ. ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಅಲ್ಲಿ ಶೇ.80ರಷ್ಟು ರೈತರು ಭೂಮಿ ನೀಡಲು ಒಪ್ಪಿದ್ದು, ಆದಷ್ಟು ಬೇಗ ಪರಿಹಾರ ವಿತರಿಸಿ ಎಂದೂ ಒತ್ತಾಯಿಸಿದ್ದಾರೆ ಎಂದು ವಿವರಿಸಿದರು.

ಯೋಜನೆಯಲ್ಲಿ ಭೂ ಸ್ವಾಧಿನ ಪರಿಹಾರ ನೀಡಲು ಮತ್ತು ಇತರ ವೆಚ್ಚಗಳಿಗಾಗಿ ಸರ್ಕಾರ ಪ್ರತಿ ಎಕರೆಗೆ 5 ಕೋಟಿ ರು. ಬಂಡವಾಳ ಹಾಕುತ್ತಿದೆ. ಇಲ್ಲಿಗೆ ಮೆಟ್ರೋ ಸಂಪರ್ಕ ನೀಡಬಹುದೇ ಎಂಬ ಬಗ್ಗೆ ಸರ್ವೇ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ನೈಸ್‌ ರಸ್ತೆ, ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸಲಾಗುವುದು. ಜಲಮಂಡಳಿಯಿಂದ ನೀರು ಒದಗಿಸಲಾಗುವುದು. ಜೂ.30ರೊಳಗೆ ಎಲ್ಲ ಅಧಿಸೂಚನೆ ಹೊರಡಿಸಿ, ಭೂಮಿ ನೀಡುವವರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುತ್ತೇವೆ. ಒಪ್ಪಿಗೆ ನೀಡದವರಿಗೆ ಕೋರ್ಟ್‌ನಲ್ಲಿ ಠೇವಣಿ ಇಟ್ಟು ಕೆಲಸ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರ ಸವಾಲಿನ ಕುರಿತು ಮಾತನಾಡಿ, ನಾನು ಅವರಿಗಿಂತ ದುರ್ಬಲನಾಗಲಿ, ಅವರೇ ಶಕ್ತಿವಂತರಾಗಲಿ. ಬಂಡೆಗಿಂತ ಕಬ್ಬಿಣ ಗಟ್ಟಿಯಲ್ಲವೇ? ಅದರಿಂದಲೇ ಬಂಡೆ ಒಡೆಯುವುದು. ಈ ಹಿಂದೆಯೂ ಅವರು ಪಂಥಾಹ್ವಾನ ನೀಡಿದ್ದರು. ಅದನ್ನು ಸಾತನೂರಿನಲ್ಲಿ ಸ್ವೀಕಾರ ಮಾಡಿದ್ದೆ. ಈಗಲೂ ಅವರು ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಚರ್ಚಿಸಲು ಪಂಥಾಹ್ವಾನ ನೀಡಿದ್ದಾರೆ. ಈಗಲೂ ಗೌರವ, ನಮ್ರತೆಯಿಂದ ಸಿದ್ಧನಿದ್ದೇನೆ. ಯಾವುದೇ ಅಸಂಬದ್ಧ ಪದಗಳನ್ನು ಬಳಸದೆ ನಾನು ಮಾತನಾಡುತ್ತೇನೆ. ಮಾಧ್ಯಮದವರೂ ಈ ಚರ್ಚೆಗೆ ಸಿದ್ಧರಾಗಬೇಕು. ಮಾಗಡಿ ಶಾಸಕರಾದ ಬಾಲಕೃಷ್ಣ ಅವರೂ ಬರುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಪಂಥಾಹ್ವಾನದ ಬಗ್ಗೆ ರೈತರಿಗೆ ಹೇಳಿದಾಗ, ನಾವೇ ಅದನ್ನು ಸ್ವೀಕರಿಸುತ್ತೇವೆ. ಅವರಿಗೆ ನಾವೇ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ. ಕಬ್ಬಿಣ, ಸ್ಟೀಲ್‌ ಬೆಲೆ ಟನ್‌ಗೆ 5 ಸಾವಿರ ರು. ಹೆಚ್ಚಳವಾಗಿದೆ. ಕುಮಾರಸ್ವಾಮಿ ಅವರು ಮೊದಲು ಅದನ್ನು ಕಡಿಮೆ ಮಾಡಿ ನಂತರ ಪಂಥಾಹ್ವಾನಕ್ಕೆ ಬರಲಿ ಎಂದು ರೈತರು ಹೇಳುತ್ತಿದ್ದಾರೆ. ಬಡವರು ಮನೆ ಕಟ್ಟಲು ಆಗುತ್ತಿಲ್ಲ. ಕುಮಾರಸ್ವಾಮಿ ಅವರು ಬಡವರಿಗೆ ಸಹಾಯ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ. ರಾಜ್ಯದ ಬಡ ಜನರ ಪರವಾಗಿ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಂದರು.

