ಬೆಸ್ಕಾಂ ಗುತ್ತಿಗೆ ಸ್ಥಳೀಯರ ಬದಲು ದೊಡ್ಡ ಕಂಪ​ನಿ​ಗೆ?

By Kannadaprabha NewsFirst Published Oct 9, 2020, 8:01 AM IST
Highlights

900 ಕೋಟಿ ರು. ಬೃಹತ್‌ ಪ್ಯಾಕೇಜ್‌ ಟೆಂಡ​ರ್‌| ಸ್ಥಳೀಯ ಗುತ್ತಿ​ಗೆ​ದಾ​ರರ ವಿರೋ​ಧ| ಸ್ಥಳೀಯರಿಗೆ ಅನ್ಯಾಯ| ಹೈಕೋ​ರ್ಟ್‌ಗೆ ಮೊರೆ| ಅ.26ರಂದು ಬೆಂಗ​ಳೂ​ರಲ್ಲಿ ಬೃಹತ್‌ ಪ್ರತಿ​ಭ​ಟ​ನೆ| ಪ್ಯಾಕೇ​ಜ್‌ ಬದಲು ತುಂಡು ಗುತ್ತಿ​ಗೆಗೆ ಆಗ್ರ​ಹ| 

ಬೆಂಗಳೂರು(ಅ.09): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) 1 ಲಕ್ಷ ರು.ಗಳಿಂದ 5 ಲಕ್ಷ ರು.ವರೆಗಿನ ವಿದ್ಯುತ್‌ ಪೂರೈಕೆ ಸುಧಾರಣೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡದೆ ಉಳ್ಳವರಿಗೆ (ದೊಡ್ಡ ಕಂಪ​ನಿ​ಗ​ಳಿ​ಗೆ​) ನೀಡುವ ಸಲುವಾಗಿ ಬೆಸ್ಕಾಂನ 18 ವಲಯಗಳಲ್ಲಿ 900 ಕೋಟಿ ರು. ಮೊತ್ತದ ಪ್ಯಾಕೇಜ್‌ ಟೆಂಡರ್‌ ಆಹ್ವಾನಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ಮೂಲಕ ಸಣ್ಣ ಪುಟ್ಟಗುತ್ತಿಗೆದಾರರು ಟೆಂಡರ್‌ ಪಡೆಯದಂತೆ ಮಾಡಿ ಬೆಸ್ಕಾಂ ಸಂಸ್ಥೆಯು ಕಾರ್ಪೊರೇಟ್‌ ಹಾಗೂ ಬೃಹತ್‌ ಕಂಪೆನಿಗಳಿಗೆ ನೂರಾರು ಕೋಟಿ ರು. ಪ್ಯಾಕೇಜ್‌ ನೀಡುತ್ತಿದೆ. ಇದರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿರುವ 2 ಸಾವಿರಕ್ಕೂ ಹೆಚ್ಚು ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರು ಬೀದಿಗೆ ಬೀಳಲಿದ್ದಾರೆ. ಅಲ್ಲದೆ, ಅವರ ಜೊತೆಯ ಕಾರ್ಮಿಕರು ಸೇರಿ 14 ಸಾವಿರ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘವು ಆರೋಪಿಸಿದೆ. ಅಲ್ಲದೆ, ಈ ಬಗ್ಗೆ ಹೋರಾಟ ನಡೆಸಲು ಹೈಕೋರ್ಟ್‌ ಮೆಟ್ಟಿಲು ಏರಿದೆ. ಜೊತೆಗೆ, ಅ.26 ರಂದು ಬೆಸ್ಕಾಂ ಕ್ರಮ ಖಂಡಿಸಿ ಕಾವೇರಿ ಭವನದ ಆವರಣದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ತುಂಡು ಗುತ್ತಿಗೆ ನೀಡಿ:

