
ಬೆಂಗಳೂರು (ಸೆ.24): ರಾಜಧಾನಿಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಪೊಲೀಸರ ತಲೆದಂಡ ಸರಣಿ ಮುಂದುವರೆದಿದ್ದು, ಮತ್ತೆ ಎಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಳೆದ ಎರಡು ವಾರ ಅಂತರದಲ್ಲಿ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪದ ಆರೋಪದ ಮೇರೆಗೆ ಮೂವರು ಪಿಐಗಳು ಸೇರಿದಂತೆ 16 ಪೊಲೀಸರ ತಲೆದಂಡವಾಗಿದೆ.
ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು:
ಹಲಸೂರು ಗೇಟ್ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ, ಹೆಡ್ ಕಾನ್‌ಸ್ಟೇಬಲ್ ಶ್ರೀನಿವಾಸ್ ಹಾಗೂ ಕಾನ್ ಸ್ಟೇಬಲ್ ನಾಗರಾಜ್ ಅಮಾನತುಗೊಂಡಿದ್ದು, ಇದೇ ಠಾಣೆ ಇನ್ಸ್‌ಪೆಕ್ಟರ್ ಹನುಮಂತ ಭಜಂತ್ರಿ ಸಹ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿ ಮುಚ್ಚಲು 5 ಲಕ್ಷ ಖರ್ಚು ಮಾಡ್ತಿದ್ಯಾ ಸರ್ಕಾರ?
ಕೆಲ ದಿನಗಳ ಹಿಂದೆ ವ್ಯಾಪಾರಿಯೊಬ್ಬರನ್ನು ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರು. ಹಣ ವಸೂಲಿಗೆ ಮಾಡಿದ ಆರೋಪ ಪಿಐ ಹನುಮಂತ ಭಜಂತ್ರಿ ಹಾಗೂ ಮೂವರು ಪೊಲೀಸರ ಮೇಲೆ ಬಂದಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪ ರುಜುವಾಯಿತು. ಅಂತೆಯೇ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚಿಂದ್ರ ಅವರ ವರದಿ ಆಧರಿಸಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶಿಸ್ತು ಕ್ರಮ ಜರುಗಿಸಿದ್ದಾರೆ.
ಹಲಸೂರು ಗೇಟ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಪೊಲೀಸರ ವಿರುದ್ಧ ಅಪರಾಧ ಪ್ರಕರಣಗಳ ಪತ್ತೆದಾರಿಕೆಯಲ್ಲಿ ಹಲವು ಲೋಪ ದೋಷಗಳು ಹಾಗೂ ಲಂಚ ಸ್ವೀಕಾರದ ಆರೋಪಗಳು ಸಹ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಹಿಂ.ವರ್ಗಗಳ ಆಯೋಗ ರಿಮೋಟ್ ಕಂಟ್ರೋಲ್ ಬೇರೆ ಇದೆ: ಚಲವಾದಿ ನಾರಾಯಣಸ್ವಾಮಿ
ಆಯುಕ್ತರ ಗಸ್ತು ವೇಳೆ ಪಿಐ ಬಣ್ಣ:
ಕಳೆದ ಶನಿವಾರ ರಾತ್ರಿ ಗಸ್ತಿನಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖುದ್ದು ಪಾಲ್ಗೊಂಡಿದ್ದರು. ಆಗ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೇಟಿ ನೀಡಿದಾಗ ನಿಯಮ ಉಲ್ಲಂಘಿಸಿ ಕೆಲ ಪಬ್‌ಗಳು ಧ್ವನಿವರ್ಧಕ ಬಳಸುತ್ತಿರುವುದು ಆಯುಕ್ತರ ಗಮನಕ್ಕೆ ಬಂದಿದೆ. ಅಲ್ಲದೆ ಆಯುಕ್ತರು ಗಸ್ತು ನಡೆಸಿದ ಪ್ರದೇಶದಲ್ಲೇ ಪಬ್‌ಗಳಿಂದ ಜೋರು ಶಬ್ಧ ಕೇಳಿ ಬಂದಿತ್ತು. ಈ ಬಗ್ಗೆ ಕೋರಮಂಗಲ ಇನ್ಸ್‌ಪೆಕ್ಟರ್ ಲೋಹಿ ರಾಮರೆಡ್ಡಿ ಅವರನ್ನು ಆಯುಕ್ತರು ವಿಚಾರಿಸಿದಾಗ ಸೂಕ್ತ ಉತ್ತರ ನೀಡದೆ ತಡಬಡಿಸಿದ್ದರು. ಕೊನೆಗೆ ಕರ್ತವ್ಯಲೋಪದ ಆರೋಪದ ಮೇರೆಗೆ ಪಿಐ ಅವರನ್ನು ಸೀಮಂತ್ ಕುಮಾರ್ ಸಿಂಗ್ ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