ಈ ಯೋಜನೆ ಮಾಡಿದ್ದು ನಾನಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ನೋಟಿಫಿಕೇಷನ್ ಮಾಡಲಾಗಿತ್ತು. ಅವರ ಕಾಲದಲ್ಲೇ ಭೂಮಿಗೆ ಬದಲಾಗಿ 8 ಸಾವಿರ ಅಡಿ ಅಭಿವೃದ್ಧಿ ಭೂಮಿ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಯೋಜನೆಯನ್ನು ಡಿಎಲ್‌ಎಫ್‌ ಸಂಸ್ಥೆಗೆ ನೀಡಿದ್ದರು. ಆ ಸಂಸ್ಥೆ ಯೋಜನೆ ಕಾರ್ಯಸಾಧುವಲ್ಲ ಎಂದು ಹಣ ಹಿಂಪಡೆದಿದ್ದರು. ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಕೆಐಎಡಿಬಿ 1 ಸಾವಿರ ಎಕರೆ ತೆಗೆದುಕೊಂಡಿದ್ದರು. ಆಗ ಯಾರೂ ಮಾತನಾಡಲಿಲ್ಲ. ಆಗ ರೈತರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ. ನಾನೇ ಮಾಡಿಸಿದ್ದು, ಈಗ ಏನೂ ಮಾಡಲಾಗದು ಎಂದಿದ್ದರಂತೆ ಎಂದು ಹೇಳಿದರು.

ಯೋಜನೆ ವಿರುದ್ಧ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ದೇವೇಗೌಡ ಅವರು ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ದೇವೇಗೌಡ ಅವರು ಮೋದಿ ಅವರಿಗೆ ಪತ್ರ ಬರೆಯಬೇಕು. ನಮ್ಮ ನಾಯಕರಿಗೆ ಪತ್ರ ಬರೆದರೆ ಏನು ಪ್ರಯೋಜನ? ರಾಹುಲ್‌ ಗಾಂಧಿ ಅವರು ಅಧಿಕಾರದಲ್ಲಿಲ್ಲ. ಇನ್ನು, ರಿಯಲ್‌ ಎಸ್ಟೇಟ್‌ ಮಾಡಿದವರು ಯಾರು? ಡಿಎಲ್‌ಎಫ್‌ಗೆ ಮಾರಿದವರು ಯಾರು? ದೇವೇಗೌಡ ಅವರ ಮಗ ಪಂಥಾಹ್ವಾನ ನೀಡಿದ್ದಾರೆ. ಅವರ ಜತೆ ದೇವೇಗೌಡ ಅವರೂ ಚರ್ಚೆಗೆ ಬರಲಿ ಎಂದರು.

ಹುಡುಗನಿಗೆ ಉತ್ತರಿಸಲ್ಲ: ನಿಖಿಲ್‌ಗೆ ಡಿಕೆಶಿ ಟಾಂಗ್‌

136 ಶಾಸಕರಿದ್ದರೂ ಏನು ಮಾಡಿದ್ದೀರಿ ಎಂದು ನಿಖಿಲ್‌ ಕುಮಾರಸ್ವಾಮಿ ಕೇಳಿರುವ ಪ್ರಶ್ನೆ ಕುರಿತಂತೆ ಮಾತನಾಡಿ, ಆ ಹುಡುಗನಿಗೆ ಉತ್ತರ ನೀಡುವುದಕ್ಕೆ ನನಗೆ ಇಷ್ಟವಿಲ್ಲ. ಆತನಿಗೆ ಉತ್ತರ ಕೊಡಲು ಸ್ಥಳೀಯ ನಾಯಕರಿದ್ದಾರೆ. ನನಗೆ ಅವರ ಸ್ಟೇಟಸ್‌ ಏನು ಎಂದು ತಿಳಿದಿಲ್ಲ. ಪಕ್ಷದ ಅಧ್ಯಕ್ಷರಾದ ಮೇಲೆ ಉತ್ತರ ನೀಡಬಹುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ಪ್ರವೇಶ ವಯೋಮಿತಿ ಸಡಿಲಿಕೆ ವಿಚಾರ: ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ಮಹತ್ವದ ಸೂಚನೆ!
ಮುಸ್ಲಿಂ ಪ್ರೇಮಿಯೊಂದಿಗೆ ಇರುವೆ ಎಂದ ಸಿಖ್ ಮಗಳು, ಮಾನಸಿಕ ಆರೋಗ್ಯ ಪರೀಕ್ಷೆಗೆ ತಾಯಿ ಕೋರಿದ್ದ ಅರ್ಜಿ ವಜಾ