ಈ ಹಿಂದೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿಭಾಗವಾರು ಕಾಮಗಾರಿಗಳನ್ನು ಎಸ್‌.ಆರ್‌. ದರ ಅಥವಾ ಟೆಂಡರ್‌ ಮೂಲಕ ತುಂಡು ಗುತ್ತಿಗೆಗಳನ್ನಾಗಿ ಮಾಡಿ ಅನುಮತಿ ಪಡೆದ ಸ್ಥಳೀಯ ಗುತ್ತಿಗೆದಾರರಿಗೆ ನೀಡಲಾಗುತ್ತಿತ್ತು. ಆದರೆ, ಬೆಸ್ಕಾಂ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ 900 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್‌ ಗುತ್ತಿಗೆ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಅ.14 ರಂದು ಪ್ರಿ ಬಿಡ್ಡಿಂಗ್‌ ಸಭೆ ಕರೆದಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರರು ಆರೋಪಿಸಿದ್ದಾರೆ.

ಎಸ್ಕಾಂ ಖಾಸಗೀಕರಣ: ಕೇಂದ್ರದ ಪ್ರಸ್ತಾವ ತಿರಸ್ಕರಿಸಲು ರಾಜ್ಯ ಇಂಧನ ಇಲಾಖೆ ನಿರ್ಧಾರ!

ಪ್ಯಾಕೇಜ್‌ ಗುತ್ತಿಗೆದಾರರಿಂದ ದೌರ್ಜನ್ಯ:

ಪ್ಯಾಕೇಜ್‌ ಟೆಂಡರ್‌ ಪಡೆದ ಗುತ್ತಿಗೆದಾರರು ಸ್ಥಳೀಯ ಗುತ್ತಿಗೆದಾರರಿಗೆ ಎಸ್‌.ಆರ್‌. ದರಕ್ಕಿಂತ ಕಡಿಮೆ ಹಣ ನೀಡಿ ಕಾರ್ಮಿಕರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ರು. ಟೆಂಡರ್‌ ಪಡೆದರೂ ಅವರೂ ಸಹ ಸ್ಥಳೀಯ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಿ ಕೆಲಸ ಮಾಡುತ್ತಾರೆ. ಇದರಿಂದ ಬೆಸ್ಕಾಂ ಹಾಗೂ ಸ್ಥಳೀಯ ಗುತ್ತಿಗೆದಾರರು ಇಬ್ಬರಿಗೂ ಲಾಭವಾಗದೆ ಉಳ್ಳವರಿಗೆ ಲಾಭವಾಗಲಿದೆ ಎಂದು ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ನಗರ ಅಧ್ಯಕ್ಷ ಎಂ. ಸುರೇಶ್‌ ದೂರಿದ್ದಾರೆ.

ಬೆಸ್ಕಾಂ ಹೇಳೋ​ದೇ​ನು?

ಈ ಬಗ್ಗೆ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಅಶೋಕ್‌ ಕುಮಾರ್‌, ‘ಕಾಮಗಾರಿಗಳು ತ್ವರಿತವಾಗಿ ನಡೆಯಲಿ ಹಾಗೂ ಪದೇ ಪದೇ ಗುತ್ತಿಗೆ ಕರೆಯುವ ಗೊಂದಲ ಉಂಟಾಗದಿರಲಿ ಎಂಬ ಉದ್ದೇಶದಿಂದ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದೆ. ಪ್ಯಾಕೇಜ್‌ ಟೆಂಡರ್‌ ಕಳೆದ 8-10 ವರ್ಷಗಳಿಂದಲೂ ಕರೆಯುತ್ತಿದ್ದೇವೆ. ಇದರಿಂದ ಯಾವ ಗುತ್ತಿಗೆದಾರರಿಗೂ ಕೆಲಸ ಕಳೆದಂತೆ ಆಗುವುದಿಲ್ಲ. 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿ ಎಸ್‌.ಆರ್‌. ದರದಂತೆ ನೀಡುತ್ತೇವೆ. ಉಳಿದ ಕಾಮಗಾರಿಗಳ ಟೆಂಡರ್‌ನಲ್ಲೂ ಅವರು ಭಾಗವಹಿಸಬಹುದು’ ಎನ್ನುತ್ತಾರೆ.

ಗುತ್ತಿಗೆದಾರರ ಸಂಕಷ್ಟಮತ್ತಷ್ಟು ಹೆಚ್ಚಳ:

ಈ ಭಾಗದಲ್ಲಿ ಅಗತ್ಯವಿರುವ ವಿದ್ಯುತ್‌ ಪೂರೈಕೆ ಸುಧಾರಣೆ, ನಿರ್ವಹಣೆ ಕಾಮಗಾರಿಗಳಿಗೆ ಈವರೆಗೆ ತುಂಡು ಗುತ್ತಿಗೆ ಕರೆದು ಎಸ್‌.ಆರ್‌. ದರ ಅಥವಾ ಗುತ್ತಿಗೆ ಮೂಲಕ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡಲಾಗುತ್ತಿತ್ತು. ಇದೀಗ 1 ರಿಂದ 5 ಲಕ್ಷದವರೆಗಿನ ಸಣ್ಣ ಪುಟ್ಟಕಾಮಗಾರಿಗಳನ್ನೂ ಸಹ ಪ್ಯಾಕೇಜ್‌ ಮಾಡಿ ದೊಡ್ಡ ದೊಡ್ಡ ಕಂಪೆನಿಗಳಿಗೆ ನೀಡಲು ಮುಂದಾಗಿದ್ದಾರೆ. ಇದರಿಂದ ಗುತ್ತಿಗೆದಾರರು ಹಾಗೂ ಅವರನ್ನು ನೆಚ್ಚಿಕೊಂಡಿರುವ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದೀಗ ಬೆಸ್ಕಾಂ ಕ್ರಮದಿಂದಾಗಿ ಇನ್ನೂ ಸಮಸ್ಯೆ ಎದುರಿಸುವಂತಾಗಲಿದೆ ಎಂದು ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ನಗರ ಅಧ್ಯಕ್ಷ ಎಂ. ಸುರೇಶ್‌ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಈ ಹಿಂದೆಯೇ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಇಷ್ಟಾದರೂ ಬೆಸ್ಕಾಂ ವ್ಯಾಪ್ತಿಯ 18 ವಿಭಾಗಗಳಲ್ಲಿ ನೆಲಮಂಗಲ ಉಪ ವಿಭಾಗ 50 ಕೋಟಿ ರು., ಹೊಸಕೋಟೆ 40 ಕೋಟಿ ರು., ರಾಮನಗರ 50 ಕೋಟಿ ರು., ಮಾಗಡಿ 40 ಕೋಟಿ ರು., ಕನಕಪುರ 35 ಕೋಟಿ ರು, ಚಂದಾಪುರ 60 ಕೋಟಿ ರು., ಕೋಲಾರ 50 ಕೋಟಿ ರು., ಕೆಜಿಎಫ್‌ 50 ಕೋಟಿ ರು., ಚಿಕ್ಕಬಳ್ಳಾಪುರ 40 ಕೋಟಿ ರು., ಚಿಂತಾಮಣಿ 40 ಕೋಟಿ ರು., ತುಮಕೂರು 40 ಕೋಟಿ ರು., ತಿಪಟೂರು 35 ಕೋಟಿ ರು., ಮಧುಗಿರಿ 40 ಕೋಟಿ ರು., ಕುಣಿಗಲ್‌ 35 ಕೋಟಿ ರು., ದಾವಣಗೆರೆ 150 ಕೋಟಿ ರು, ಹರಿಹರ 40 ಕೋಟಿ ರು., ಚಿತ್ರದುರ್ಗ 65 ಕೋಟಿ ರು., ಹಿರಿಯೂರು 40 ಕೋಟಿ ರು.,ಗಳಿಗೆ ಪ್ಯಾಕೇಜ್‌ ಗುತ್ತಿಗೆ ಕರೆಯಲಾಗಿದೆ.
 

click me!